×
Ad

ಬೆಂಗಳೂರು ಮಾರುಕಟ್ಟೆಗೆ ಅಮೂಲ್‌ ಪ್ರವೇಶ: ನಂದಿನಿ ಶವಪೆಟ್ಟಿಗೆಗೆ ಮತ್ತೊಂದು ಮೊಳೆ ಎಂದ ನೆಟ್ಟಿಗರು

Update: 2023-04-06 20:20 IST

ಬೆಂಗಳೂರು: ತನ್ನ ಹಾಲು ಉತ್ಪನ್ನಗಳನ್ನು ಕರ್ನಾಟಕದಲ್ಲಿ ಮಾರುಕಟ್ಟೆಯಲ್ಲಿ ವಿಸ್ತರಿಸಿಕೊಳ್ಳುತ್ತಿರುವ ಅಮೂಲ್‌ಗೆ (Amul) ನೆಟ್ಟಿಗರು ಆಕ್ಷೇಪ ಎತ್ತಿದ್ದಾರೆ. ರಾಜ್ಯದಲ್ಲಿ ನಂದಿನಿ ಇರುವಾಗ ಅಮೂಲ್‌ ಇಲ್ಲಿನ ಮಾರುಕಟ್ಟೆಯಲ್ಲಿ ಬೇಕಾಗಿಲ್ಲ ಎಂದು ಹಲವು ನೆಟ್ಟಿಗರು ಅಭಿಪ್ರಾಯಿಸಿದ್ದಾರೆ. 

“ನಂದಿನಿಯ ಶವಪೆಟ್ಟಿಗೆಗೆ ಇನ್ನೂ ಒಂದು ಮೊಳೆ. ಕೆಎಂಎಫ್‌ (KMF ) ನಿದ್ರಿಸುತ್ತಿರುವ ಹೊತ್ತಿನಲ್ಲಿ ಪರಸ್ಪರ ಆಧಿಪತ್ಯ ಹೊಂದಿರುವಲ್ಲಿ ಸ್ಪರ್ಧೆಗೆ ಇಳಿಯಬಾರದು ಎಂಬ ಅಲಿಖಿತ ನಿಯಮವನ್ನು, ಅಮುಲ್‌ ಮುರಿಯುತ್ತಿದೆ. ಬೆಂಗಳೂರಿನ ವಸತಿ ಸಮುಚ್ಚಯಗಳ ಅಮುಲ್‌ ಹಾಲು ಮತ್ತು ಮೊಸರಿನಿಂದ ತುಂಬಲಿವೆ. ಕನ್ನಡಿಗೇತರರು ಇದಕ್ಕೆ ಮಣೆ ಹಾಕಲಿದ್ದಾರೆ. ಕೆಎಂಎಫ್‌ ಈ ಹಿಂದೆಯೇ ವಿಫಲಗೊಳಿಸಿದ್ದ ಅಮುಲ್‌ನ ಹಳೆಯ ಯೋಜನೆಯಿದು” ಎಂದು ಪತ್ರಕರ್ತ, ಬರಹಗಾರ ಎಸ್‌.ಶ್ಯಾಮ್‌ ಪ್ರಸಾದ್‌ ಟ್ವೀಟ್‌ ಮಾಡಿದ್ದಾರೆ. 

“ಅಮುಲ್ ಕರ್ನಾಟಕಕ್ಕೆ ಪ್ರವೇಶಿಸಲು ಸುಲಭವಾಗುವಂತೆ ನಂದಿನಿಗೆ ಕೃತಕ ಅಭಾವ ಸೃಷ್ಟಿಸುವಂತೆ ಕೆಎಂಎಫ್ ಗೆ ಒತ್ತಡ ತರಲಾಗಿದೆ.“ ಎಂದು PLE Karnataka ಟ್ವೀಟ್‌ ಮಾಡಿದೆ. 

“ಇಷ್ಟುದಿನ ನಂದಿನಿ ಪದಾರ್ಥಗಳು ಎಲ್ಲೆಡೆ ಸಿಗದಂತೆ ಮಾಡಿ ಕೃತಕ ಅಭಾವ ಸೃಷ್ಟಿಸಿದ್ದಕ್ಕೆ ಕಾರಣವಿದು,ಈಗ ನಂದಿನಿಯ ಜಾಗವನ್ನು ಅಮುಲ್ ಆಕ್ರಮಿಸಲು ಬರುತ್ತಿದೆ, ನಮ್ಮ ನಂದಿನಿಯನ್ನು ಈಗ ಕನ್ನಡಿಗರಾದ ನಾವೇ ಕಾಪಾಡಿಕೊಳ್ಳಬೇಕು. ನಂದಿನಿಯನ್ನಷ್ಟೇ ಬಳಸುವ ಮೂಲಕ ಅಮುಲ್ ಬಂದ ದಾರಿಗೆ ಸುಂಕವಿಲ್ಲದಂತೆ ಹಿಂದಿರುಗುವ ಹಾಗೆ ಮಾಡಬೇಕು.” ಎಂದು ರೂಪೇಶ್‌ ರಾಜಣ್ಣ ಟ್ವೀಟ್‌ ಮಾಡಿದ್ದಾರೆ. 

ನಂದಿನಿಯ ಮೇಲೆ ಅಮೂಲ್‌ ಪಾರುಪತ್ಯ ಸಾಧಿಸುತ್ತದೆ ಎಂಬ ಆತಂಕ ಇತ್ತೀಚೆಗೆ ಹೆಚ್ಚಾಗಿದ್ದು, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಕೂಡಾ ನಂದಿನಿ-ಅಮೂಲ್‌ ಒಟ್ಟಾಗಿ ಕೆಲಸ ಮಾಡಬೇಕೆಂದು ಹೇಳಿಕೆ ನೀಡಿ ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದ್ದರು. ಕೆಎಂಎಫ್‌ ನಂದಿನಿಯನ್ನು ವಿಲೀನಗೊಳಿಸಬಾರದೆಂದು ಸಾಮಾಜಿಕ ಮಾಧ್ಯಮದಲ್ಲಿ ಅಭಿಯಾನ ಆರಂಭವಾಗಿತ್ತು. ಅಲ್ಲದೆ, ಕೆಲವೇ ದಿನಗಳ ಹಿಂದೆ ಮೊಸರು ಪ್ಯಾಕೆಟಿನಲ್ಲಿ ದಹಿ ಎಂದು ಹಿಂದಿಯಲ್ಲಿ ಪ್ರಿಂಟ್‌ ಮಾಡಲು ಆದೇಶಿಸಿ ಕನ್ನಡಿಗರ ಆಕ್ರೋಶಕ್ಕೆ ಕೇಂದ್ರ ಸರ್ಕಾರ ಗುರಿಯಾಗಿತ್ತು.

Similar News