ಮಲ್ಲಿಕಾರ್ಜುನ ಶಿಖರಕ್ಕೆ ಬೆಳಕಾಗಿ

Update: 2023-06-30 10:49 GMT

ಕನ್ನಡ ಸಂಸ್ಕೃತಿ ಅಕ್ಕಮಹಾದೇವಿ ಹಾಗೂ ಇನ್ನಿತರ ವಚನಕಾರರನ್ನು ಕಾಲೋಚಿತವಾಗಿ ಅನುಸಂಧಾನ ಮಾಡುತ್ತಲೇ ಬಂದಿದೆ. ಶರಣಕ್ರಾಂತಿ ಗತಿಸಿದ ಕೆಲವೇ ವರ್ಷಗಳ ಅಂತರದಲ್ಲಿ ಶರಣರ ಜೀವನ ಚರಿತ್ರೆ ಕಲಾ ಮಾಧ್ಯಮದ ಮೂಲಕ ವಿವಿಧ ರೀತಿಯಲ್ಲಿ ಅಭಿವ್ಯಕ್ತವಾಗಿದ್ದು ಇಂದಿಗೂ ಅದು ಮುಂದುವರಿಯುತ್ತಲೇ ಇದೆ. ಅದಕ್ಕೆ ಕಾರಣ ಶರಣರ ಬದುಕಿನ ಘನತೆ ಮತ್ತು ಅವರ ತಾತ್ವಿಕತೆಯ ಸರಳತೆ. ಅಕ್ಕ ಮತ್ತಾಕೆಯ ಸಮಕಾಲೀನ ವಚನಕಾರ್ತಿಯರ ಬದುಕಿನ ರೀತಿ ಈ ಕಾಲಕ್ಕೂ ಅಪೂರ್ವವೆ. ಹೆಣ್ನೋಟದ ಪ್ರತಿರೋಧಗಳನ್ನು ಈ ವಚನಕಾರ್ತಿಯರು ದಿಟ್ಟವಾಗಿ ದಾಖಲಿಸುವ ರೀತಿಯೂ ವಿಭಿನ್ನ. ಕೌಟುಂಬಿಕ ವ್ಯವಸ್ಥೆಯನ್ನು ಒಪ್ಪಿಕೊಂಡೂ ಅದರಲ್ಲಿ ಪುರುಷಪ್ರಾಧಾನ್ಯತೆಯನ್ನು ಅಲ್ಲಗಳೆಯುವ ವಚನಕಾರ್ತಿಯರಿರುವಂತೆಯೇ ವಿರಕ್ತಭಾವದ ವಚನಕಾರ್ತಿಯರೂ ಇದ್ದಾರೆ. ಹಾಗೆಯೇ ಮದುವೆಯಾಗಿ ಗಂಡು ಹಿಡಿತವನ್ನು ಧಿಕ್ಕರಿಸಿ ಹೊರಬಂದವರೂ ಇದ್ದಾರೆ. ಇನ್ನೂ ವಿಶಿಷ್ಟವೆಂದರೆ ಸೂಳೆಯ ವೃತ್ತಿಯಲ್ಲಿದ್ದು ಬಸವಣ್ಣನ ಪ್ರಭಾವಳಿಯಲ್ಲಿ ಅದರಿಂದ ಹೊರಬಂದು ತರುಣ ಶರಣರನ್ನು ಒಪ್ಪಿಮದುವೆ ಮಾಡಿಕೊಂಡ ಪುಣ್ಯಾಂಗನೆಯರೂ ಇದ್ದಾರೆ. ಇದಂತೂ ಆ ಕಾಲದ ಬಹು ದೊಡ್ಡ ಕ್ರಾಂತಿಕಾರಿ ನಡೆ. ಅಕ್ಕ ಗಂಡನ ಹಿಡಿತವನ್ನು ಕೊಡವಿಕೊಂಡು ಹೊರಬಂದು ಲೋಕಸಂಚಾರಿಯಾಗಿ ತನ್ನ ಮೆಚ್ಚಿನ ಚನ್ನಮಲ್ಲಿಕಾರ್ಜುನನ್ನು ಅರಸುತ್ತಾ ಹೊರಟವಳು.

ವೈದಿಕ ಸಂಸ್ಕೃತಿ ಹೇರಿದ ಪಿತೃಪ್ರಭುತ್ವ ವ್ಯವಸ್ಥೆ ಮಹಿಳೆಯನ್ನು ಇಂದಿಗೂ ಉಸಿರು ಕಟ್ಟುವ ವಾತಾವರಣದಲ್ಲೇ ಇರಿಸಿ ಎರಡನೇ ದರ್ಜೆಯ ಪ್ರಜೆಯನ್ನಾಗಿ ನೋಡುತ್ತಿದೆ. ವಿಶ್ವಾದ್ಯಂತ ಮಹಿಳೆಯ ಸ್ಥಿತಿ ಇದಕ್ಕಿಂತ ಭಿನ್ನವಾಗಿಯೇನೂ ಇಲ್ಲ. ಇದರಿಂದ ಅಕ್ಕನ ಕಾಲಘಟ್ಟದಲ್ಲಿ ಮಹಿಳೆಯ ಸ್ಥಿತಿ ಹೇಗಿತ್ತು ಎನ್ನುವುದನ್ನು ಗ್ರಹಿಸುವುದು ಸುಲಭ. ಇಂತಹ ವಿಷಮ ಸನ್ನಿವೇಶದಲ್ಲೂ ಅಕ್ಕ ಮತ್ತಾಕೆಯ ಸಮಕಾಲೀನ ವಚನಕಾರ್ತಿಯರ ಪ್ರತಿಭಟನಾತ್ಮಕ ಮನೋಭಾವ ಅಚ್ಚರಿ ಹುಟ್ಟಿಸುವಂಥದು. ಹಾಗಾಗಿಯೇ ಪ್ರತೀ ಕಾಲಘಟ್ಟವೂ ಅವರನ್ನು ಅನುಸಂಧಾನ ಮಾಡುತ್ತಾ ಸಮಕಾಲೀನಗೊಳಿಸಿಕೊಳ್ಳಲು ಯತ್ನಿಸಿ ಮರುವ್ಯಾಖ್ಯಾನಕ್ಕೆ ಒಳಪಡಿಸಿಕೊಳ್ಳುತ್ತಾ ತನ್ನನ್ನು ವಿವರಿಸಿಕೊಂಡಿದೆ. ಅಕ್ಕನ ಭಾವಕೋಶ ಅಪರೂಪದ್ದು. ಆಕೆಯ ಜೀವನ ವಿವರಗಳು ಅಷ್ಟು ಖಚಿತವಿಲ್ಲ. ಆದರೂ ಆಕೆಯ ನಂತರದಲ್ಲಿ ರಚನೆಗೊಂಡ ಅನೇಕ ಕೃತಿಗಳ ಮೂಲಕ ದೊರಕಿದ ವಿವರಗಳನ್ನೇ ಮರುರೂಪಿಸಿಕೊಂಡ ನಮ್ಮ ಪರಂಪರೆ ಆಕೆಯ ದಾವಂತ, ತಲ್ಲಣ, ಒಳಗುದಿ ಆಕೆ ಮುಖಾಮುಖಿಯಾದ ಸಮಾಜ, ಸಮುದಾಯಗಳನ್ನು ಮತ್ತೆ ಮತ್ತೆ ಮರುವ್ಯಾಖ್ಯಾನಿಸಿಕೊಂಡಿದೆ. ಅದರಿಂದ ತನಗೇನು ಬೇಕೋ ಅದನ್ನು ಪಡೆದುಕೊಂಡಿದೆ. 800 ವರ್ಷಗಳಿಂದಲೂ ಈ ಪ್ರಕ್ರಿಯೆ ಅವ್ಯಾಹತವಾಗಿ ನಡೆದು ಬಂದಿರುವುದಕ್ಕೆ ಕಾರಣ ನೊಂದ ಸಮಾಜದ ಬಹು ದೊಡ್ಡ ಕುರುಹಾಗಿ ಗೋಚರಿಸುವ ಆ ಕಾಲದ ವಿದ್ಯಮಾನ. ಆದುದರಿಂದಲೇ ಅಕ್ಕ ಎಲ್ಲ ಕಾಲದ ಎಲ್ಲ ದೇಶದ ಹೆಣ್ಣುಮಕ್ಕಳ ನೋವು ಸಂಕಟಗಳ ಬಹು ದೊಡ್ಡ ಪ್ರತೀಕ.

ನಮ್ಮ ಕಾಲಕ್ಕೆ ಹನ್ನೆರಡನೇ ಶತಮಾನವನ್ನು ವಿವರಿಸಿಕೊಳ್ಳುವುದೆಂದರೆ ಅದೇ ಗಂಡು ಹಿಡಿತ, ಅಶ್ಲೀಲ, ಲೈಂಗಿಕ ಹಿಂಸೆ, ಅತ್ಯಾಚಾರ, ಯಾತನೆ, ಹೊರಕ್ಕೆ ಬರದ ಚಕ್ರವ್ಯೆಹ ಮುಂತಾದ ಅನಿಷ್ಟಗಳು ನಮ್ಮ ಕಾಲಕ್ಕೂ ಮುಂದುವರಿದ ದುಸ್ಥಿತಿಯಾಗಿ ನೋಡುವುದು. ‘ನೋಯುವ ಹಲ್ಲಿಗೆ ನಾಲಗೆ ಪದೇ ಪದೇ ಹೊರಳುವ’ ರೀತಿಯಾಗಿ ನಮ್ಮ ಕಾಲದ ಮಹಿಳೆಯ ಸಂಕಟಗಳನ್ನು ಆ ಕಾಲದ ಪರಿಪ್ರೇಕ್ಷದಲ್ಲಿ ವಿವರಿಸಿಕೊಳ್ಳುವ ಮತ್ತು ಪರಿಹಾರ ಕಂಡುಕೊಳ್ಳುವ ಕ್ರಮ ಇದೆನಿಸುತ್ತದೆ. ಯಾಕೆಂದರೆ ಗಂಡಿನ ಯಜಮಾನ ಸಂಸ್ಕೃತಿಗೆ ಕೊನೆಯ ಮೊಳೆ ಹೊಡೆಯಲು ಸನ್ನದ್ಧವಾದ ಯುಗ ಅದು. ನಮ್ಮ ಶಿಷ್ಠ ಪರಂಪರೆ ಕಟ್ಟಿಕೊಟ್ಟ ಸ್ತ್ರೀ ಬಗೆಗಿನ ಎಲ್ಲ ಆಕೃತಿಗಳನ್ನೂ ಕುಟ್ಟಿ ಕೆಡವಲು ದೊಡ್ಡ ಹೆಜ್ಜೆಯನ್ನಿರಿಸಿದ ಕಾಲಘಟ್ಟ.

ಇಂತಹ ಆಶಯಗಳಿಗೆ ದನಿಯಾಗಲೆಂದೇ ರಚನೆಗೊಂಡಂತಿರುವ ಡಾ. ಎಚ್. ಎಸ್. ಅನುಪಮಾ ಅವರ ಮಹಾ ಕಾದಂಬರಿ ‘ಬೆಳಗಿನೊಳಗು ಮಹಾದೇವಿಯಕ್ಕ’ ಕೃತಿಯನ್ನು ವಿಶೇಷ ಆಸಕ್ತಿಯಿಂದ ನೋಡಬೇಕೆನಿಸುತ್ತದೆ. ಅನುಪಮಾ ಎದುರಿಸಿರುವ ಸವಾಲು ದೊಡ್ಡದು. ಅಷ್ಟೇ ಅಲ್ಲ, ಕಾದಂಬರಿಯ ಚೌಕಟ್ಟಿನಲ್ಲಿ (ಅಥವಾ ಚೌಕಟ್ಟೇ ಇಲ್ಲದ ಕಾದಂಬರಿಯಲ್ಲಿ) ಅಕ್ಕನ ಅನುಭವದ ಪಯಣವನ್ನು ವಿವರಿಸಿರುವ ಬಗೆಯೂ ವಿನೂತನ.

ಚರಿತ್ರೆಯ ಹಂಗನ್ನು ತೊರೆದಂತೆ ಕಂಡರೂ ಕಲ್ಪಿತ ಮತ್ತು ವಾಸ್ತವಗಳ ಗೆರೆ ಅಳಿಸಿ ಹೋದಂತಿರುವ ಕಾದಂಬರಿಯ ನಿರೂಪಣೆ ಅವರ ಏಕಾಗ್ರತೆಯ, ತಪಸ್ಸಿನ, ಸಮರ್ಪಣೆಯ, ಧ್ಯಾನದ ಫಲ. ಲೇಖಕಿ ತಾವು ಪರಿಭಾವಿಸಿದ ಅಕ್ಕನನ್ನು ಎಲ್ಲಿಯೂ ಕಟ್ಟಿ ಹಾಕದೆ ಸಹೃದಯಿಗಳು ತಮಗೆ ತೋಚಿದಂತೆ ಪರಿಭಾವಿಸಿಕೊಳ್ಳಲು ಇಂಬೊದಗಿಸಿರುವುದು ಈ ನಿರೂಪಣೆಯ ವಿಶೇಷ. ಅಕ್ಕ ಅನುಪಮಾ ಅವರಿಗೆ ಒಲಿದು ಒದಗಿ ಬಂದಿರುವಂತಿದೆ. ಅಕ್ಕನೇ ಅವರ ಕೈ ಹಿಡಿದು ನಡೆಸಿದಳೋ ಅಥವಾ ಅವರೇ ಅಕ್ಕನ ಕೈಹಿಡಿದು ನಡೆದರೋ ಅಥವಾ ಎರಡೂ ಸತ್ಯವೋ ಹೇಳುವುದು ಕಷ್ಟ. ಅಕ್ಕನನ್ನು ಬೆಂಬಲಿಸಲು ಇಲ್ಲಿ ಲಜ್ಜಾಗೌರಿ, ಎಕ್ಕಮ್ಮಜ್ಜಿ, ಕುರಿ ಕಾಯುವ ಚಂದ್ರಿ, ಆಳು ಸೋಮ, ಪ್ರೀತಿಯಿಂದ ಸಲಹಿದ ಅಪ್ಪ, ಅವ್ವ, ಉದಾರಗುಣದ ಗುರು, ಪ್ರತಿನಾಯಕನಾಗಿ ಕಸಪಯ್ಯ ಎಲ್ಲರೂ ಇದ್ದಾರೆ. ಇವರೆಲ್ಲರೂ ಅಕ್ಕನ ದಿವ್ಯ ಸಂಚಾರಕ್ಕೆ ಒಂದಲ್ಲಾ ಒಂದು ಬಗೆಯಲ್ಲಿ ನೆರವಾಗುವವರೇ. ಅಕ್ಕ ಇಲ್ಲಿ ಎಲ್ಲಿಯೂ ನಿಲ್ಲುವುದಿಲ್ಲ. ನಿರಂತರ ನಡೆಯುತ್ತಲೇ ಇರುತ್ತಾಳೆ. ಹಾಗೆ ನಡೆವಾಗ ದಣಿವು ಆವರಿಸಿಕೊಂಡಾಗ ಕೆಲವು ಸ್ಥಳಗಳಲ್ಲಿ ಆಕೆ ತಂಗುವುದೂ ತಾತ್ಕಾಲಿಕ. ಅಲ್ಲಿ ಆಕೆ ಎದುರಿಸುವ ಥರಾವರಿ ಜನ, ಆಚರಣೆ, ಸಂಪ್ರದಾಯ, ಮೌಢ್ಯ, ಕಂದಾಚಾರ ಈ ಎಲ್ಲದರ ಮುಖಾಮುಖಿಯಾಗುವ ಅಕ್ಕನ ಮೂಲಕ ಬಹುಸಂಸ್ಕೃತಿಗಳ ದರ್ಶನವನ್ನೇ ಲೇಖಕಿ ಕಟ್ಟಿಕೊಡುತ್ತಾರೆ. ಇತ್ತೀಚಿನವರೆಗೂ ಚಾಲನೆಯಲ್ಲಿದ್ದ ಕೇಶಮುಂಡನ ಸಂಪ್ರದಾಯವನ್ನು ಅಕ್ಕ ಮುಖಾಮುಖಿಯಾಗುವ ದೃಶ್ಯವೊಂದು ಮನ ಕಲಕುವಂತಿದೆ. ಹೆಣ್ಣು ತನಗರಿವಿಲ್ಲದೆ ಹೇಗೆ ಸಂಕಟಗಳಿಗೆ ಕೊರಳೊಡ್ಡುತ್ತಾಳೆ ಅಥವಾ ಹಾಗೆ ಕೊರಳೊಡ್ಡುವಂತೆ ವ್ಯವಸ್ಥೆ ತನ್ನ ಮಾಯಾಜಾಲವನ್ನು ಹೆಣೆದಿರುತ್ತದೆ ಎನ್ನುವುದಕ್ಕೆ ಕಾದಂಬರಿಯ ಈ ಸನ್ನಿವೇಶ ತುಂಬಾ ಶಕ್ತವಾದ ನಿದರ್ಶನದಂತೆ ತೋರುತ್ತದೆ.

ಇಲ್ಲಿನ ಅಕ್ಕ ಸಾಂಪ್ರದಾಯಿಕ ಗ್ರಹಿಕೆಯ ಅಕ್ಕನಿಗಿಂತ ತುಂಬಾ ಭಿನ್ನ. ಮಹಿಳೆಯ ಸಂಕಟ, ಯಾತನೆ, ದುಃಖ, ದುಮ್ಮಾನಗಳಿಗೆ ಮಿಡಿಯುತ್ತಾ, ತಾನು ಸಂಧಿಸಿದ ಹೆಣ್ಣುಮಕ್ಕಳ ಶ್ರಮದಲ್ಲಿ ಭಾಗಿಯಾಗುತ್ತಾ, ದುಃಖಕ್ಕೆ ಕಣ್ಣೀರಾಗುತ್ತಾ, ಸಂತಸದಲ್ಲಿ ಬೆರೆಯುತ್ತಾ ಸಹಜ ಹೆಣ್ಣು ಮಗಳಂತೆ ಅಕ್ಕನ ವರ್ತನೆ ಇರುವುದು ಇಷ್ಟವಾಗುತ್ತದೆ. ಇಲ್ಲಿನ ಅಕ್ಕನಲ್ಲಿ ಉರಿವಗ್ನಿ ಕನ್ಯೆಯೂ ಇದ್ದಾಳೆ, ಆಲಿಕಲ್ಲಿನಷ್ಟು ತಣ್ಣನೆಯ ಸಮಾಧಾನಿಯೂ ಇದ್ದಾಳೆ. ಎಲ್ಲ ಏರುಪೇರಿನ ಜೊತೆಯಲ್ಲೇ ಅಕ್ಕ ನಡೆಯುತ್ತಾ ನಡೆಯುತ್ತಾ ಶಿಖರಕ್ಕೆ ಬೆಳಕಾಗುವ ವಿಕಾಸದ ಪರಿಯನ್ನು ಕಾದಂಬರಿ ಸಮರ್ಥವಾಗಿ ಹಿಡಿದಿಡುತ್ತದೆ. ಆದರೂ ಕಿಚ್ಚಿಲ್ಲದ ಬೇಗೆಯಲ್ಲಿ ಬೆಂದೆನವ್ವಾ ಕಳವಳದ ಮನವು ತಲಕೆಳಗಾದುದವ್ವಾ ನೀವು ಕಾಣಿರೇ ನೀವು ಕಾಣಿರೇ ಈ ರೀತಿಯ ಅಭಿವ್ಯಕ್ತಿಯಲ್ಲಿ ಕಾಣುವ ಅಕ್ಕನ ಭಾವ ತೀವ್ರತೆಗೆ ಇನ್ನಷ್ಟು ಒತ್ತು ನೀಡಿದ್ದರೆ ಕಾದಂಬರಿಗೆ ಹೊಸ ಆಯಾಮ ದೊರಕಬಹುದಿತ್ತೇನೋ. ಅಂದರೆ ಅಕ್ಕನಿಗೂ ಇದ್ದಿರಬಹುದಾದ ತುಮುಲ, ಸಂದಿಗ್ಧತೆ, ಆಕೆಯ ಲೈಂಗಿಕ ಬಯಕೆ ಮತ್ತದರ ಉದಾತ್ತ ನೆಲೆಗಳ ಸಂಕೀರ್ಣತೆ ‘ಅಪ್ಪಿದರೆ ಅಸ್ಥಿ ನುಗ್ಗು ನುರಿಯಂತಾಗಬೇಕು’ ಎಂಬ ಅಭಿವ್ಯಕ್ತಿಯ ಮರ್ಮ ಆಕೆಯ ವ್ಯಕ್ತಿತ್ವವನ್ನು ಮತ್ತೊಂದು ಆಯಾಮದಲ್ಲಿ ಹಿಡಿಯಬಹುದಾಗಿತ್ತೇನೋ.

ಅಕ್ಕ ಪ್ರಕೃತಿ ದೇವೈಕ್ಯವಾದಿ. ನಿಸರ್ಗದ ಚಲುವಿನಲ್ಲೂ, ಸಕಲ ಜೀವಸಮೂಹದಲ್ಲೂ ಚನ್ನಮಲ್ಲಿಕಾರ್ಜುನನ ಕಾಣುವ ಹಂಬಲಿಗಳು. ಮೌಢ್ಯಗಳ ಮೀರುತ್ತಾ, ಒಳಗಣ್ಣಾಗುತ್ತಾ, ಬಸವ, ಅಲ್ಲಮಾದಿ ಶರಣ ಶರಣೆಯರ ಗಡಣದಲ್ಲಿ ಕಲಿಯುವ ಕುತೂಹಲಿಯಾಗಿ ಅಕ್ಕ ಇಲ್ಲಿ ಕಾಣಿಸಿರುವುದು ಅಪೂರ್ವ. ಅದರಲ್ಲೂ ತಳವರ್ಗದ ವಚನಕಾರ್ತಿಯರ ಜೊತೆಗಿನ ಆಕೆಯ ಒಡನಾಟವಂತೂ ಕಾದಂಬರಿಯ ಕೇಂದ್ರಪ್ರಜ್ಞೆಯಂತೆ ತೋರುವುದು. ವಿಶೇಷವೆಂದರೆ ಇಲ್ಲಿನ ಎಲ್ಲ ಶರಣ ಶರಣೆಯರೂ ನಮ್ಮ ಅಣ್ಣ, ಅಪ್ಪ, ಅಜ್ಜ, ಅವ್ವ, ಅಕ್ಕ, ಅಜ್ಜಿಯರಂತೆಯೇ ಕಾಣಿಸುವುದು ಅನುಭಾವದ ನಡೆಗೆ ಹೊಸ ವ್ಯಾಖ್ಯಾನವನ್ನು ಸಾಧ್ಯಗೊಳಿಸುವಂತಿದೆ.

ಕಾದಂಬರಿಯ ಭಾಷೆಯಂತೂ ಬೆರಗು ಹುಟ್ಟಿಸುತ್ತೆ. ಒಂದೂರ ಭಾಷೆ ಒಂದೂರಿನದಲ್ಲ ಎನ್ನುವ ಅಕ್ಕನ ಮಾತನ್ನೇ ಇಲ್ಲಿ ಅನುಪಮಾ ನಿಜಗೊಳಿಸಿದ್ದಾರೆ. ಹಲವು ಕನ್ನಡಗಳನ್ನು ಅವರು ಕರಗತ ಮಾಡಿಕೊಂಡಿರುವ ರೀತಿಯೂ ಸಹೃದಯರನ್ನು ಬೆಚ್ಚಿ ಬೀಳಿಸುವಂತಿದೆ. ಹಾಗೆಯೇ ಇಲ್ಲಿ ಪ್ರಸ್ತಾಪಿತವಾಗಿರುವ ಆಹಾರ ವೈವಿಧ್ಯತೆ ಆಹಾರ ಸಂಸ್ಕೃತಿಯ ಬಿಕ್ಕಟ್ಟಿನ ಇಂದಿನ ಸಂದರ್ಭಕ್ಕೆ ಕನ್ನಡಿ ಹಿಡಿದಂತಿದೆ. ಬಹುಸಂಸ್ಕೃತಿ, ಬಹುಭಾಷಿಕ, ಬಹುಧಾರ್ಮಿಕ, ಬಹುಜಾತಿಗಳ, ಬಹು ಪಂಥಗಳ ದೃಶ್ಯಾವಳಿಗಳನ್ನೇ ಲೇಖಕಿ ಇಲ್ಲಿ ಅನಾವರಣಗೊಳಿಸಿದ್ದಾರೆ.

Similar News