ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ; ಸಿ-ವಿಜಲ್ ಆ್ಯಪ್‌ನಲ್ಲಿ ದೂರು ಸಲ್ಲಿಸಿದ 100 ನಿಮಿಷಗಳಲ್ಲಿ ಕ್ರಮ : ಬಸವರಾಜ್
ಮಂಗಳೂರು, ಎ.7: ಚುನಾವಣೆ ನೀತಿ ಸಂಹಿತೆ ಉಲ್ಲಂಘಿಸಿದ ಪ್ರಕರಣಕ್ಕೆ ಸಂಬಂಧಿಸಿ ಭಾರತದ ಚುನಾವಣಾ ಆಯೋಗ(ಇಸಿಐ) ಅಭಿವೃದ್ಧಿ ಪಡಿಸಿದ ಸಿ-ವಿಜಲ್ ಆ್ಯಪ್‌ನ ಮೂಲಕ ದೂರು ಸಲ್ಲಿಸಿದ 100 ನಿಮಿಷಗಳಲ್ಲಿ ದೂರಿನ ಕುರಿತು ಕ್ರಮ ಕೈಗೊಳ್ಳಲಾಗುವುದು ಎಂದು ದ.ಕ.ಜಿಲ್ಲಾ ಐಟಿ ನೋಡಲ್ ಅಧಿಕಾರಿ ಡಾ. ಬಸವರಾಜ್ ತಲ್ವಾರ್ ಹೇಳಿದ್ದಾರೆ.
ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಸಿ-ವಿಜಲ್ ಪ್ರಜೆಗಳ ಆ್ಯಪ್‌ನ ಕುರಿತಾಗಿ ನಡೆದ ಪ್ರಾತ್ಯಕ್ಷಿಕೆಯ ಬಳಿಕ ಮಾತನಾಡಿದರು.
ಎಂಸಿಸಿ ಜಾರಿಯಾದ ಬಳಿಕ ಹಣದ ಸಾಗಾಟ, ಫೇಕ್ ನ್ಯೂಸ್, ವಸ್ತು, ಹಣದ ವಿತರಣೆ, ಆಸ್ತಿಗೆ ಹಾನಿ, ಕೋಮುದ್ವೇಷ ಭಾಷಣ, ಬರಹಗಳ ಕುರಿತು, ಫೇಯ್ಡ್ ನ್ಯೂಸ್, ಉಚಿತವಾಗಿ ವಸ್ತುಗಳನ್ನು ಹಂಚುವುದು, ಬಂದೂಕುಗಳ ಪ್ರದರ್ಶನ, ಮದ್ಯ ಹಂಚುವಿಕೆ ಇತ್ಯಾದಿ ವಿಚಾರಗಳ ಮೇಲೆ ಸಿ ವಿಜಲ್ ಆ್ಯಪ್‌ನಲ್ಲಿಯೇ ಫೋಟೋ, ವಿಡಿಯೋ ಹಾಗೂ ಆಡಿಯೋಗಳ ಮೂಲಕ ದೂರುಗಳನ್ನು ಸಲ್ಲಿಸಬಹುದು ಎಂದರು.
ದಕ್ಷಿಣ ಕನ್ನಡದಲ್ಲಿ ಇಲ್ಲಿಯ ವರೆಗೆ 54 ದೂರುಗಳಲ್ಲಿ 38 ದೂರುಗಳಿಗೆ ಕ್ರಮ ಜರುಗಿಸಲಾಗಿದೆ. ಇದರಲ್ಲಿ ಉಳಿದ ದೂರುಗಳು ಸರಿ ಇಲ್ಲ. ಅಪೂರ್ಣ ಮಾಹಿತಿಯ ಅಧಾರದಲ್ಲಿ ರಿಜೆಕ್ಟ್ ಮಾಡಲಾಗಿದೆ. ಸರಿಯಾದ ದೂರುಗಳಿಗೆ ಎಆರ್‌ಒ, ಆರ್‌ಒಗಳ ಮೂಲಕ ಕ್ರಮ ಜರುಗಿಸಲಾಗಿದೆ ಎಂದು ಬಸವರಾಜ್ ಮಾಹಿತಿ ನೀಡಿದರು.
458 ಸಿ-ವಿಜಲ್ ತನಿಖಾಧಿಕಾರಿಗಳು: ಈಗಾಗಲೇ ದಕ್ಷಿಣ ಕನ್ನಡದ 8 ವಿಧಾನ ಸಭಾ ಕ್ಷೇತ್ರಗಳಲ್ಲಿ 335 ತಂಡಗಳನ್ನು ರಚನೆ ಮಾಡಿಕೊಂಡು 458 ಸಿ ವಿಜಲ್ ತನಿಖಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಸಿ-ವಿಜಲ್‌ನಲ್ಲಿ ದೂರು ದಾಖಲಿಸಿಕೊಂಡ ಕೂಡಲೇ ಜಿಲ್ಲಾ ನಿಯಂತ್ರಣ ಕೇಂದ್ರ(ಡಿಸಿಸಿ)ಯ ಮೂಲಕ ದೂರುಗಳು ಫೀಲ್ಡ್‌ನಲ್ಲಿರುವ ಅಧಿಕಾರಿಗಳಿಗೆ ಮಾಹಿತಿ ರವಾನೆಯಾಗುತ್ತದೆ. ಈ ಬಳಿಕ ಅವರು ದೂರಿಗೆ ಸಂಬಂಧಿಸಿದಂತಹ ಮಾಹಿತಿ ಸಂಗ್ರಹ ಮಡಿಕೊಂಡು ಆರ್‌ಒಗಳಿಗೆ ಮಾಹಿತಿ ನೀಡುತ್ತಾರೆ ಎಂದು ಬಸವರಾಜ್ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಎನ್‌ಐಟಿಕೆಯ ಉದ್ಯೋಗಿಗಳಾದ ಡಾ. ಅರವಿಂದ್ ಕೋಳೂರು ಮತ್ತು ಡಾ. ರಾಘವೇಂದ್ರ ಬಿ.ಎಸ್ ಉಪಸ್ಥಿತರಿದ್ದರು.
ಸಿ-ವಿಜಲ್‌ನಲ್ಲಿ ಮಾಯವಾದ ಕನ್ನಡ!
ಕರ್ನಾಟಕ ವಿಧಾನ ಸಭೆಯ ಚುನಾವಣೆಯಲ್ಲಿ ಬಹಳ ಪ್ರಮುಖ ಪಾತ್ರವಹಿಸುವ ಸಿ- ವಿಜಲ್ ಪ್ರಜೆಗಳ ಆ್ಯಪ್‌ನಲ್ಲಿ ಕನ್ನಡ ಭಾಷೆಗೆ ಅವಕಾಶ ಇಲ್ಲದಾಗಿದೆ. ಇಲ್ಲಿ ಮುಖ್ಯವಾಗಿ ದೇಶದ ಇತರ ಆರು ಭಾಷೆಗಳನ್ನು ಮಾತ್ರ ಬಳಕೆ ಮಾಡಲು ಅವಕಾಶ ನೀಡಲಾಗಿದೆ. ಇಂಗ್ಲಿಷ್, ಹಿಂದಿ ಪ್ರಮುಖ ಭಾಷೆಗಳ ಜತೆಯಲ್ಲಿ ಇತರ ಐದು ಭಾಷೆಗಳಿಗೆ ಮಾತ್ರ ಅವಕಾಶ ನೀಡಲಾಗಿದ್ದು, ಕನ್ನಡ ಭಾಷೆಯ ಬಳಕೆ ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಲಾಗಿದೆ ಎಂದು ತಿಳಿದು ಬಂದಿದೆ.