ಪೊಳ್ಳು ಭರವಸೆ, ಸುಳ್ಳು ಗ್ಯಾರಂಟಿಯ ಪ್ರಣಾಳಿಕೆ ನಮ್ಮದಲ್ಲ: ಸಚಿವ ಡಾ.ಕೆ.ಸುಧಾಕರ್

Update: 2023-04-10 12:19 GMT

ಬೆಂಗಳೂರು, ಎ.10: ಬಿಜೆಪಿಯ ಪ್ರಣಾಳಿಕೆ ರಾಮರಾಜ್ಯದ ಪರಿಕಲ್ಪನೆಯಲ್ಲಿ ಇರಲಿದ್ದು, ರಾಜ್ಯದ ಆರ್ಥಿಕ ಸ್ಥಿತಿ ಮತ್ತು ಶಕ್ತಿಯನ್ನು ಆಧರಿಸಿ ಅಭಿವೃದ್ಧಿಗೆ ಪೂರಕವಾಗಿರಲಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.

ಸೋಮವಾರ ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಪ್ರಣಾಳಿಕೆ ಅಭಿಯಾನ ಸಲಹಾ ಸಮಿತಿ ಸಭೆಯ ಬಳಿಕಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿ ಜಿಲ್ಲೆ, ತಾಲೂಕುಗಳಲ್ಲಿ ಸಲಹಾ ಪೆಟ್ಟಿಗೆಗಳನ್ನು ಇಡಲಾಗಿತ್ತು. ಅದೆಲ್ಲವನ್ನೂ ತರಿಸಿಕೊಂಡು ತಾಲೂಕುವಾರು, ಜಿಲ್ಲಾವಾರು ಸಲಹೆಗಳನ್ನು ತೆಗೆದುಕೊಂಡು ಡಿಜಿಟಲೈಸ್ ಮಾಡಲಾಗಿದೆ ಎಂದರು.

ಪ್ರತಿಯೊಂದು ವರ್ಗದ ಜನರ ಅಭಿವೃದ್ಧಿಗೆ ಏನು ಮಾಡಬಹುದು ಅನ್ನುವುದನ್ನು ಚರ್ಚಿಸಿ ಪ್ರಣಾಳಿಕೆ ಸಿದ್ಧವಾಗಲಿದೆ. ಪ್ರಣಾಳಿಕೆ ಸಮಿತಿಯಲ್ಲಿ ವಿಷಯವಾರು ತಜ್ಞರು ಸೇರಿದಂತೆ 32 ತಜ್ಞರು ಇರಲಿದ್ದಾರೆ. ಇವರ ಜೊತೆ ಸಮಾಲೋಚನೆ ನಡೆಸಿ, ಕರ್ನಾಟಕದ ಪ್ರಣಾಳಿಕೆ ಇಡಿ ದೇಶಕ್ಕೆ ಮಾದರಿಯಾಗಿ, ಸಮಗ್ರವಾಗಿರಲಿದೆ. ಹೊಸತನ ಮತ್ತು ಬದುಕು ಕಟ್ಟಿಕೊಡುವ, ನೈಜತೆಯಿಂದ ಕೂಡಿರುವ ಪ್ರಣಾಳಿಕೆ ಇದಾಗಿರಲಿದೆ ಎಂದು ಸುಧಾಕರ್ ತಿಳಿಸಿದರು. 

ಬಿಜೆಪಿಯ ಪ್ರಣಾಳಿಕೆ ಕೇವಲ ಘೋಷಣೆಗೆ ಸೀಮಿತವಾಗದೆ 5 ವರ್ಷಗಳಲ್ಲಿ ನಮ್ಮ ಸರಕಾರ ಮಾಡಬೇಕಾಗಿರುವ, ಮಾಡಬಹುದಾದ ಅಭಿವೃದ್ಧಿಯ ನೀಲಿ ನಕ್ಷೆ ಆಗಿರಲಿದೆ. ಮುಂದಿನ 7 ದಿನಗಳ ಒಳಗೆ ಪ್ರಣಾಳಿಕೆ ಬಿಡುಗಡೆಯಾಗಲಿದ್ದು, ಗ್ರೇಟರ್ ಬೆಂಗಳೂರು, ಕರಾವಳಿ ಪ್ರದೇಶ, ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕ, ಹಳೆ ಮೈಸೂರು ಹೀಗೆ ವಲಯವಾರು, ಜಿಲ್ಲಾವಾರು ಪ್ರಣಾಳಿಕೆ ಮಾಡಲು ಅವಕಾಶವಿದೆ ಎಂದು ಅವರು ಹೇಳಿದರು.

Similar News