ಮುಸ್ಲಿಮರಿಗೆ 2 ‘ಬಿ’ ಮೀಸಲಾತಿ ಪುನರ್ ಸ್ಥಾಪಿಸಲು ಒತ್ತಾಯ
ಬೆಂಗಳೂರು, ಎ.5: ಮುಸ್ಲಿಮ್ ಸಮುದಾಯವನ್ನು ಒಬಿಸಿಯಿಂದ ತೆಗೆದು ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಸೇರಿಸಿರುವರಿಂದ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಸಮುದಾಯ ಮತ್ತಷ್ಟು ಹಿಂದುಳಿಯಲಿದ್ದು, ಮುಸ್ಲಿಮರಿಗೆ ನೀಡಲಾಗುತ್ತಿದ್ದ 2 ‘ಬಿ’ ಮೀಸಲಾತಿಯನ್ನು ಪುನರ್ ಸ್ಥಾಪಿಸಿಬೇಕು ಎಂದು ವಿದ್ಯಾರ್ಥಿ ಸಂಘಟನೆಗಳು ಜಂಟಿ ಪತ್ರಿಕಾಗೋಷ್ಠಿ ನಡೆಸಿ ಒತ್ತಾಯಿಸಿದವು.
ಬುಧವಾರ ಪ್ರೆಸ್‍ಕ್ಲಬ್‍ನಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಎಸ್‍ಐಓ ರಾಜ್ಯಾಧ್ಯಕ್ಷ ಜೀಶಾ ಅಖಿಲ್, ‘ಕರ್ನಾಟಕದ ಸಚಿವ ಸಂಪುಟವು ಏಕಾಏಕಿಯಾಗಿ ಮುಸ್ಲಿಮರನ್ನು ಹಿಂದುಳಿದ ವರ್ಗ 2ಬಿ ಮೀಸಲಾತಿಯನ್ನು ರದ್ದುಗೊಳಿಸಿ ಅವರನ್ನು ಇಡಬ್ಲ್ಯೂಎಸ್ ಪ್ರವರ್ಗಕ್ಕೆ ಸೇರಿಸಿದೆ. ಇದು ಈ ಸಮುದಾಯಕ್ಕೆ ಮಾಡಿದ ಕಾನೂನು ಬದ್ಧ ಅಪಚಾರ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಚುನಾವಣೆ ಹಿನ್ನೆಲೆ ರಾಜ್ಯಕ್ಕೆ ಪದೇ ಪದೇ ಭೇಟಿ ನೀಡುತ್ತಿರುವ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ, ಈ ಇಂಡಿಯಾ ರೈಸಿಂಗ್ ಸಮ್ಮಿಟ್‍ನಲ್ಲಿ ಮಾತನಾಡುತ್ತಾ, ಮುಸ್ಲಿಮರಿಗೆ ಧರ್ಮಾಧಾರಿತ ಮೀಸಲಾತಿ ನೀಡಲಾಗುತ್ತಿದೆ ಎಂಬ ಸುಳ್ಳು ಮಾಹಿತಿಯನ್ನು ನೀಡುತ್ತಾರೆ. ಆದರೆ, ಆಂಧ್ರ ಪ್ರದೇಶದಲ್ಲಿ ಮುಸ್ಲಿಮರಿಗೆ ನೀಡಲಾಗುತ್ತಿದ್ದ ಮೀಸಲಾತಿಯನ್ನು ನ್ಯಾಯಾಲಯಗಳು ರದ್ದುಗೊಳಿಸಿದ್ದು, ಮೀಸಲಾತಿಯನ್ನು ನೀಡಲು ಪಾಲಿಸಬೇಕಿದ ಪ್ರಕ್ರಿಯೆಯನ್ನು ಪಾಲಿಸಲಾಗಿಲ್ಲ ಹಾಗೂ ಜನರು ಮತಾಂತರವಾಗುವ ಸಂಭವದ ಕಾರಣಗಳಿಗಾಗಿ, ಆದರೆ ಕರ್ನಾಟಕದಲ್ಲಿ ಇದಕ್ಕೆ ಬೇರೆಯದೇ ಹಿನ್ನಲೆಯಿದೆ ಎಂದು ತಿಳಿಸಿದರು.
ಯಾವುದೇ ಅಧ್ಯಯನವನ್ನು ಕೈಗೊಳ್ಳದ ಮತ್ತು ಯಾವ ಸಮಿತಿಯ ಶಿಫಾರಸ್ಸಿಲ್ಲದ ಮುಸ್ಲಿಮರಿಗೆ ಮೀಸಲಾತಿಯನ್ನು ಒದಗಿಸಲಾಗಿದೆ ಎಂದು ಹೇಳುತ್ತಿರುವುದು ಸುಳ್ಳು, ಇಲ್ಲಿವರೆಗೆ ಈ ಸುಳ್ಳು ಹೇಳಿಕೆಗಳು ಸಂಘ ಪರಿವಾರದ ವಾದಗಳಲ್ಲಿ ಮಾತ್ರವೇ ಬಿತ್ತರವಾಗುತ್ತಿದ್ದವು. ಈಗ ಸರಕಾರಿ ಆದೇಶಗಳ ಮೂಲಕವೇ ಬಿತ್ತರಗೊಳ್ಳುತ್ತಿದೆ. ಮಾತ್ರವಲ್ಲ, ಇದೇ ಸುಳ್ಳನ್ನು ಜವಾಬ್ದಾರಿಯುತ ಸ್ಥಾನದಲ್ಲಿರುವ ಮುಖ್ಯಮಂತ್ರಿಯೂ ಕೂಡ ನುಡಿಯುತ್ತಿದ್ದಾರೆ ಎಂದು ಜೀಶಾ ಅಖಿಲ್ ಆಪಾದಿಸಿದರು.
ಈ ನಿಟ್ಟಿನಲ್ಲಿ, ಎಲ್ಲಾ ವರ್ಗದ ವಿದ್ಯಾರ್ಥಿ ಸಂಘಟನೆಗಳು ಬಿಜೆಪಿ ಸರಕಾರದ ತನ್ನ ಆದೇಶವನ್ನು ಹಿಂಪಡೆಯಬೇಕೆಂದು ಆಗ್ರಹಿಸುತ್ತವೆ. ಇಲ್ಲದಿದ್ದಲ್ಲಿ, ಸಾಮಾಜಿಕ ನ್ಯಾಯದ ಪರಿಕಲ್ಪನೆಗೆ ಹಾಗೂ ಕರ್ನಾಟಕದ ಸಾಮಾಜಿಕ ನ್ಯಾಯದ ಇತಿಹಾಸಕ್ಕೆ ಧಕ್ಕೆಯಾಗಲಿದೆ. ಇದರಿಂದಾಗಿ ಬಿಜೆಪಿಯ ಅವನತಿಯ ಹಾದಿಯ ಪ್ರಾರಂಭವಾಗುತ್ತದೆ ಎಂದರು.
ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ನ್ಯಾಯ ಹಾಗೂ ಸಂವಿಧಾನಿಕ ಮೌಲ್ಯಗಳಾದ ಸಮಾನತೆ, ಸ್ವಾತಂತ್ರ ಹಾಗೂ ಭ್ರಾತೃತ್ವವನ್ನು ಗೌರವಿಸುವ ವಿದ್ಯಾರ್ಥಿ ಸಂಘಟನೆಗಳು ಚುನಾವಣೆ ಸನ್ನಿಹಿತವಾಗುತ್ತಿರುವ ಸಂದರ್ಭದಲ್ಲಿ ಒಂದು ಸಮುದಾಯವನ್ನು ಮತ್ತೊಂದರ ವಿರುದ್ಧ ಎತ್ತಿಕಟ್ಟಲು ಬಿಜೆಪಿಯು ನಡೆಸಿರುವ ಹುನ್ನಾರವನ್ನು ಅರಿತಿದ್ದೇವೆ ಹಾಗೂ ಕರ್ನಾಟಕದ ಜನತೆ, ಅದರಲ್ಲೂ ಮುಖ್ಯವಾಗಿ ವಿದ್ಯಾರ್ಥಿಗಳು ಈ ಕೋಮು ಸಂಚನ್ನು ಮೀರಿ ಕುವೆಂಪು ಸಾರಿದ ವಿಶ್ವಮಾನವತೆಯನ್ನು ಎತ್ತಿಹಿಡಯಲಿದ್ದಾರೆ. ನಮ್ಮೆಲ್ಲಾ ವಿದ್ಯಾರ್ಥಿ ಸಂಘಟನೆಗಳು, ಎಲ್ಲ್ಲ ಸಮುದಾಯಗಳ ಜೊತೆಗೆ ಹೆಜ್ಜೆಯನ್ನಿರಿಸುತ್ತಲೇ, ಮೀಸಲಾತಿಯನ್ನೂ ಹಾಗೂ ಆ ಮೂಲಕ ಸಾಮಾಜಿಕ ನ್ಯಾಯವನ್ನೂ, ಮುಸ್ಲಿಮರಿಗೆ ಮಾತ್ರವಲ್ಲದೇ ಕರ್ನಾಟಕದ ಪ್ರತಿಯೊಬ್ಬರ ಕೈಗೆಟಕುವಂತೆ ಮಾಡಲು ಪಣತೊಡುತ್ತೇವೆ ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ವಿವಿಧ ವಿದ್ಯಾರ್ಥಿ ಸಂಘಟನೆಗಳ ಮುಖಂಡರಾದ ಸರೋವರ ಬೆಂಕಿಕೆರೆ, ಚಂದ್ರು, ಪೆರಿಯಾರ, ಐಸಾ, ಶಶಾಂಕ್ ಮುಂತಾದವರು ಉಪಸ್ಥಿತರಿದ್ದರು.