ಶೇ.50ರಷ್ಟು ಗೋವುಗಳನ್ನು ಮಾಂಸಕ್ಕಾಗಿ ರಫ್ತು ಮಾಡುತ್ತಿರುವ ಬಿಜೆಪಿ ಸರಕಾರ: ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಆರೋಪ
ಬೆಂಗಳೂರು, ಎ.11: ‘ರಾಜ್ಯದ ಗೋಶಾಲೆಗಳಲ್ಲಿ ಎಷ್ಟು ಗೋವುಗಳು ಸತ್ತಿವೆ, ಎಷ್ಟು ಬದುಕಿವೆ, ಎಷ್ಟು ಹಾಲು ಉತ್ಪಾದನೆಯಾಗುತ್ತಿದೆ ಎಂಬ ಪ್ರಶ್ನೆಗಳಿಗೆ ಸರಕಾರ ಮಾಹಿತಿ ನೀಡುತ್ತಿಲ್ಲ. ನಮಗಿರುವ ಮಾಹಿತಿ ಪ್ರಕಾರ ಶೇ.50ರಷ್ಟು ಗೋವುಗಳನ್ನು ಮಾಂಸಕ್ಕಾಗಿ ರಫ್ತು ಮಾಡುತ್ತಿದ್ದಾರೆ’ ಎಂದು ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಆರೋಪಿಸಿದ್ದಾರೆ.
ಮಂಗಳವಾರ ಈ ಕುರಿತು ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ದೇಶಾದ್ಯಂತ ಬಿಜೆಪಿ ಅಧಿಕಾರವಧಿಯಲ್ಲೇ ಅತಿ ಹೆಚ್ಚು ಗೋಮಾಂಸ ರಫ್ತಾಗುತ್ತಿದೆ. 2013ರಲ್ಲಿ 9ಲಕ್ಷ ಟನ್ ಗೋಮಾಂಸ ರಫ್ತಾದರೆ, 2014ರಲ್ಲಿ 14 ಲಕ್ಷ ಟನ್‍ಗೆ ಏರಿಕೆಯಾಗಿದೆ. ದೇಶದಲ್ಲಿ ಗೋಮಾಂಸ ರಫ್ತಿನ ವಹಿವಾಟು 50 ಸಾವಿರ ಕೋಟಿ ರೂ.ಗಳಾಗಿದ್ದು, ಭಾರತದಲ್ಲಿನ ಅತಿಹೆಚ್ಚು ಗೋಮಾಂಸ ರಫ್ತುದಾರರ ಪಟ್ಟಿಯಲ್ಲಿ ಅರೇಬಿಯನ್ ಎಕ್ಸ್ಪೋಟ್ರ್ಸ್ ಅಗ್ರಸ್ಥಾನದಲ್ಲಿದೆ. ಇದರ ಮಾಲಕರು ಸುನೀಲ್ ಕಪೂರ್ ಆಗಿದ್ದು, ಅಗ್ರ 10 ಸ್ಥಾನದಲ್ಲಿ ಎಂಟು ಮಂದಿ ಬಿಜೆಪಿ ಜತೆ ಗುರುತಿಸಿಕೊಂಡಿರುವವರಿದ್ದಾರೆ ಎಂದು ಟೀಕಿಸಿದರು.
ಇನ್ನು ರಾಜ್ಯದಲ್ಲಿ 159 ಸರಕಾರಿ ಸ್ವಾಮ್ಯದ ಗೋಶಾಲೆಗಳು ಹಾಗೂ 190 ಖಾಸಗಿ ಗೋಶಾಲೆಗಳಿದ್ದು, ಇವೆರಡೂ ಗೋಶಾಲೆಗಳಲ್ಲಿ 39 ಸಾವಿರ ದನಕರುಗಳಿವೆ ಎಂಬ ಮಾಹಿತಿ ಸಿಕ್ಕಿದೆ. ಗೋಹತ್ಯೆ ನಿಷೇಧ ಕಾಯ್ದೆ ಜಾರಿ ಮಾಡಿ ಒಂದೂವರೆ ವರ್ಷವಾಗಿದ್ದು, ಬಿಜೆಪಿ ಸರಕಾರ ಈ ಗೋಶಾಲೆಗಳಿಗೆ ಎಷ್ಟು ಹಣ ಬಿಡುಗಡೆ ಮಾಡಿದೆ ಎಂದು ಲಕ್ಷ್ಮಣ್ ಪ್ರಶ್ನಿಸಿದರು.
ಇನ್ನು ಎಸ್‍ಬಿಎಂ, ಸಿಂಡಿಕೇಟ್ ಹಾಗೂ ವಿಜಯಾ ಬ್ಯಾಂಕ್‍ಗಳನ್ನು ವಿಲೀನ ಮಾಡಿದಂತೆ, ನಂದಿನಿಯನ್ನು ವಿಲೀನಗೊಳಿಸಲು ಮುಂದಾಗಿದ್ದಾರೆ. ಒಂದು ವಾರದಿಂದ ಅಮೂಲ್ ಹಾಗೂ ನಂದಿನಿ ವಿಲೀನ ವಿರೋಧಿಸಿ ಸಾಕಷ್ಟು ಹೋರಾಟಗಳು ನಡೆಯುತ್ತಿವೆ. ಬಿಜೆಪಿಯು ಮೂರು ವರ್ಷಗಳಿಂದ ನಂದಿನಿಯನ್ನು ಅಮೂಲ್ ಜತೆ ವಿಲೀನ ಮಾಡಲು ಪ್ರಯತ್ನ ಮಾಡುತ್ತಿದ್ದು, ಅಮೂಲ್ ಜತೆ ವ್ಯಾಪಾರ ಮಾಡಲು ನಂದಿನಿ ಸಂಸ್ಥೆ ಒಪ್ಪಿಗೆ ನೀಡಿರುವ ಪತ್ರವನ್ನು ಅವರಿಗೆ ಈಗಾಗಲೇ 2021ರಲ್ಲೇ ನೀಡಲಾಗಿದೆ. ಈ ಪತ್ರವನ್ನು ಇವರು ಬಹಿರಂಗಪಡಿಸುತ್ತಿಲ್ಲ. ಇದೆಲ್ಲ ಆದ ನಂತರವಷ್ಟೇ ಅವರು ರಾಜ್ಯಕ್ಕೆ ಲಗ್ಗೆ ಇಡುತ್ತಿದ್ದಾರೆ ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳಿಗೆ ಸುಮಾರು 35ರಿಂದ 40 ಸಾವಿರ ಕೋಟಿ ವೆಚ್ಚ ತಗುಲಲಿದ್ದು, ಈ ಹಣವನ್ನು ಎಲ್ಲಿ ತರುತ್ತೀರಿ ಎಂದು ಬಿಜೆಪಿಯವರು ಕೇಳುತ್ತಿದ್ದಾರೆ. ಈ ಹಣವನ್ನು ಕ್ರೂಢೀಕರಣಕ್ಕೆ ಪಕ್ಷ ತಯಾರಿ ನಡೆಸಿದೆ. ಕಾಂಗ್ರೆಸ್‍ನ ಈ ಯೋಜನೆಗಳಿಂದ ಪ್ರತಿ ಕುಟುಂಬಕ್ಕೆ ತಿಂಗಳಿಗೆ 6ರಿಂದ 10 ಸಾವಿರ ಆರ್ಥಿಕ ನೆರವು ನೀಡಲಾಗುತ್ತದೆ. ಆ ಮೂಲಕ ಜನರ ದುಡ್ಡನ್ನು ಜನರಿಗೆ ತಲುಪಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದನ್ನು ವಿರೋಧಿಸುತ್ತಿರುವ ಬಿಜೆಪಿಗರು ಜನವಿರೋಧಿಗಳು ಎಂದು ಅವರು ಹರಿಹಾಯ್ದರು.
ಇನ್ನು ಎಲ್ಲಾದರೂ ಕಾಂಗ್ರೆಸ್ ವಿರುದ್ಧ ದೂರು ದಾಖಲಾದರೆ, ಚುನಾವಣಾ ಆಯೋಗ ಅತ್ಯಂತ ವೇಗವಾಗಿ ಎಫ್‍ಐಆರ್ ದಾಖಲಿಸಿಕೊಳ್ಳುತ್ತದೆ. ಸಿದ್ದರಾಮಯ್ಯ ಅವರ ಕ್ಷೇತ್ರದಲ್ಲಿ ನೀತಿ ಸಂಹಿತೆ ಜಾರಿಗೂ 2 ಗಂಟೆ ಮುನ್ನ ಸಭೆ ಮಾಡಿದ್ದಕ್ಕೆ ನೋಟೀಸ್ ಜಾರಿ ಮಾಡಿ ಎಫ್‍ಐಆರ್ ದಾಖಲಿಸಲಾಗಿದೆ. ನಮ್ಮಿಂದ ನೀತಿ ಸಂಹಿತೆ ಉಲ್ಲಂಘನೆಯಾದರೆ ಪ್ರಕರಣ ದಾಖಲಿಸಿ ನಾವು ಅದಕ್ಕೆ ವಿರೋಧ ವ್ಯಕ್ತಪಡಿಸುವುದಿಲ್ಲ. ಆದರೆ ಇದೇ ರೀತಿಯ ಕ್ರಮವನ್ನು ಬಿಜೆಪಿ ನಾಯಕರ ವಿರುದ್ಧವೂ ಕೈಗೊಳ್ಳಬೇಕು ಎಂದು ಲಕ್ಷ್ಮಣ್ ಆಗ್ರಹಿಸಿದರು.
ಎಐಸಿಸಿ ವಕ್ತಾರ ಗೌರವ್ ವಲ್ಲಭ್ ಮಾತನಾಡಿ, ಸಿಆರ್‍ಪಿಎಫ್ ಕಾನ್ಸ್‍ಟೇಬಲ್ ನೇಮಕಾತಿಯಲ್ಲಿ ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ನಿರಾಕರಿಸಿರುವವರೆಗೆ ಪ್ರತಿ ಹಂತದಲ್ಲಿ ಕನ್ನಡಿಗರ ಮೇಲೆ ಅನ್ಯಾಯವಾಗುತ್ತಿದೆ. ಇಷ್ಟೆಲ್ಲಾ ಆಗುತ್ತಿದ್ದರೂ ಬೊಮ್ಮಾಯಿ ಸರಕಾರ ಹಾಗೂ ಬಿಜೆಪಿ ಸಂಸದರು ಮೌನಕ್ಕೆ ಶರಣಾಗಿದ್ದಾರೆ ಎಂದು ತಿಳಿಸಿದರು.
ಬಿಜೆಪಿಯ ಎಲ್ಲ್ಲ ನಾಯಕರರು ಮೋದಿ ಹಾಗೂ ಅಮಿತ್ ಶಾ ಅವರ ಷಡ್ಯಂತ್ರದ ಪರವಾಗಿ ನಿಂತಿದ್ದಾರೆಯೇ ಹೊರತು, ನಂದಿನಿ ಸಂಸ್ಥೆ ಹಾಗೂ ರೈತರ ಪರವಾಗಿ ಯಾರೊಬ್ಬರೂ ನಿಲ್ಲುತ್ತಿಲ್ಲ. ಬೊಮ್ಮಾಯಿ ಅವರ ಸರಕಾರಕ್ಕೆ ನಂದಿನಿ ಉತ್ಪನ್ನಗಳಿಂದ 40ಪರ್ಸೆಂಟ್ ಕಮಿಷನ್ ಸಿಗುತ್ತಿಲ್ಲ. ಇದೇ ಕಾರಣಕ್ಕೆ ಅವರು ನಂದಿನಿಯನ್ನು ಅಮೂಲ್ ಜತೆ ವಿಲೀನಗೊಳಿಸಲು ಮುಂದಾಗಿದೆ ಎಂದು ಗೌರವ್ ವಲ್ಲಭ್ ಆರೋಪಿಸಿದರು.
ಬಿಜೆಪಿ ಮನೆಯಲ್ಲಿ 9 ಬಾಗಿಲುಗಳಿವೆ:
‘ಬಿಜೆಪಿ ಪಕ್ಷದಲ್ಲಿ ಬಿಎಸ್‍ವೈ ಅವರನ್ನು ಹೊರತು ಪಡಿಸಿ ಪಕ್ಷದ ಟಿಕೆಟ್ ಹಂಚಿಕೆಯ ಸಭೆ ನಡೆಸಲಾಗುತ್ತಿದೆ. ಯಡಿಯೂರಪ್ಪನವರ ಯಾವುದೇ ಬೇಡಿಕೆಯನ್ನು ಬಿಜೆಪಿ ನಾಯಕರು ಪರಿಗಣಿಸುತ್ತಿಲ್ಲ. ಯಡಿಯೂರಪ್ಪ ಹಾಗೂ ಅವರ ಕುಟುಂಬವನ್ನು ರಾಜಕೀಯವಾಗಿ ಮುಗಿಸಲು ಮುಂದಾಗಿದ್ದು, ಬಿಜೆಪಿ ಮನೆಯಲ್ಲಿ 9 ಬಾಗಿಲುಗಳಿವೆ. ಬಿಜೆಪಿಯಲ್ಲಿ ನಡ್ಡಾ ಪಕ್ಷದ ಅಧ್ಯಕ್ಷರೋ ಅಥವಾ ಅಮಿತ್ ಶಾ ಆಪ್ತ ಸಹಾಯಕರೋ ಎಂಬುದು ಅರ್ಥವಾಗುತ್ತಿಲ್ಲ’
-ಲಕ್ಷ್ಮಣ್, ಕೆಪಿಸಿಸಿ ವಕ್ತಾರ