×
Ad

ಅಖಂಡ ಶ್ರೀನಿವಾಸಮೂರ್ತಿ ಅವರಿಗೆ ಕಾಂಗ್ರೆಸ್ ಟಿಕೆಟ್‌ಗಾಗಿ ದೇಗುಲ, ಮಸೀದಿಯಲ್ಲಿ ವಿಶೇಷ ಪ್ರಾರ್ಥನೆ

Update: 2023-04-08 20:16 IST

ಬೆಂಗಳೂರು: ಕಾಂಗ್ರೆಸ್‌ನ ಮೂರನೇ ಪಟ್ಟಿಯಲ್ಲಿ ಪುಲಕೇಶಿನಗರದ ವಿಧಾನಸಭಾ ಕ್ಷೇತ್ರಕ್ಕೆ ಅಖಂಡ ಶ್ರೀನಿವಾಸ ಮೂರ್ತಿ ಅವರ ಹೆಸರು ಬರಲಿ ಹಾಗೂ ಅವರಿಗೆ ಕಾಂಗ್ರೆಸ್ ಪಕ್ಷದ ವತಿಯಿಂದ ಟಿಕೆಟ್ ಸಿಗಲಿ ಎಂದು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅವರ ಬೆಂಬಲಿಗರು, ದೇಗುಲ ಮತ್ತು ಮಸೀದಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. 

ಪುಲಕೇಶಿನಗರದಲ್ಲಿನ ತಂಗಬೆಟ್ಟ ಸುಬ್ರಮಣ್ಯ ದೇಗುಲ ಹಾಗೂ ಮಸೀದಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ಅಭಿಮಾನಿಗಳು, ಟಿಕೆಟ್ ಗಾಗಿ ವಿಶೇಷ ರೀತಿಯಲ್ಲಿ ಪೂಜೆ, ಪುನಸ್ಕಾರ ಮಾಡಿದರು. 

ಕಾಂಗ್ರೆಸ್ ಹೈಕಮಾಂಡ್ ಬಳಿ ತೆರಳಿ ಅವರಲ್ಲಿ ಟಿಕೆಟ್ ಗಾಗಿ ಮನವಿ ಮಾಡಲು ಸಾಧ್ಯವಿಲ್ಲ, ಆದ್ದರಿಂದ ದೇವರ ಮೊರೆ ಹೋಗಿದ್ದೇವೆ. ಇಲ್ಲಿಯ ಪೂಜೆಯಿಂದ ಹೈಕಮಾಂಡ್ ಅಖಂಡ ಶ್ರೀನಿವಾಸ ಮೂರ್ತಿಯವರಿಗೆ ಕಾಂಗ್ರೆಸ್ ಟಿಕೆಟ್ ನೀಡಲಿ ಎಂದು ಪ್ರಾರ್ಥಿಸಿದರು. 

ಕಳೆದ ಬಾರಿ ಸಾರ್ವತ್ರಿಕ ಚುನಾವಣೆಯಲ್ಲಿ ಅತೀ ಹೆಚ್ಚು ಅಂದರೆ, 81 ಸಾವಿರ ಮತಗಳಿಂದ ಅಮೋಘ ಗೆಲುವು ಸಾಧಿಸಿರುವ ಅಖಂಡ ಶ್ರೀನಿವಾಸಮೂರ್ತಿಯವರಿಗೆ ಈ ಬಾರಿ ಟಿಕೆಟ್ ನೀಡಲು ವಿಳಂಬವಾಗುತ್ತಿರುವುದಕ್ಕೆ ಬೆಂಬಲಿಗರು ಅಸಮಾಧಾನ ವ್ಯಕ್ತಪಡಿಸಿದರು. 

ಅಖಂಡ ಶ್ರೀನಿವಾಸಮೂರ್ತಿಯವರಿಗೆ ಈ ಬಾರಿ ಟಿಕೆಟ್ ನೀಡಿದ್ದೇ ಆದ್ದಲ್ಲಿ ಅವರನ್ನು ಕಳೆದ ಬಾರಿಗಿಂತ ಇನ್ನೂ ಹೆಚ್ಚಿನ ಮತಗಳಿಂದ ಗೆಲುವು ಸಾಧಿಸುವಂತೆ ಮಾಡಲಾಗುವುದು ಎಂದು ಬೆಂಬಲಿಗರು ತಿಳಿಸಿದರು. ಹಾಗೆಯೇ ಅಖಂಡ ಶ್ರೀನಿವಾಸ ಮೂರ್ತಿಯವರ ಪರ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಜೈಕಾರ ಹಾಕಿದರು.

Similar News