ಮಾರಣಾಂತಿಕ ಹಲ್ಲೆ ಆರೋಪ: ಪುನೀತ್ ಕೆರೆಹಳ್ಳಿ ವಿರುದ್ಧ ಮತ್ತೊಂದು ಎಫ್‍ಐಆರ್

Update: 2023-04-09 15:36 GMT

ಬೆಂಗಳೂರು, ಎ.9:ಮಂಡ್ಯ ಮೂಲದ ಇದ್ರೀಸ್ ಪಾಷಾ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸಂಘ ಪರಿವಾರದ ಕಾರ್ಯಕರ್ತ ಪುನೀತ್ ಕರೆಹಳ್ಳಿ ವಿರುದ್ಧ ಮತ್ತೊಂದು ಗಂಭೀರ ಆರೋಪ ಕೇಳಿಬಂದಿದ್ದು, ಕೃತಕ ವಿದ್ಯುತ್ ಶಾಕ್ ನೀಡಿ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆಂದು ಇಲ್ಲಿನ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ ಎಂದು ವರದಿಯಾಗಿದೆ.

ಮಾ.20 ರಂದು ಹೊಸೂರು ರಸ್ತೆಯಲ್ಲಿ ಜಾನುವಾರುಗಳನ್ನು ಸಾಗಿಸುತ್ತಿದ್ದ ಅಲೀಮುಲ್ಲಾ ಬೇಗ್ ಎಂಬುವರನ್ನು ಪುನೀತ್ ಕೆರೆಹಳ್ಳಿ ಮತ್ತು ಇತರ ಮೂವರು ಸಹಚರರು ಸ್ಟನ್ ಗನ್ ನಿಂದ ಹಲ್ಲೆ ನಡೆಸಿ ಚಿತ್ರಹಿಂಸೆ ನೀಡಿದ್ದರು. ಈ ವೇಳೆ ಕೃತಕ ವಿದ್ಯುತ್ ಶಾಕ್ ನೀಡಿ ಮಾರಣಾಂತಿಕ ಹಲ್ಲೆ ನಡೆಸಿದ್ದು, ಇದರ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು. ಈ ಸಂಬಂಧ ಎ.6ರಂದು ಅಲೀಮುಲ್ಲಾ ನೀಡಿರುವ ದೂರಿನ ಅನ್ವಯ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಪುನೀತ್ ಕೆರೆಹಳ್ಳಿ ವಿರುದ್ಧ ಹಲ್ಲೆ, ಅಕ್ರಮ ತಡೆ ಮತ್ತು ಕ್ರಿಮಿನಲ್ ಬೆದರಿಕೆ ಸೇರಿದಂತೆ ಇತರ ಆರೋಪಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ತಮಿಳುನಾಡಿನ ಕೃಷ್ಣಗಿರಿಗೆ ದನಗಳನ್ನು ಸಾಗಿಸುವ ಸಂದರ್ಭದಲ್ಲಿ ಪುನೀತ್ ಕೆರೆಹಳ್ಳಿ ಮತ್ತು ಆತನ ಮೂವರು ಸಹಚರರಾದ ಸಂತೋಷ್, ಚೇತನ್ ಮತ್ತು ದೀಪಕ್ ಎಂಬುವರು ನೈಸ್ ರಸ್ತೆಯಲ್ಲಿ ಅಡ್ಡ ಹಾಕಿ ವಾಹನದ ಚಾಲಕ ರಫೀಕ್ ಅವರ ಮೇಲೆ ಮೊದಲು ಹಲ್ಲೆ ನಡೆಸಿದ್ದರು. ಆನಂತರ ಕೃತಕ ವಿದ್ಯುತ್ ಶಾಕ್ ನೀಡಲು ಸ್ಟನ್ ಗನ್ ಅನ್ನು ಬಳಸಿದ್ದು, ಈ ಸಂಬಂಧ ಸೂಕ್ತ ತನಿಖೆ ನಡೆಸುವಂತೆ ದೂರಿನಲ್ಲಿ ಅಲೀಮುಲ್ಲಾ ಬೇಗ್ ಆಗ್ರಹಿಸಿದ್ದಾರೆ.

Similar News