ಧಾರ್ಮಿಕ ಮೆರವಣಿಗೆ ವೇಳೆ ಹಿಂಸೆಯನ್ನು ಪ್ರಚೋದಿಸುವ ವಿವಾದಿತ ಮಾರ್ಗಗಳು

Update: 2023-04-11 07:29 GMT

ಭಾರತದ ವಿವಿಧ ಭಾಗಗಳಲ್ಲಿ, ವಿವಿಧ ರಾಜಕೀಯ ಆಡಳಿತಗಳಲ್ಲಿ ಕಂಡ ಹಿಂಸಾಚಾರಗಳಿಗೆ ಮುಖ್ಯ ಕಾರಣ, ಬಹಳಷ್ಟು ಮೆರವಣಿಗೆಗಳು ಉದ್ದೇಶ ಪೂರ್ವಕವಾಗಿ ಕೋಮು ಸೂಕ್ಷ್ಮ ಮಾರ್ಗಗಳನ್ನು ಆರಿಸಿಕೊಂಡಿರುವುದು ಮತ್ತು ಅಂತಹ ಬೇಡಿಕೆಗಳನ್ನು ನಿಭಾಯಿಸುವಲ್ಲಿ ಪೊಲೀಸರ ಉದ್ದೇಶಪೂರ್ವಕ ಹಿಂಜರಿಕೆ.

ಕೋಮು ಗಲಭೆ, ಹಿಂಸಾಚಾರ, ಆಸ್ತಿ ನಾಶ ಮತ್ತು ಅಮಾಯಕರ ದುರಂತ ಸಾವುಗಳಿಗೆ ಕಾರಣವಾಗುವ ಧಾರ್ಮಿಕ ಮೆರವಣಿಗೆಗಳು ಭಾರತೀಯ ರಾಜಕೀಯ ಇತಿಹಾಸದುದ್ದಕ್ಕೂ ಇವೆ. ಯಾವ ರಾಜಕೀಯ ಪಕ್ಷ ಅಧಿಕಾರದಲ್ಲಿದ್ದರೂ ಅಷ್ಟೆ, ಅದು ಇಂಥ ಹೊತ್ತಲ್ಲಿ ಪೊಲೀಸ್ ವ್ಯವಸ್ಥೆಯನ್ನು ನೇರವಾಗಿ ಪ್ರಭಾವಿಸುತ್ತದೆ.

ಅಂಥ ಮೆರವಣಿಗೆಗಳು ತೆಗೆದುಕೊಳ್ಳುವ ತಿರುವನ್ನು ನಿಯಂತ್ರಿಸುವಲ್ಲಿ ಪೊಲೀಸರು ಮತ್ತು ಸರಕಾರಗಳ ವೈಫಲ್ಯವೇ ಕೋಮು ಉದ್ವಿಗ್ನತೆ ಮತ್ತು ಹಿಂಸಾಚಾರಕ್ಕೆ ಏಕೈಕ ಕಾರಣ. ಸ್ವಾತಂತ್ರ್ಯಕ್ಕೆ ಮೊದಲೂ ಇದು ಆಗಿದೆ, ಆನಂತರವೂ ನಡೆಯುತ್ತಿದೆ. ಇಂಥವುಗಳ ತಡೆಗಟ್ಟುವಿಕೆಯ ವಿಫಲತೆಯಲ್ಲಿ ಕಾಣಿಸುವುದು, ಹಿಂದೇನಾಗಿತ್ತು ಎಂಬುದರಿಂದ ಪಾಠ ಕಲಿತಿಲ್ಲವೆಂಬುದು.

ಭಾರತೀಯ ದಂಡಸಂಹಿತೆಯ ಸೆಕ್ಷನ್ 153, ಗಲಭೆ ಉಂಟುಮಾಡುವ ಉದ್ದೇಶದಿಂದಲೇ ಪ್ರಚೋದನೆ ನೀಡಿದ್ದರೆ ಅದಕ್ಕೆ ಆರು ತಿಂಗಳ ಜೈಲು ಶಿಕ್ಷೆಯನ್ನು ಸೂಚಿಸುತ್ತದೆ. ಪ್ರಚೋದನೆ ಗಲಭೆಗೆ ಕಾರಣವಾದರೆ ಒಂದು ವರ್ಷ ಜೈಲುಶಿಕ್ಷೆ. ಇನ್ನು ಸೆಕ್ಷನ್ 188ರ ಪ್ರಕಾರ, ಸರಕಾರಿ ಅಧಿಕಾರಿ ಆದೇಶಕ್ಕೆ ಅವಿಧೇಯತೆ ತೋರುವುದು ಅಪರಾಧ. ಉದಾಹರಣೆಗೆ, ಧಾರ್ಮಿಕ ಮೆರವಣಿಗೆ ನಿರ್ದಿಷ್ಟ ರಸ್ತೆಯಲ್ಲಿ ಹಾದು ಹೋಗಬಾರದು ಎಂಬ ಆದೇಶವಿದ್ದೂ, ಅದನ್ನು ಗೊತ್ತಿದ್ದೇ ಒಬ್ಬ ಉಲ್ಲಂಘಿಸಿದರೆ, ಆ ಮೂಲಕ ಗಲಭೆಗೆ ಕಾರಣನಾದರೆ ಈ ಸೆಕ್ಷನ್‌ನಂತೆ ಆತ ಶಿಕ್ಷಾರ್ಹನಾಗುತ್ತಾನೆ.

ಪೊಲೀಸರು ಕೈಗೊಳ್ಳಬೇಕಾದ ತಡೆಗಟ್ಟುವ ಕ್ರಮಗಳನ್ನು ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯಲ್ಲಿ (ಸಿಆರ್‌ಪಿಸಿ) ವಿವರಿಸಲಾಗಿದೆ. ಸೆಕ್ಷನ್ 144 ಜಿಲ್ಲಾ ಮ್ಯಾಜಿಸ್ಟ್ರೇಟ್, ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್ ಅಥವಾ ರಾಜ್ಯದ ಯಾವುದೇ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್‌ಗೆ ಅಧಿಕಾರ ನೀಡುತ್ತದೆ. ಸೆಕ್ಷನ್ 149, ಪೊಲೀಸ್ ಅಧಿಕಾರಿ ತೆಗೆದುಕೊಳ್ಳಬೇಕಾದ ತಡೆ ಕ್ರಮಗಳಿಗೆ ಸಂಬಂಧಿಸಿದೆ.

ಭಾರತದ ವಿವಿಧ ಭಾಗಗಳಲ್ಲಿ, ವಿವಿಧ ರಾಜಕೀಯ ಆಡಳಿತಗಳಲ್ಲಿ ಕಂಡ ಹಿಂಸಾಚಾರಗಳಿಗೆ ಮುಖ್ಯ ಕಾರಣ, ಬಹಳಷ್ಟು ಮೆರವಣಿಗೆಗಳು ಉದ್ದೇಶ ಪೂರ್ವಕವಾಗಿ ಕೋಮು ಸೂಕ್ಷ್ಮ ಮಾರ್ಗಗಳನ್ನು ಆರಿಸಿಕೊಂಡಿರುವುದು ಮತ್ತು ಅಂತಹ ಬೇಡಿಕೆಗಳನ್ನು ನಿಭಾಯಿಸುವಲ್ಲಿ ಪೊಲೀಸರ ಉದ್ದೇಶಪೂರ್ವಕ ಹಿಂಜರಿಕೆ.

ಡಿಸೆಂಬರ್ 6, 1992ರಂದು, ಅಯೋಧ್ಯೆಯಲ್ಲಿ ಮಸೀದಿ ಧ್ವಂಸದ ನಂತರ ಮುಂಬೈನಲ್ಲಿ ಮೊದಲ ಕೋಮು ಘಟನೆ ಧಾರಾವಿಯಲ್ಲಿ ನಡೆಯಿತು. ಪೊಲೀಸರು 200-300 ಶಿವಸೇನಾ ಕಾರ್ಯಕರ್ತರಿಗೆ ಸೈಕಲ್ ರ್ಯಾಲಿ ನಡೆಸಲು ಅವಕಾಶ ಮಾಡಿಕೊಟ್ಟರು. ಧಾರಾವಿಯಲ್ಲಿ ಹಲವಾರು ಕೋಮು ಸೂಕ್ಷ್ಮ, ಮುಸ್ಲಿಮ್ ಜನಸಂಖ್ಯೆ ಹೆಚ್ಚಿರುವ ಪ್ರದೇಶಗಳ ಮೂಲಕ ರ್ಯಾಲಿ ಸಾಗಿತು ಮತ್ತು ಕಾಲಾ ಕಿಲ್ಲಾದಲ್ಲಿ ಕೊನೆಯಾಯಿತು. ಅಲ್ಲಿ ಶಿವಸೇನೆ ಕಾರ್ಯಕರ್ತರು ಪ್ರಚೋದನಾಕಾರಿ ಭಾಷಣಗಳನ್ನು ಮಾಡಿದರು. ಇದಲ್ಲದೆ, ಬಿಜೆಪಿ ಮತ್ತು ಶಿವಸೇನೆ ಎರಡರ ಸ್ಥಳೀಯ ವಿಭಾಗಗಳು 1992ರ ಜುಲೈ ಮತ್ತು ಡಿಸೆಂಬರ್ ಮಧ್ಯದಲ್ಲಿಯೂ ಧಾರ್ಮಿಕ ಚಟುವಟಿಕೆಗಳಲ್ಲಿ ತೊಡಗಿದ್ದವು. ಪೊಲೀಸರು ಮೂಕಪ್ರೇಕ್ಷಕರಾಗಿದ್ದರು.

ಮಹಾರಾಷ್ಟ್ರದ ಸೋಲಾಪುರ ನಗರ, ಕೆಲ ಧಾರ್ಮಿಕ ಮೆರವಣಿಗೆಗಳು ಹೇಗೆ ಕೋಮುಗಲಭೆಗಳು ಮತ್ತು ಸಾವುಗಳಿಗೆ ಉದ್ದೇಶಪೂರ್ವಕವಾಗಿ ಕಾರಣವಾದವು ಎಂಬುದರ ಚಿತ್ರವನ್ನು ಕೊಡುತ್ತದೆ. ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಧೀಶ ರಘುಬರ್ ದಯಾಳ್ ಅಧ್ಯಕ್ಷತೆಯ ತನಿಖಾ ಆಯೋಗ ಕಂಡುಕೊಂಡಂತೆ, 1927 ಮತ್ತು 1966ರಲ್ಲಿ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ, 1925 ಮತ್ತು 1927ರಲ್ಲಿ ರಥ ಮೆರವಣಿಗೆ ಸಂದರ್ಭಗಳಲ್ಲಿ ಕೋಮುಗಲಭೆ ಏಕಾಏಕಿ ಸಂಭವಿಸಿದೆ. ಇನ್ನೊಂದು ಮೆರವಣಿಗೆ ವೇಳೆ ಆಕ್ಷೇಪಾರ್ಹ ಘೋಷಣೆಗಳ ಕೂಗುವಿಕೆ 18 ಇರಿತ ಪ್ರಕರಣಗಳಿಗೆ ಕಾರಣವಾಯಿತು. ಇತರ ಸಾಮೂಹಿಕ ಇರಿತಗಳು ಆಗಸ್ಟ್, 1947ರಲ್ಲಿ ನಡೆದವು. ಅವು ವಿಭಜನೆ ಹೊತ್ತಿನ ಹಿಂಸಾಚಾರದ ಪರಿಣಾಮವಾಗಿದ್ದವು.

ಮುಂಬೈನಿಂದ ಕೇವಲ 37 ಕಿ.ಮೀ. ದೂರದಲ್ಲಿರುವ ಭಿವಂಡಿ, ಮೇ 7, 1970ರಂದು ದೊಡ್ಡ ಪ್ರಮಾಣದ ಕೋಮು ಗಲಭೆ ಮತ್ತು ಗಲಭೆಗಳ ನಂತರದ ದುರಂತಕ್ಕೆ ಸಾಕ್ಷಿಯಾಯಿತು. 78 ಮಂದಿ ಪ್ರಾಣ ಕಳೆದುಕೊಂಡರು. ಮೇ 1970ರಲ್ಲಿ ಭಿವಂಡಿ, ಜಲಗಾಂವ್ ಮತ್ತು ಮಹಾಡ್‌ನಲ್ಲಿ ನಡೆದ ಕೋಮು ಗಲಭೆಗಳ ತನಿಖಾ ಆಯೋಗ ಕಂಡುಕೊಂಡಂತೆ, ಗಲಭೆಗಳು ಲಾಠಿಗಳೊಂದಿಗೆ ಶಸ್ತ್ರಸಜ್ಜಿತವಾದ ಸುಮಾರು 10,000 ಮಂದಿಯಿದ್ದ ಬೃಹತ್ ಶಿವಜಯಂತಿ ಮೆರವಣಿಗೆಯ ನೇರ ಪರಿಣಾಮವಾಗಿದ್ದವು. ಭಿವಂಡಿ ಗಲಭೆಗಳು ಮರುದಿನ ಜಲಗಾಂವ್ ಮತ್ತು ಮಹಾಡ್‌ನಲ್ಲಿ ಯಾವ ಸಂಬಂಧವೂ ಇಲ್ಲದೆಯೂ ವ್ಯಾಪಿಸಿದವು. ಜಲಗಾಂವ್‌ನಲ್ಲಿ 43 ಮಂದಿ ಸಾವಿಗೀಡಾದರು.ಡಿ

ಜಸ್ಟಿಸ್ ಮದೊನ್ ಆಯೋಗ ಗಮನಿಸಿದಂತೆ, ಭಿವಂಡಿಯ ಸಾಮುದಾಯಿಕ ಇತಿಹಾಸದಲ್ಲಿ 1963ರಲ್ಲಿ ಹಿಂದೂಗಳ ಮೆರವಣಿಗೆ ಮಸೀದಿಯ ಮೂಲಕ ಹಾದುಹೋಗುವಾಗ ಸಂಗೀತ ನುಡಿಸುವುದನ್ನು ನಿಲ್ಲಿಸದೆ ಸಾಗುವುದು ಶುರುವಾಯಿತು. ಶಿವಜಯಂತಿ ಮೆರವಣಿಗೆಯನ್ನು ಮಸೀದಿಗಳ ಮುಂದೆ ನಿಲ್ಲಿಸುವುದು, ಪ್ರಚೋದನಾಕಾರಿ ಮತ್ತು ಮುಸ್ಲಿಮ್ ವಿರೋಧಿ ಘೋಷಣೆಗಳನ್ನು ಕೂಗುವುದು ಮತ್ತು ವಿಪರೀತ ಗುಲಾಲ್ ಎಸೆಯುವುದು ಇದೆಲ್ಲ 1964ರಲ್ಲಿ ಆಯಿತು. ಅದು ಕಾಕತಾಳೀಯವಾಗಿ, ಬಿಜೆಪಿಯ ಹಿಂದಿನ ಭಾರತೀಯ ಜನಸಂಘ ತನ್ನ ಭಿವಂಡಿ ಶಾಖೆಯನ್ನು ಸ್ಥಾಪಿಸಿದ ವರ್ಷವೂ ಆಗಿತ್ತು. ಇಂಥ ಪ್ರಚೋದನೆಗಳು 1965ರಲ್ಲಿ ಹೆಚ್ಚಾದವು ಎಂಬುದನ್ನು ಆಯೋಗ ಗಮನಿಸಿದೆ. 1967ರಲ್ಲಿ ಭಿವಂಡಿಯಲ್ಲಿ ಮೊತ್ತಮೊದಲ ಕೋಮುಗಲಭೆ ನಡೆದದ್ದು ಶಿವಜಯಂತಿ ಮೆರವಣಿಗೆ ನಿಜಾಂಪುರ ಜುಮಾ ಮಸೀದಿಯಿಂದ ಹಾದು ಹೋಗುತ್ತಿರುವಾಗ. ಭಿವಂಡಿ ಗೊಂದಲಗಳಿಗೆ ತತ್‌ಕ್ಷಣದ ಅಥವಾ ಹತ್ತಿರದ ಕಾರಣವೆಂದರೆ ಶಿವಜಯಂತಿ ಮೆರವಣಿಗೆಯಲ್ಲಿ ಉದ್ದೇಶಪೂರ್ವಕ ಪ್ರಚೋದನೆಯೇ ಎಂದು ಜಸ್ಟಿಸ್ ಮಾಡನ್ ಕಂಡುಕೊಂಡಿದ್ದಾರೆ.

1978ರಲ್ಲಿ, ಆರೆಸ್ಸೆಸ್ ಮತ್ತು ವಿಎಚ್‌ಪಿ ರಾಮನವಮಿ ಮೆರವಣಿಗೆ ಸಬೀರ್‌ನಗರದ ಮುಸ್ಲಿಮ್ ಪ್ರದೇಶದ ಜನದಟ್ಟಣೆಯ ಮೂಲಕ ಹಾದುಹೋಗುವ ಬದಲು, ಕೋಮುಗಲಭೆಯ ನಿರೀಕ್ಷೆಯಿಂದ ಅಧಿಕಾರಿಗಳು ಸಬೀರ್‌ನಗರವನ್ನು ಬೈಪಾಸ್ ಮಾಡುವ ಮಾರ್ಗ ಬಳಸಲು ಕೇಳಿಕೊಂಡರು. ಆದರೆ ಸಂಘಟಕರು ಪಟ್ಟು ಸಡಿಲಿಸಲಿಲ್ಲ. ಪ್ರತಿಭಟನೆ ನಡೆಸಿದರು. ಇಡೀ ವರ್ಷ ಮೆರವಣಿಗೆ ನಡೆಸಲು ನಿರಾಕರಿಸಿದರು. ಆಡಳಿತದ ಮೇಲೆ ಒತ್ತಡ ತಂದರು. ಅಂತಿಮವಾಗಿ, 1979ರಲ್ಲಿ ಮೆರವಣಿಗೆಗೆ, ಒಂದು ನಿರ್ದಿಷ್ಟ ಮಾರ್ಗದ ಮೂಲಕ ಹಾದುಹೋಗುವ ರಾಜಿಯ ಮೇಲೆ ಸರಕಾರ ಒಪ್ಪಿಗೆ ನೀಡಿತು. ಆದರೆ ಕಡೆಗೆ 15,000 ಮಂದಿಯಿದ್ದ ಮೆರವಣಿಗೆ ಹಠಾತ್ ಮಾರ್ಗ ಬದಲಿಸಿ, ಸಬೀರ್‌ನಗರ ಮಸೀದಿಯನ್ನು ತಲುಪಿತ್ತು. ಮುಸ್ಲಿಮ್ ವಿರೋಧಿ ಭಾಷಣಗಳನ್ನು ಮಾಡಲಾಯಿತು. ಕಲ್ಲು ತೂರಾಟ ನಡೆಯಿತು, ಬೆಂಕಿ ಹಚ್ಚಲಾಯಿತು. ಇದು ಜಮ್ಶೆಡ್‌ಪುರದಾದ್ಯಂತ ಹಿಂಸಾಚಾರಕ್ಕೆ ಕಾರಣವಾಯಿತು, 108 ಮಂದಿಯ ಸಾವು, ವ್ಯಾಪಕ ಲೂಟಿ, ಆಸ್ತಿ ನಾಶ ಸಂಭವಿಸಿತು. ಗಲಭೆಯ ಕೇಂದ್ರಬಿಂದು ಸಬೀರ್‌ನಗರವಾದ್ದರಿಂದ, ಮುಸ್ಲಿಮರು ದೊಡ್ಡ ಮಟ್ಟದಲ್ಲಿ ಸಂತ್ರಸ್ತರಾದರು. ಇದಕ್ಕೆ ಆರೆಸ್ಸೆೆಸ್ ಮತ್ತು ಬಿಜೆಪಿ ಶಾಸಕ ದೀನನಾಥ್ ಪಾಂಡೆ ಪ್ರಾಥಮಿಕವಾಗಿ ಹೊಣೆಗಾರರೆಂದು ಪಾಟ್ನಾ ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶ ಜಿತೇಂದ್ರ ನಾರಾಯಣ್ ನೇತೃತ್ವದ ತನಿಖಾ ಆಯೋಗ ಹೇಳಿತ್ತು.

ಇನ್ನು ರಾಜಸ್ಥಾನದ ಕೋಟದಲ್ಲಿನ ಗಲಭೆ ವಿಚಾರ. 1947ರಲ್ಲಿ ಅಥವಾ ನಂತರದ ಐದು ದಶಕಗಳಲ್ಲಿ ಯಾವುದೇ ಗಲಭೆಗಳನ್ನು ನೋಡಿರದ ಈ ಶಾಂತ ನಗರಿ, 1989ರಲ್ಲಿ ಗಲಭೆಗಳನ್ನು ಪ್ರಚೋದಿಸುವ ಉದ್ದೇಶಿತ ಮೆರವಣಿಗೆಗಳ ಕಾರಣದಿಂದಾಗಿ ಅದನ್ನು ನೋಡಬೇಕಾಗಿ ಬಂತು. ಕೋಮು ಬೆಂಕಿ ಹೊತ್ತಿಸಲು ಗಣೇಶ ವಿಸರ್ಜನೆ ಮೆರವಣಿಗೆಯನ್ನು ಬಳಸಿಕೊಳ್ಳಲಾಯಿತು. ಸೆಪ್ಟಂಬರ್ 14, 1989ರಂದು, ಮೆರವಣಿಗೆಯನ್ನು ಉದ್ದೇಶಪೂರ್ವಕವಾಗಿ ಮುಸ್ಲಿಮ್ ಮೊಹಲ್ಲಾದ ಮೂಲಕ ತೆಗೆದುಕೊಂಡು ಹೋಗಲಾಯಿತು ಮತ್ತು ದೊಡ್ಡ ಮಸೀದಿಯ ಮುಂದೆ ನಿಲ್ಲಿಸಲಾಯಿತು. ಮುಸ್ಲಿಮರನ್ನು ನಿಂದಿಸುವ ಕೋಮು ಘೋಷಣೆಗಳನ್ನು ಕೂಗಲಾಯಿತು. ಅನಿವಾರ್ಯವಾಗಿ, ಇದು ಪ್ರತಿ ಘೋಷಣೆಗಳಿಗೆ ಕಾರಣವಾಯಿತು. ನಂತರ ಕಲ್ಲು ತೂರಾಟ, ಮಾರಣಾಂತಿಕ ಆಯುಧಗಳಿಂದ ಆಕ್ರಮಣ ನಡೆದವು. 16 ಮುಸ್ಲಿಮರು ಮತ್ತು 4 ಹಿಂದೂಗಳು ಸಾವನ್ನಪ್ಪಿದರು. ಸಾವಿರಾರು ಮುಸ್ಲಿಮ್ ಬೀದಿ ವ್ಯಾಪಾರಿಗಳ ಅಂಗಡಿಗಳು ಬೆಂಕಿಗೆ ಆಹುತಿಯಾಗಿದ್ದವು.

ಭಾಗಲ್ಪುರದಲ್ಲಿ 1989ರ ಅಕ್ಟೋಬರ್ 24ರಂದು ರಾಮಶಿಲಾ ಮೆರವಣಿಗೆಯನ್ನು ಪರವಾನಿಗೆ ಪಡೆದ ಮಾರ್ಗದಿಂದ ತಿರುಗಿಸಲಾಯಿತು ಮತ್ತು ತತಾರ್‌ಪುರ ಎಂಬ ಮುಸ್ಲಿಮ್ ಪ್ರದೇಶದ ಮೂಲಕ ಸಾಗಿತು. ತನಿಖಾ ಆಯೋಗ ಗಮನಿಸಿದಂತೆ, ಸಾವಿರಾರು ದುಷ್ಕರ್ಮಿಗಳನ್ನು ಒಳಗೊಂಡ ಗುಂಪಿಗೆ ಪೊಲೀಸರು ಅನುಮತಿ ನೀಡಿದ್ದರು. ಗಲಭೆ ಬಗ್ಗೆ ವರ್ಷದಿಂದಲೇ ಸೂಚನೆಗಳಿದ್ದರೂ, ಜಿಲ್ಲಾಡಳಿತ ಉದ್ದೇಶಪೂರ್ವಕ ಉದಾಸೀನತೆ ತೋರಿಸಿತ್ತು. ಅದು ನಿಷ್ಪಕ್ಷಪಾತವಾಗಿ ನಡೆದುಕೊಳ್ಳದೆ ಇದ್ದುದು ಸಮಸ್ಯೆಯನ್ನು ಇನ್ನಷ್ಟು ಜಟಿಲಗೊಳಿಸಿತ್ತು. 1989ರಲ್ಲಿ ಭಾಗಲ್ಪುರದಲ್ಲಿ ನಡೆದ ಈ ಹಿಂಸಾಚಾರ 900 ಮುಸ್ಲಿಮರನ್ನು ಬಲಿತೆಗೆದುಕೊಂಡಿತು.

ಇಂತಹ ಆಚರಣೆಗಳು ಹಿಂದೂ ಮತ್ತು ಮುಸ್ಲಿಮ್ ಹಬ್ಬಗಳ ಸುತ್ತ ಉದ್ವಿಗ್ನತೆ ಹೆಚ್ಚಿಸುತ್ತವೆ ಎಂಬ ಅಂಶವನ್ನು ಸರಕಾರಗಳು ಗಂಭೀರವಾಗಿ ತೆಗೆದುಕೊಳ್ಳುವುದೇ ಇಲ್ಲ. ರಾಮನವಮಿ ಮತ್ತು ಹನುಮಾನ್ ಜಯಂತಿ ಮೆರವಣಿಗೆಗಳಲ್ಲಿ ಬಹಿರಂಗವಾಗಿ ಆಯುಧ ಒಯ್ಯಲು ಅನುಮತಿ ಕೊಡಲಾಗುತ್ತದೆ. ಹೆಚ್ಚಿನ ಡೆಸಿಬಲ್ ಸಂಗೀತವಿರುತ್ತದೆ. ಮಸೀದಿಗಳ ಮುಂದೆ ಅಲ್ಪಸಂಖ್ಯಾತ ಸಮುದಾಯವನ್ನು ಅವಮಾನಿಸುವಂತೆ ವರ್ತಿಸಲಾಗುತ್ತದೆ. ಇಂಥ ಪ್ರಚೋದನೆಯು ಹಿಂಸಾಚಾರಕ್ಕೆ ದಾರಿ ಮಾಡುತ್ತದೆ.

ಹೀಗೆಲ್ಲ ನಡೆಯುವಾಗ ಹೆಚ್ಚಿನ ಭಾಗಗಳಲ್ಲಿ ಪೊಲೀಸರು ಮೂಕ ಪ್ರೇಕ್ಷಕರಾಗಿರುತ್ತಾರೆ. ಅಥವಾ ಸೈದ್ಧಾಂತಿಕ ಪಕ್ಷಪಾತ ತೋರಿಸುತ್ತಾರೆ ಎಂಬುದು ಕಟು ವಾಸ್ತವ.

(ಕೃಪೆ: sabrangindia.in)

Similar News