×
Ad

ಆಪ್‍ನಿಂದ ರಾಜ್ಯದ ಜನತೆಗೆ ಹತ್ತು ಗ್ಯಾರಂಟಿ: ಅಶೋಕ್ ಎಡಮಲೆ

Update: 2023-04-08 17:33 IST

ಪುತ್ತೂರು: ಆಮ್ ಆದ್ಮಿ ಪಕ್ಷವು ದೇಶದ 3ನೇ ರಾಷ್ಟ್ರೀಯ ಪಕ್ಷವಾಗಿ ಹೊರ ಹೊಮ್ಮಿದೆ. ಇದೀಗ ಕರ್ನಾಟಕ ರಾಜ್ಯದಲ್ಲಿ 2 ಹಂತಗಳಲ್ಲಿ ಪಕ್ಷವು 120 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಮೂರನೇ ಹಂತದಲ್ಲಿ ಎಲ್ಲಾ ಕ್ಷೇತ್ರಗಳಿಗೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ. ಪಕ್ಷವು ಕರ್ನಾಟಕದ ಜನತೆಗೆ 10 ಗ್ಯಾರಂಟಿಗಳನ್ನು ನೀಡಿದ್ದು, ಪುತ್ತೂರು ವಿಧಾನ ಸಭಾ ಕ್ಷೇತ್ರಕ್ಕೆ 8 ಗ್ಯಾರಂಟಿಗಳನ್ನು ನೀಡಿದೆ. ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳ ಪೈಕಿ 5 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಲಾಗಿದೆ ಎಂದು ಆಪ್‍ನ ದ.ಕ.ಜಿಲ್ಲಾಧ್ಯಕ್ಷ ಅಶೋಕ್ ಎಡಮಲೆ ತಿಳಿಸಿದ್ದಾರೆ. 

ಅವರು ಶನಿವಾರ ಪುತ್ತೂರು ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಮಂಗಳೂರು ಕ್ಷೇತ್ರಕ್ಕೆ ಸಂತೋಷ್ ಕಾಮತ್, ಮಂಗಳೂರು ಉತ್ತರ ಕ್ಷೇತ್ರಕ್ಕೆ ಸಂದೀಪ್ ಶೆಟ್ಟಿ, ಮೂಡಬಿದ್ರೆ ಕ್ಷೇತ್ರಕ್ಕೆ ವಿಜಯ ವಿಠಲನನಾಥ ಶೆಟ್ಟಿ, ಸುಳ್ಯಕ್ಕೆ ಸುಮನಾ ಬೆಳ್ಳಾರ್ಕರ್ ಮತ್ತು ಪುತ್ತೂರು ವಿಧಾನ ಸಭಾ ಕ್ಷೇತ್ರಕ್ಕೆ ಕೃಷಿ ವಿಜ್ಞಾನಿ ಡಾ. ಬಿ.ಕೆ.ವಿಶುಕುಮಾರ್ ಗೌಡ ಅವರು ಅಭ್ಯರ್ಥಿಗಳಾಗಿದ್ದಾರೆ. ಈ ತನಕ ಜಿಲ್ಲೆಯ ಮತದಾರರಿಗೆ ಇತರ ಆಯ್ಕೆಗಳಿರಲಿಲ್ಲ. ಈಗ ಜನರಿಗೆ ಆಮ್ ಆದ್ಮಿ ಪಕ್ಷವಿದೆ. ನಮ್ಮ ಎಲ್ಲಾ ಶಾಸಕ ಅಭ್ಯರ್ಥಿಗಳು ಸುಶಿಕ್ಷಿತರಾಗಿದ್ದು, ಜನರ ನಡುವಿನಿಂದ ಬಂದವರಾಗಿದ್ದಾರೆ. ಪಕ್ಷದ ಚುನಾವಣಾ ಪ್ರಚಾರಕ್ಕಾಗಿ ಪಕ್ಷದ ರಾಷ್ಟ್ರೀಯ ನಾಯಕರು ಆಗಮಿಸಲಿದ್ದಾರೆ ಎಂದರು. 

ಎಲ್ಲಾ ಪ್ರಾದೇಶಿಕ ಅಭಿವೃದ್ಧಿಯ ಬಗ್ಗೆ ಖಾತರಿ, ಪ್ರತಿ ಪ್ರದೇಶಕ್ಕೆ ವರ್ಷಕ್ಕೆ ರೂ. 5 ಸಾವಿರ ಕೋಟಿ ಮೂಲ ಸೌಕರ್ಯ ನಿಧಿ, ರಾಜ್ಯದಾದ್ಯಂತ 10 ಶೈಕ್ಷಣಿಕ ಸಂಕೀರ್ಣ, 10 ಆರೋಗ್ಯ ಸಂಕೀರ್ಣ, 10 ಪ್ರವಾಸೋದ್ಯಮ ಸಂಕೀರ್ಣ ಮತ್ತು ಉತ್ತಮ ಗುಣಮಟ್ಟದ ರಸ್ತೆಗಳ ಭರವಸೆಯು ಪಕ್ಷದ ಪ್ರಾದೇಶಿಕ ಗ್ಯಾರಂಟಿಯಾಗಿದೆ. ಪುತ್ತೂರಿಗೆ ಸರ್ಕಾರಿ ಮೆಡಿಕಲ್ ಕಾಲೇಜ್ ಸ್ಥಾಪನೆಗೆ ಉತ್ತೇಜನ, ಹಳದಿರೋಗ ನಿರ್ಮೂಲನೆಗೆ ಸಂಶೋಧನೆ ಮತ್ತು ಉನ್ನತ ಮಟ್ಟದ ಸಂಶೋಧನಾ ಕೇಂದ್ರ ಸ್ಥಾಪನೆ, ತೆಂಗಿನ ಕಾಯಿಗೆ ಬೆಂಬಲ ಬೆಲೆ, ಮೌಲ್ಯವರ್ಧನೆ ಮತ್ತು ಉತ್ಪನ್ನ ರಫ್ತು ಘಟಕ ಸ್ಥಾಪನೆ, ರಬ್ಬರ್ ಉತ್ಪನ್ನಗಳ ಉತ್ಪಾಧನೆಗೆ ಉತ್ತೇಜನ, ಸಿದ್ದ ಉಡುಪುಗಳ ಉತ್ಪಾಧನಾ ಘಟಕ ಸ್ಥಾಪನೆ, ಹೈನುಗಾರಿಕೆಗೆ ಉತ್ತೇಜನ ಮತ್ತು ಪಶು ಆಹಾರ ಉತ್ಪಾಧನಾ ಘಟಕ ಸ್ಥಾಪನೆ, ಸಾವಯವ ಗೊಬ್ಬರ ಉತ್ಪಾಧನಾ ಘಟಕ ಸ್ಥಾಪನೆ ಮತ್ತು ಅಸಂಘಟಿತ ಕಾರ್ಮಿಕರಿಗೆ ಸರ್ಕಾರಿ ಸೌಲಭ್ಯಗಳನ್ನು ಒದಗಿಸು ಗ್ಯಾರಂಟಿಯನ್ನು ಪುತ್ತೂರು ವಿಧಾನ ಸಭಾ ಕ್ಷೇತ್ರಕ್ಕೆ ಪಕ್ಷವು ನೀಡಲಿದೆ ಎಂದು ಅವರು ತಿಳಿಸಿದರು. 

ರಾಜ್ಯದಲ್ಲಿ ಶೂನ್ಯ ಭ್ರಷ್ಟಾಚಾರ, ಲೋಕಾಯುಕ್ತಕ್ಕೆ ಸಂಪೂರ್ಣ ಅಧಿಕಾರ, ಗ್ರಹ ಬಳಕೆಗೆ 300 ಯುನಿಟ್ ಉಚಿತ ವಿದ್ಯುತ್, ದೆಹಲಿ ಮಾದರಿಯಲ್ಲಿ ಶಿಕ್ಷಣ ವ್ಯವಸ್ಥೆ,  ಉಚಿತ ಆರೋಗ್ಯ ವ್ಯವಸ್ಥೆ, ಯುವ ಜನರಿಗೆ ವರ್ಷಕ್ಕೆ 20 ಲಕ್ಷ ಉದ್ಯೋಗ ಸೃಷ್ಟಿ, ಮಹಿಳೆಯರಿಗೆ ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿ, ರೈತರು ವಿರೋಧಿಸುತ್ತಿರುವ ಮೂರು ಕೃಷಿ ಕಾಯ್ದೆ ರದ್ದು, ವಿವಿಧ ಪಿಂಚಣಿಗಳ ಏರಿಕೆ, ನಾಗರಿಕ ಸೇವೆಗಳ ಖಾತರಿ ಮತ್ತು ಉದ್ಯೋಗಗಳ ಖಾತರಿಯನ್ನು ಪಕ್ಷವು ರಾಜ್ಯ ಮಟ್ಟದಲ್ಲಿ ಗ್ಯಾರಂಟಿ ನೀಡಲಿದೆ ಎಂದು ತಿಳಿಸಿದರು. 

ಸುದ್ದಿಗೋಷ್ಠಿಯಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಅಭ್ಯರ್ಥಿ ಡಾ.ಬಿ.ಕೆ.ವಿಶುಕುಮಾರ್ ಗೌಡ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಪುರುಷೋತ್ತಮ ಕೋಲ್ಪೆ, ಸಾಮಾಜಿಕ ಜಾಲತಾಣದ ಮಹಮ್ಮದ್ ಅಲಿ ಮತ್ತು ಜನಾರ್ಧನ ಬಂಗೇರಾ ಉಪಸ್ಥಿತರಿದ್ದರು.  

Similar News