ಕಾಂಗ್ರೆಸ್ ಸೇರಲಿರುವ ಲಕ್ಷ್ಮಣ ಸವದಿ: ಡಿಕೆಶಿ ಘೋಷಣೆ
Update: 2023-04-14 12:53 IST
ಬೆಂಗಳೂರು: ಬಿಜೆಪಿ ಟಿಕೆಟ್ ಕೈ ತಪ್ಪಿದ್ದಕ್ಕೆ ಅಸಮಾಧಾನಗೊಂಡಿದ್ದ ಮಾಜಿ ಡಿಸಿಎಂ, ವಿಧಾನ ಪರಿಷತ್ ಸದಸ್ಯ ಲಕ್ಷ್ಮಣ ಸವದಿ ಕಾಂಗ್ರೆಸ್ ಸೇರಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.
ಇಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರ ಜೊತೆ ನಡೆದಿದ್ದ ಸಭೆಯಲ್ಲಿ ಸವದಿ ಕೆಲವು ಬೇಡಿಕೆಗಳನ್ನು ಮುಂದಿಟ್ಟಿದ್ದರೆನ್ನಲಾಗಿದ್ದು, ಇದಕ್ಕೆ ಕಾಂಗ್ರೆಸ್ ನಾಯಕರು ಒಪ್ಪಿಗೆ ಸೂಚಿಸಿದ್ದಾರೆ ಎಂದು ಹೇಳಲಾಗಿದೆ.
ಬಳಿಕ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಅಧಿಕೃತ ನಿವಾಸಕ್ಕೆ ಬೇಟಿ ನೀಡಿ ಕೆಲಕಾಲ ಚರ್ಚೆ ನಡೆಸಿದ ನಂತರ ಲಕ್ಷ್ಮಣ ಸವದಿ ಅವರು ಕಾಂಗ್ರೆಸ್ ಸೇರುವುದಾಗಿ ಘೋಷಿಸಿದರು.
ಇದೇ ವೇಳೆ ಮಾತನಾಡಿದ ಡಿ.ಕೆ ಶಿವಕುಮಾರ್, 'ಯಾವುದೇ ಷರತ್ತುಗಳಿಲ್ಲದೇ ಲಕ್ಷ್ಮಣ ಸವದಿ ಅವರು ಪಕ್ಷ ಸೇರುತ್ತಿದ್ದಾರೆ. ಇಂದು ಸಂಜೆ ಕೆಪಿಸಿಸಿ ಕಚೇರಿಯಲ್ಲಿ ಸವದಿ ಅವರನ್ನು ನಾವೆಲ್ಲ ಸ್ವಾಗತ್ತಿಸುತ್ತೇವೆ' ಎಂದು ತಿಳಿಸಿದರು.