×
Ad

ಉಡುಪಿ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ: ಕಾಂಗ್ರೆಸ್ ಟಿಕೆಟ್ ವಂಚಿತ ಕೃಷ್ಣಮೂರ್ತಿ ಆಚಾರ್ಯ ಘೋಷಣೆ

Update: 2023-04-06 20:03 IST

ಉಡುಪಿ, ಎ.6: ಶಾಸಕನಾಗಿ ನನ್ನ ಅಭಿಮಾನಿಗಳ ಸೇವೆ ಮಾಡಬೇಕೆಂದು ನನ್ನ ಜೀವನದ ಬಹಳ ದೊಡ್ಡ ಆಸೆ. ಆದರೆ ಹಲವು ವರ್ಷಗಳ ಕಾಲ ಪಕ್ಷಕ್ಕೆ ದುಡಿದವರನ್ನು ಬಿಟ್ಟು ನಿನ್ನೆ ಮೊನ್ನೆ ಬಂದವರಿಗೆ ಟಿಕೆಟ್ ನೀಡಲಾಗಿದೆ. ಆದುದರಿಂದ ನಾನು ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ. ನನಗೆ ಎಲ್ಲರ ಸಹಕಾರ ಬೇಕು. ನಾನು ಗೆಲವು ಸಾಧಿಸಿಯೇ ಸಿದ್ಧ ಎಂದು ಉಡುಪಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಕೃಷ್ಣಮೂರ್ತಿ ಆಚಾರ್ಯ ಕಿನ್ನಿಮುಲ್ಕಿ ತಿಳಿಸಿದ್ದಾರೆ.

ಉಡುಪಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಕೈ ತಪ್ಪಿರುವ ಹಿನ್ನೆಲೆ ಯಲ್ಲಿ ಕೃಷ್ಣಮೂರ್ತಿ ಆಚಾರ್ಯ ಅಭಿಮಾನಿ ಬಳಗದವರು ಇಂದು ಸಂಜೆ ನಗರದ ಮಥುರಾ ಛತ್ರದಲ್ಲಿ ನಡೆಸಿದ ಸಭೆಯಲ್ಲಿ ಅವರು ಮಾತನಾಡುತಿದ್ದರು.

ಕಾಂಗ್ರೆಸ್‌ನ ಬಿ ಫಾರ್ಮ್ ದೊರೆತರೆ ಸ್ಪರ್ಧೆಯಿಂದ ಹಿಂದೆ ಸರಿಯುತ್ತೇನೆ. ಪಕ್ಷವು ಆಗಿರುವ ತಪ್ಪನ್ನು ಸರಿಪಡಿಸಬೇಕು. ನನ್ನನ್ನು ರಾಜಕೀಯಕ್ಕೆ ಕರೆತಂದ ಆಸ್ಕರ್ ಫೆರ್ನಾಂಡಿಸ್ ಇವತ್ತು ಬದುಕಿದ್ದರೆ ನನಗೆ ಟಿಕೆಟ್ ಸಿಗುತ್ತಿತ್ತು ಎಂದು ಬಾವುಕರಾಗಿ ಹೇಳಿದರು.  

ಅಭಿಮಾನಿಗಳ ಸಹಕಾರದಿಂದ ಈ ಬಾರಿ ಚುನಾವಣೆ ಸ್ಪರ್ಧಿಸಬೇಕೆಂಬ ನಿರ್ಧಾರ ಮಾಡಿದ್ದೇನೆ. ಇದರಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ನಮಗೆ ಪಕ್ಷವೇ ದೊಡ್ಡದು. ಆದರೆ ಅನ್ಯಾಯ ಮಾಡಿದಾಗ ನಾವು ತೋರಿಸಿಕೊಡಬೇಕು. ನನ್ನ ಹೋರಾಟವನ್ನು ಮುಂದುವರೆಸುತ್ತೇನೆ. ಕಾಂಗ್ರೆಸ್ ಪಕ್ಷದ ಧ್ವಜ ಇಟ್ಟು ಕೊಂಡೇ ಪ್ರಚಾರಕ್ಕೆ ಹೋಗುತ್ತೇನೆ ಎಂದರು. 

ನಾನು ಹೋರಾಟ ಮಾಡಿ ಜಯಿಸಿದವನು. ನಾನು ಎಂದಿಗೂ ಎದುರು ಬಾಗಿಲಿನಿಂದ ಹೋಗುವವನೇ ಹೊರತು ಹಿಂದಿನ ಬಾಗಿಲಿನಿಂದ ಹೋಗುವ ವ್ಯಕ್ತಿ  ಅಲ್ಲ. 14 ವರ್ಷಗಳ ಕಾಲ ಡಿಕೆಶಿ ಅಭಿಮಾನಿ ಬಳಗದ ಅಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ. ಕೋಟ್ಯಂತರ ರೂಪಾಯಿ ಸಮಾಜಕ್ಕೆ ಕೊಟ್ಟಿದ್ದೇನೆ. ಈಗ ನನ್ನೊಂದಿಗೆ ಇರುವ ಯುವ ಸಮುದಾಯವೇ ನನಗೆ ದೊಡ್ಡ ಸಂಪತ್ತು ಎಂದು ಅವರು ತಿಳಿಸಿದರು. 

ಕಾಂಗ್ರೆಸ್ ಮುಖಂಡರಾದ ಸದಾನಂದ ಕಾಂಚನ್, ತಾಪಂ ಮಾಜಿ ಅಧ್ಯಕ್ಷೆ ಶ್ಯಾಮಲಾ ಸುಧಾಕರ್, ನಗರಸಭೆ ಮಾಜಿ ಅಧ್ಯಕ್ಷ ಯುವರಾಜ್, ಕಾಂಗ್ರೆಸ್‌ ಧ್ವನಿ ಬೆಳಕು ಸಂಘಟನೆಯ ಜಿಲ್ಲಾಧ್ಯಕ್ಷ ಶಿವರಾಜ್ ಮಲ್ಲಾರು, ನಗರಸಭೆ ಮಾಜಿ ಸದಸ್ಯ ಗಣೇಶ್ ಕೋಟ್ಯಾನ್ ಮಾತನಾಡಿದರು. 

ವೇದಿಕೆಯಲ್ಲಿ ಯುವ ಕಾಂಗ್ರೆಸ್ ಮಾಜಿ ಕಾರ್ಯದರ್ಶಿ ಜಯ ಶೆಟ್ಟಿ ಬನ್ನಂಜೆ, ಕಡೆಕಾರು ಗ್ರಾಪಂ ಉಪಾಧ್ಯಕ್ಷ ನವೀನ್ ಶೆಟ್ಟಿ, ಗ್ರಾಪಂ ಸದಸ್ಯರಾದ ಸತೀಶ್, ಜಯಕರ, ಸಂದೇಶ ಶೆಟ್ಟಿ, ಮುಖಂಡರಾದ  ಯಶೋಧರ್ ಮಲ್ಪೆ, ಉಮಾನಾಥ್ ಶೇರಿಗಾರ್, ಗಣೇಶ್‌ರಾಜ್ ಸರಳಬೆಟ್ಟು ಮೊದಲಾದವರು ಉಪಸ್ಥಿತರಿದ್ದರು.

Similar News