ಪಕ್ಷ ಬಿಟ್ಟು ಯುದ್ಧಕ್ಕೆ ಬಂದರೆ, ನಾವು ಯುದ್ಧ ಮಾಡಲು ಸಿದ್ಧ: ಸಿ.ಟಿ.ರವಿ
''ಈಶ್ವರಪ್ಪ, ಶೆಟ್ಟರ್ ರನ್ನು ಪಕ್ಷ ಬೇರೆ ರೀತಿಯಲ್ಲಿ ಬಳಸಿಕೊಳ್ಳುತ್ತದೆ''
ಬೆಂಗಳೂರು, ಎ.12: ಎಲ್ಲ ಜಾತಿ ಸಮುದಾಯ ವರ್ಗಗಳಿಗೆ ಸಾಮಾಜಿಕ ನ್ಯಾಯದ ಪರಿಕಲ್ಪನೆಯಲ್ಲಿ ಟಿಕೆಟ್ ಹಂಚಿಕೆ ಮಾಡಿದ್ದೇವೆ.ಹೀಗಾಗಿ, ಯಾರು ಪಕ್ಷ ಬಿಡುವ ಮನಸ್ಸು ಮಾಡುವುದಿಲ್ಲ ಎಂಬ ಭಾವನೆ ನನ್ನದು. ಒಂದು ವೇಳೆ ಪಕ್ಷ ಬಿಟ್ಟು ಯುದ್ಧಕ್ಕೆ ಬಂದರೆ ನಾವು ಯುದ್ಧ ಮಾಡಲು ಸಿದ್ಧರಾಗಿದ್ದೇವೆ ಎಂದು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ತಿಳಿಸಿದ್ದಾರೆ.
ಬುಧವಾರ ಬೆಂಗಳೂರು ಪ್ರೆಸ್ ಕ್ಲಬ್ ಆಯೋಜಿಸಿದ್ದ ಮಾಧ್ಯಮ ಸಂವಾದವನ್ನುದ್ದೇಶಿಸಿ ಮಾತನಾಡಿದ ಅವರು, ಕೆ.ಎಸ್.ಈಶ್ವರಪ್ಪ, ಜಗದೀಶ್ ಶೆಟ್ಟರ್ ಅವರನ್ನು ಪಕ್ಷ ಬೇರೆ ರೀತಿಯಲ್ಲಿ ಬಳಸಿಕೊಳ್ಳುತ್ತದೆ ಹೊರತು ಅವರನ್ನು ಮೂಲೆಗುಂಪು ಮಾಡುವ ಪ್ರಶ್ನೆಯೇ ಇಲ್ಲ. ಅಲ್ಲದೆ, ನಮ್ಮದು ರಾಷ್ಟ್ರೀಯ ಪಕ್ಷ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇದ್ದು, ಆಕಾಂಕ್ಷಿಗಳ ಪಟ್ಟಿಯು ದೊಡ್ಡದಿರುತ್ತದೆ. ಕೆಲವೊಮ್ಮೆ ಕೆಲವರಿಗೆ ಟಿಕೆಟ್ ಕೈತಪುತ್ತದೆ. ಇಂತಹ ಅಭ್ಯರ್ಥಿಗಳನ್ನು ಟಿಕೆಟ್ ಘೋಷಣೆಗೂ ಮುಂಚೆನಿಂದಲೂ ಸಮಾಧಾನ ಪಡಿಸುವ ಕಾರ್ಯದಲ್ಲಿ ಪಕ್ಷ ತೊಡಗಿದೆ ಎಂದರು.
ನಮ್ಮ ಯೋಜನೆಗಳು ಯಾವುದೇ ಜಾತಿ, ಧರ್ಮ, ವರ್ಗಗಳ ಮೇಲೆ ರೂಪಿತವಾಗುವುದಿಲ್ಲ. ಸಾಮಾಜಿಕ ನ್ಯಾಯದಡಿ ರೂಪಿತಗೊಂಡು ಎಲ್ಲರಿಗೂ ತಲುಪುವಂತೆ ನಮ್ಮ ಬಿಜೆಪಿ ಸರಕಾರ ಮಾಡುತ್ತಿದೆ ಎಂದ ಅವರು, ಸಿದ್ದರಾಮಯ್ಯ ಅವರ ಸರಕಾರ ಇದ್ದಾಗ ಕೇಂದ್ರದ ಜನಪ್ರಿಯ ಯೋಜನೆ ಕಿಸಾನ್ ಸಮ್ಮಾನ್ ಬಂದಾಗ ರಾಜ್ಯದಿಂದ ಕೇವಲ ಬೆರಳಿಣಿಕೆಯಷ್ಟು ಖಾತೆಗಳನ್ನು ಮಾತ್ರ ಕೇಂದ್ರಕ್ಕೆ ಕಳಿಸಿಕೊಟ್ಟಿದ್ದರು. ನಮ್ಮ ಸರಕಾರ ಬಂದ ಮೇಲೆ 36 ಲಕ್ಷ ರೈತರ ಖಾತೆಗಳನ್ನು ಕೇಂದ್ರಕ್ಕೆ ಕಳುಹಿಸಿ ಇಂದು ಫಲಾನುಭವಿಗಳ ಆಗುವಂತೆ ಮಾಡಿದ್ದೇವೆ ಎಂದು ಹೇಳಿದರು.
ಚುನಾವಣೆ ಅಭ್ಯರ್ಥಿಗಳ ಘೋಷಣೆ ಸಂದರ್ಭದಲ್ಲಿ ಬಂಡಾಯ ಎದ್ದೇಳುವುದು ಸಾಮಾನ್ಯವಾಗಿದೆ. ಆದರೆ, ಬಂಡಾಯ ದೊಡ್ಡ ಹಾನಿ ಮಾಡಲ್ಲ. ನಾಲ್ಕೈದು ದಿನಗಳಲ್ಲಿ ಇದು ಸರಿಯಾಗುತ್ತೆ. ನಾಯಕತ್ವ ಎನ್ನುವುದು ಒಂದೇ ದಿನ ತಯಾರಗಲ್ಲ. ಇದರ ಕುರಿತು ಕಾಂಗ್ರೆಸ್ ಅವರು ಆರೋಪ ಮಾಡುತ್ತಲೇ ಇರಲಿ ಎಂದು ಅವರು ಹೇಳಿದರು.
224 ವಿಧಾನಸಭಾ ಕ್ಷೇತ್ರದಲ್ಲಿ ತಮ್ಮದೇ ಆದ ಅಭಿಪ್ರಾಯ ಸಂಗ್ರಹ ಮಾಡಿ ಟಿಕೆಟ್ ಅಂತಿಮಗೊಳಿಸಲಾಗಿದೆ. ಅದರಲ್ಲೂ ಸಂಘ ಸಂಸ್ಥೆ ಅಭಿಪ್ರಾಯ, ಕೊರ್ ಕಮಿಟಿ ಸಭೆ ನಡೆಸಿ ಆಯ್ಕೆ ಮಾಡಲಾಗಿದ್ದು, ಒಟ್ಟಾರೆ, ಹೊಸ, ಹಳೆ ಮುಖಗಳಿಗೆ ಆದ್ಯತೆ ನೀಡಲಾಗಿದೆ. ಒಟ್ಟಾರೆ, ಎಲ್ಲ ಕ್ಷೇತ್ರಗಳಲ್ಲೂ ಪ್ರಬಲ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗಿದೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಗೆಲುವನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಪ್ರೆಸ್‍ಕ್ಲಬ್ ಆಫ್ ಬೆಂಗಳೂರು ಅಧ್ಯಕ್ಷ ಶ್ರೀಧರ್, ಪ್ರಧಾನ ಕಾರ್ಯದರ್ಶಿ ಬಿ.ಪಿ.ಮಲ್ಲಪ್ಪ ಸೇರಿದಂತೆ ಪ್ರಮುಖರಿದ್ದರು.