ಒಂದು ಜಿಲ್ಲೆ-ಒಂದು ಉತ್ಪನ್ನ: ಭವಿಷ್ಯದ ರೈತರ ಕೊರಳ ಕುಣಿಕೆ

Update: 2023-04-08 05:29 GMT

ಒಂದು ಜಿಲ್ಲೆ-ಒಂದು ಉತ್ಪನ್ನ ಯೋಜನೆಯೇ ಮುಂದಿನ ದಿನಗಳಲ್ಲಿ ರೈತರ ಕೊರಳಿನ ಕುಣಿಕೆಯಾಗಲಿದೆ.

► ಈ ಉತ್ಪನ್ನಗಳ ಆಯ್ಕೆ ಅವೈಜ್ಞಾನಿಕವಾಗಿದೆ. ಉದಾ: ಚಿಕ್ಕಮಗಳೂರಿನ ಒಂದು ಭಾಗ ಮಾತ್ರ ಕಾಫಿ ಬೆಳೆ ಪ್ರದೇಶ. ಹಾಸನದ ಮೂರು ತಾಲೂಕು ಕಾಫಿ ಬೆಳೆದರೆ ಎರಡು ತಾಲೂಕು ಭತ್ತದ ಪ್ರದೇಶ!! ಕಾಫಿಯಂತಹ ಬೆಳೆ ಮಾರುಕಟ್ಟೆಯಾಗಿ ಸಂಘಟಿತವಾಗಿದೆ. ಬೆಲೆ ಅಸ್ಥಿರತೆ, ಹವಾಮಾನ ವೈಪರೀತ್ಯಕ್ಕೆ ಪಕ್ಕಾಗುವುದು- ಇತ್ಯಾದಿ ಅಲ್ಲಿರುವ ಸಂಕಷ್ಟ, ಈ ಬಗ್ಗೆ ಸರಕಾರ ಏನು ಮಾಡುತ್ತದೆ ಎಂಬ ವಿವರ ಎಲ್ಲೂ ಇಲ್ಲ.

► ಸರಕಾರದ ಮೇಲುನೋಟದ ಪ್ರೋತ್ಸಾಹ ಪ್ರಚಾರದ ಕಾರಣಕ್ಕೆ ಈ ಜಿಲ್ಲೆಗಳಲ್ಲಿ ಈ ನಿರ್ದಿಷ್ಟ ಕೃಷಿ ಉತ್ಪನ್ನದ Intensity ಮತ್ತು ವಿಸ್ತರಣೆ ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾದಾಗ ಭರಪೂರ ಉತ್ಪಾದನೆ ಆಗುವುದು ನಿರೀಕ್ಷಿತ.

► ಈ ಬೆಳೆಗಳಿಗೆ ವಿಶೇಷ ಪ್ರೋತ್ಸಾಹ ನೀಡುವ ಘೋಷಣೆ ನೀಡಿದಾಗ ಅದಕ್ಕೆ ಕನಿಷ್ಠ ಬೆಲೆ ಭರವಸೆಯನ್ನೂ ಸರಕಾರ ನೀಡಬೇಕು. ಇಲ್ಲವಾದರೆ ಈ ಉತ್ಪನ್ನ ವ್ಯಾಪಾರಿಗಳ ಪಾಲಾಗುತ್ತದೆ. ಚಾಮರಾಜ ನಗರದ ಜಿಲ್ಲಾ ಉತ್ಪನ್ನವೆಂದು ಮಾನ್ಯ ಮಾಡಿರುವ ಅರಿಶಿನ ಬೆಳೆದ ರೈತರು ಬೆಲೆ ಕುಸಿತದಿಂದ ಕಂಗಾಲಾಗಿದ್ದಾರೆ. ತುಮಕೂರಿನ ಕೊಬ್ಬರಿ ಬೆಳಗಾರರದ್ದೂ ಇದೇ ಕತೆ. ನೆನಪಿಡಿ, ಇವೆರಡೂ ಬೆಳೆಗಳು, ಕಾಪಿಡಬಹುದಾದ ಬೆಳೆಗಳು. ಇವುಗಳ ಪಾಡೇ ಹೀಗಾದರೆ ಕೊಳೆವ ಹಣ್ಣು, ಹಂಪಲು ಬೆಳೆಗಾರರ ಕತೆ ಏನು?

► Value chain gap ( ಮೌಲ್ಯ ಸರಪಣಿಯ ಕಂದರ)ನ್ನು ಸರಕಾರ ವಿಶೇಷವಾಗಿ ಹೇಳುತ್ತಿದೆ. ಇದು ಸಮಸ್ಯಾತ್ಮಕ. ಬಹುತೇಕ ಹಣ್ಣು ಹಂಪಲುಗಳ ಸಮಸ್ಯೆ ಈ ಮೌಲ್ಯ ಸರಪಳಿ ಅಲ್ಲ, ದಾಸ್ತಾನು ಮತ್ತು ಪೂರೈಕೆ ಸರಪಳಿ. ಬಾಳೆಹಣ್ಣು, ಅನಾನಸ್, ಸೀಬೆಯಂತಹ ಶೀಘ್ರ ಕೊಳೆವ ಹಣ್ಣಿನ ಬೆಳೆಗಳಲ್ಲಿ ಮೌಲ್ಯ ವರ್ಧನೆಯ ಪಾಲು ಶೇ.೫ ಕೂಡಾ ಇರಲಾರದು. ಬೇಕಾಗಿರುವುದು supply chain(ಪೂರಕ ಸರಪಳಿ.). ಈ ಬೆಳೆಗಳು ಬಹುತೇಕ ಹಸಿ ರೂಪದಲ್ಲಿ ಗ್ರಾಹಕರು ಬಳಸುವ ಕಾರಣ ಈ ಪೂರಕ ಸರಪಳಿಯನ್ನು ಸರಕಾರ ಹೆಚ್ಚಿಸಬೇಕು. ಸರಕು ಸಾಗಣೆಗೆ ಸರಕಾರ ವ್ಯವಸ್ಥಿತವಾದ ಜಾಲ ನಿರ್ಮಿಸದಿದ್ದರೆ, ಖಾಸಗಿಯ ಸ್ಥಳೀಯ ಸಂಗ್ರಾಹಕರು (ಅಗ್ರಿಗೇಟರ್ಸ್) ಮೂಲಕ ರೈತರಿಂದ ಮೂರು ಕಾಸಿಗೆ ಕೊಂಡುಕೊಂಡು ಲಾಭ ಮಾಡುವುದು ಖಂಡಿತ.

► ಮೌಲ್ಯ ವರ್ಧನೆ ಕೂಡಾ ರೈತರಿಗೆ ಮರೀಚಿಕೆ. ಕೆಎಂಎಫ್ ತರಹದ ಒಕ್ಕೂಟದ ಮೂಲಕ ಸಂಗ್ರಹ, ಸಾಗಣೆ ಮತ್ತು ಮೌಲ್ಯ ವರ್ಧನೆ, ಮಾರಾಟ ವ್ಯವಸ್ಥೆ ಮಾಡಿದರಷ್ಟೇ ರೈತರಿಗೆ ಅನುಕೂಲ

► ಮುಖ್ಯವಾಗಿ ಒಂದು ಬೆಳೆ ಎಂಬ ವಿಶೇಷ ಸ್ಥಾನಮಾನದ ಮೂಲಕ ಆಯಾ ಜಿಲ್ಲೆಯ ವೈವಿಧ್ಯತೆಗೆ ಕೊಡಲಿ ಏಟು ಬೀಳುವುದು ಖಂಡಿತ. ನೀರಾವರಿ ಹೇಗೆ ವೈವಿಧ್ಯತೆಗೆ ಮಾರಕವಾಯಿತೋ ಹಾಗೇ ಈ ಯೋಜನೆಯೂ ವೈವಿಧ್ಯತೆಯನ್ನು ನಾಶ ಪಡಿಸಬಲ್ಲುದು. ಆದ್ದರಿಂದ ಒಂದು ಜಿಲ್ಲೆಯ ಐದಾರು ಮುಖ್ಯ ಬೆಳೆಗಳನ್ನು ಸರಕಾರ ಗುರುತಿಸಿ ಅವುಗಳಲ್ಲಿ perishables and non perishables ಹಾಗೂ ಒಂದೇ ಸಲ ಕಟಾವಿಗೆ ಬರುವ ಮತ್ತು ಕಾಲಾವಧಿಯಲ್ಲಿ ಆಗಾಗ ಕಟಾವಿಗೆ ಬರುವ ಬೆಳೆಗಳನ್ನು ಗುರುತಿಸಿ ಅವುಗಳಿಗೆ ತಕ್ಕಂತಹ ಸಂಗ್ರಹ, ಮಾರಾಟದ ವ್ಯವಸ್ಥೆ ಆಗಬೇಕಿದೆ.

► ಎಲ್ಲಾ ಜಿಲ್ಲೆಗಳಲ್ಲೂ ಸಣ್ಣ ಪುಮಾಣದಲ್ಲಿ ದ್ವಿದಳ ಧಾನ್ಯ, ಎಣ್ಣೆಕಾಳು ಬೆಳೆವ ಪ್ರದೇಶಗಳಿವೆ. ಅವು ದೊಡ್ಡ ಕ್ಲಸ್ಟರುಗಳಲ್ಲವಾದ ಕಾರಣ ದೊಡ್ಡ ವ್ಯಾಪಾರಿಗಳು ಅಲ್ಲಿಗೆ ಧಾವಿಸುವುದಿಲ್ಲ. ಸ್ಥಳೀಯ ಸಂಗ್ರಾಹಕರು ರೈತರಿಂದ ಅಗ್ಗಕ್ಕೆ ಕೊಂಡು ಆ ಮೇಲೆ ಸಗಟು ವ್ಯಾಪಾರಿಗೆ ಮಾರುತ್ತಾರೆ. ಈ ಜಿಲ್ಲೆಗಳಲ್ಲಿ ಈ ಬೆಳೆಗಳ ಕನಿಷ್ಠ ಸಂಸ್ಕರಣಾ ಘಟಕ/ಸೌಲಭ್ಯವೂ ಇಲ್ಲ. ಆದ್ದರಿಂದ ಸಣ್ಣ ಪ್ರಮಾಣದಲ್ಲಿ ಬೆಳೆಯುವ ಧಾನ್ಯ, ಕಾಳುಗಳನ್ನು ಸ್ಥಳೀಯವಾಗಿ (ಪಂಚಾಯತ್ ಮಟ್ಟದಲ್ಲಿ) ಸರಳ ಸಂಸ್ಕರಣೆಗೆ ಸರಕಾರ ಸಹಾಯ ಮಾಡಿ ಆ ಉತ್ಪನ್ನಗಳ ಸಂಗ್ರಹ, ಪ್ಯಾಕಿಂಗ್, ಬ್ರಾಂಡಿಂಗ್ ಮಾಡುವುದರತ್ತ ಸರಕಾರ ಲಕ್ಷ್ಯ ವಹಿಸಬೇಕಿದೆ.

► ಈಗಿರುವಂತೆ ಏಕರೂಪಿ ಗುಣಮಟ್ಟದ ಉತ್ಪನ್ನಗಳ ತಯಾರಿಕೆಗೆ ಬೇಕಾದ ತಾಂತ್ರಿಕ ಮಾರ್ಗದರ್ಶನ/ ಸಹಾಯವಿಲ್ಲದಿದ್ದರೆ ಸ್ಥಳೀಯ ರೈತರ ಉದ್ಯಮಶೀಲತೆ ದೊಡ್ಡ ಮಟ್ಟಕ್ಕೆ ಬೆಳೆಯುವುದು ಸಾಧ್ಯವಿಲ್ಲ.

► ಈ ಯೋಜನೆಯ ಭವಿಷ್ಯದ ದುರಂತದ ಸಂಕೇತವೋ ಎಂಬಂತೆ ರೈಲ್ವೇ ಸ್ಟೇಶನ್‌ಗಳಲ್ಲಿ ಒಂದು ಪುಟ್ಟ ಗೂಡಂಗಡಿಗೆ ಮೋದಿ ಫೋಟೊ ಸಹಿತ ‘ಒಂದು ಜಿಲ್ಲೆ ಒಂದು ಉತ್ಪನ್ನ’ ಎಂಬ ಬೋರ್ಡ್ ತಗಲಿಸಲಾಗಿದೆ. ಈ ಗೂಡಂಗಡಿಗಳು ಯಾವುವೂ ಓಪನೇ ಆಗಿಲ್ಲ.!

Similar News