ಬಿಜೆಪಿ ಆಡಳಿತದಲ್ಲಿ ಕರ್ನಾಟಕ ಸಾಕಷ್ಟು ಬ್ರ್ಯಾಂಡ್‍ಗಳನ್ನು ಕಳೆದುಕೊಳ್ಳುತ್ತಿದೆ: ಶಶಿ ತರೂರ್
''ಬಿಜೆಪಿಯ ಕೆಟ್ಟ ಆಪರೇಷನ್ ಕಮಲ ಸಂಪ್ರದಾಯಕ್ಕೆ ಅವಕಾಶ ನೀಡಬಾರದು''
ಬೆಂಗಳೂರು, ಎ.9: ಬಿಜೆಪಿ ಆಡಳಿತದಲ್ಲಿ ಕರ್ನಾಟಕ ಸಾಕಷ್ಟು ಬ್ರ್ಯಾಂಡ್‍ಗಳನ್ನು ಕಳೆದುಕೊಳ್ಳುತ್ತಿದ್ದು, ಈಗ ಅವುಗಳಲ್ಲಿ ನಾವೆಲ್ಲರೂ ಪ್ರೀತಿಯಿಂದ ಬೆಳೆಸಿರುವ ನಂದಿನಿಯೂ ಕೂಡ ಒಂದಾಗಿದೆ ಎಂದು ಕೇಂದ್ರದ ಮಾಜಿ ಸಚಿವ ಹಾಗೂ ಸಂಸದ ಶಶಿ ತರೂರ್ ಆತಂಕ ವ್ಯಕ್ತಪಡಿಸಿದ್ದಾರೆ.
ರವಿವಾರ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ರಾಜ್ಯದ ಜನರು ನಂದಿನಿ ವಿಚಾರದಲ್ಲಿ ವ್ಯಕ್ತಪಡಿಸುವ ಅಭಿಪ್ರಾಯವನ್ನು ಎಲ್ಲರೂ ಆಲಿಸಬೇಕು. ಒಗ್ಗಟ್ಟಾಗಿ ನಂದಿನಿಯನ್ನು ಕಾಪಾಡಿಕೊಳ್ಳಬೇಕು ಎಂದರು.
ಬಿಜೆಪಿ ಸರಕಾರವು ಎಂ.ವಿ.ಕೃಷ್ಣಪ್ಪ ಸ್ಥಾಪಿಸಿದ ಬೆಂಗಳೂರು ಡೇರಿ ಸೇರಿದಂತೆ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ವಿಜಯ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್, ಕೆನರಾ ಬ್ಯಾಂಕ್‍ಗಳನ್ನು ವಿಲೀನದ ಹೆಸರಿನಲ್ಲಿ ಎಲ್ಲವನ್ನೂ ನಾಶ ಮಾಡಿದ್ದಾರೆ. ಸಹಕಾರ ಕ್ಷೇತ್ರದಲ್ಲಿ ಗೊಂದಲ ಸೃಷ್ಟಿಸುವುದಕ್ಕಾಗಿ ಅಮಿತ್ ಶಾ ಸಹಕಾರ ಇಲಾಖೆ ಸಚಿವರಾಗಿದ್ದಾರೆ. ಬಿಜೆಪಿ ಆಡಳಿತದಲ್ಲಿ ನಂದಿನಿ ಹಾಗೂ ಕೆಎಂಎಫ್ ಅಪಾಯಕ್ಕೆ ಸಿಲುಕಿದ್ದು, ಕರ್ನಾಟಕದಲ್ಲಿ ಪ್ರತಿಯೊಬ್ಬರೂ ನಂದಿನಿ ರಕ್ಷಣೆಗೆ ಮುಂದಾಗಬೇಕು ಎಂದು ಶಶಿ ತರೂರ್ ತಿಳಿಸಿದರು.
ಇನ್ನು ಕಾಂಗ್ರೆಸ್ ಪಕ್ಷದಲ್ಲಿ ಚುನಾವಣೆಗೂ ಮುನ್ನ ಮುಖ್ಯಮಂತ್ರಿ ಘೋಷಣೆ ಮಾಡುವ ಸಂಪ್ರದಾಯವಿಲ್ಲ. ಇದು ಆರೋಗ್ಯಕರ ಪ್ರಕ್ರಿಯೆಯಾಗಿದ್ದು, ನಾವು ಮೊದಲು ಚುನಾವಣೆ ಗೆಲ್ಲಬೇಕು. ಅನಂತರ ಯಾರು ಮುಖ್ಯಮಂತ್ರಿ ಎನ್ನುವ ವಿಚಾರವಾಗಿ ಚರ್ಚೆ ಮಾಡಬಹುದು ಎಂದು ಅವರು ತಿಳಿಸಿದರು.
ರಾಜ್ಯದಲ್ಲಿ ಜನರು ಕಾಂಗ್ರೆಸ್ ಪಕ್ಷದ ಕಡೆ ಒಲವು ತೋರುತ್ತಿದ್ದಾರೆ. ನಾನು ಇಲ್ಲಿ 2 ದಿನಗಳ ಕಾಲ ಪ್ರಚಾರ ಮಾಡುತ್ತಿದ್ದು, ಯುವ ಮತದಾರರ ಜತೆ ಮಾತುಕತೆ ನಡೆಸಿದ್ದು, ಶಿಕ್ಷಕರ ಜತೆಯೂ ಚರ್ಚೆ ಮಾಡಿದ್ದೇನೆ. ನಾಲ್ಕು ವರ್ಷಗಳ ಬಿಜೆಪಿ ದುರಾಡಳಿತದಿಂದ ಜನರಿಗೆ ಬೇಸರವಾಗಿ ಕಾಂಗ್ರೆಸ್ ಸರಕಾರವನ್ನು ಬಯಸುತ್ತಿದ್ದಾರೆ ಎಂದರು ಶಶಿ ತರೂರ್ ತಿಳಿಸಿದರು.
ಈ ಹಿಂದೆ ಬೆಂಗಳೂರು ಅತಿ ಹೆಚ್ಚು ವಿದೇಶಿ ಬಂಡವಾಳವನ್ನು ಆಕರ್ಷಿಸುತ್ತಿತ್ತು. ಆದರೆ ಈಗ ಮೂರ್ನಾಲ್ಕು ವರ್ಷಗಳಲ್ಲಿ ಬಂಡವಾಳ ಹೂಡಿಕೆ ಬೇರೆ ರಾಜ್ಯಗಳ ಪಾಲಾಗುತ್ತಿವೆ. ಇದು ದುರಾಡಳಿತಕ್ಕೆ ಸಾಕ್ಷಿ. ರಾಜ್ಯದಲ್ಲಿ ಬದಲಾವಣೆ ಅಗತ್ಯವಾಗಿದ್ದು, ಈ ಬಾರಿ ಉತ್ತಮ ಫಲಿತಾಂಶ ಬರುವ ನಿರೀಕ್ಷೆ ಇದೆ. ಕಾಂಗ್ರೆಸ್ ಪಕ್ಷ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರುವುದು ನಿಶ್ಚಿತವಾಗಿದೆ. ಬಿಜೆಪಿಯ ಕೆಟ್ಟ ಆಪರೇಷನ್ ಕಮಲ ಸಂಪ್ರದಾಯಕ್ಕೆ ಅವಕಾಶ ನೀಡಬಾರದು ಎಂದು ಅವರು ಹೇಳಿದರು.
ಇನ್ನು ಹಲವು ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿ ಘೋಷಣೆ ಬಾಕಿ ಇವೆ. ಮುಸಲ್ಮಾನರು ಸೇರಿದಂತೆ ಕ್ರೈಸ್ತ ಹಾಗೂ ಇತರ ಅಲ್ಪಸಂಖ್ಯಾತ ಸಮುದಾಯಗಳಿಗೆ ಪ್ರಾತಿನಿದ್ಯ ನೀಡಲಾಗುವುದು. ಕಾಂಗ್ರೆಸ್ ಎಂದಿಗೂ ಯಾವ ಸಮುದಾಯಕ್ಕೂ ತಾರತಮ್ಯ ಮಾಡುವುದಿಲ್ಲ. ಸ್ವತಂತ್ರ್ಯ ಭಾರತದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷ ದೇಶದಲ್ಲಿ ಯಾವುದೇ ಮುಸಲ್ಮಾನ ಸಂಸದ ಹಾಗೂ ಶಾಸಕರನ್ನು ಹೊಂದಿಲ್ಲದೇ ಇರುವುದು. ಇದು ನಾಚಿಕೆಗೇಡಿನ ವಿಚಾರ. ಈ ದೇಶವನ್ನು ಆಳುವವರು ದೇಶದ ವೈವಿದ್ಯತೆ ಪ್ರತಿನಿಧಿಸಬೇಕು ಎಂದು ಶಶಿ ತರೂರ್ ಹರಿಹಾಯ್ದರು.