×
Ad

ಸಂವಿಧಾನ ಜಾರಿಗೆ ಬರದೇ ಇದ್ದಿದ್ದರೆ ಸಿಎಂ ಆಗುತ್ತಿರಲಿಲ್ಲ, ಕುರಿ ಮೇಯಿಸುತ್ತಿದ್ದೆ: ಸಿದ್ದರಾಮಯ್ಯ

Update: 2023-04-14 13:09 IST

ಬೆಂಗಳೂರು: ''ಮತ್ತೆ ಮತ್ತೆ ಹೇಳುತ್ತೇನೆ, ಬಾಬಾ ಸಾಹೇಬ್ ಅಂಬೇಡ್ಕರ್ ಚಿಂತನೆಯ ಸಂವಿಧಾನ ಜಾರಿಗೆ ಬರದೆ ಇದ್ದಿದ್ದರೆ ನಾನು ಮುಖ್ಯಮಂತ್ರಿಯಾಗುತ್ತಿರಲಿಲ್ಲ, ಊರಲ್ಲಿ ಕುರಿ ಮೇಯಿಸುತ್ತಿದ್ದೆ'' ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.  

ನನ್ನ ರಾಜಕೀಯ ಬದುಕು ಬಾಬಾ ಸಾಹೇಬರ ಋಣ. ಈ ಋಣ ಸಂದಾಯಕ್ಕೆ ನನ್ನ ರಾಜಕೀಯ ಮುಡಿಪು ಎಂದು ಅಂಬೇಡ್ಕರ್‌ ಜಯಂತಿಯ ಪ್ರಯುಕ್ತ ಸಂವಿಧಾನ ಶಿಲ್ಪಿಗೆ ಸಿದ್ದರಾಮಯ್ಯ ಗೌರವ ನಮನ ಸಲ್ಲಿಸಿದ್ದಾರೆ.

ಈ ಸಂಬಂಧ ಶುಕ್ರವಾರ ಟ್ವೀಟ್ ಮಾಡಿರುವ ಅವರು,  ''ಬಾಬಾಸಾಹೇಬ್ ಅಂಬೇಡ್ಕರ್ ಅವರ ಚಿಂತನೆಯ ಪ್ರತಿರೂಪವಾಗಿರುವ ಸಂವಿಧಾನಕ್ಕೆ ಎದುರಾಗಿರುವ ಬೆದರಿಕೆಯ ವಿರುದ್ಧ ಹೋರಾಡುವುದೇ ಸಂವಿಧಾನ ಶಿಲ್ಪಿಗೆ ನಾವು ಸಲ್ಲಿಸುವ ಅತ್ಯುನ್ನತ ಗೌರವ. ಈ ಹೋರಾಟಕ್ಕೆ ಬಾಬಾಸಾಹೇಬರ ಚಿಂತನೆಗಳು ನಮ್ಮ ಆಯುಧವಾಗಲಿ.  ಅರಿವಿನ ಗುರುವಿಗೆ ಗೌರವದ ನಮನಗಳು'' ಎಂದು ಹೇಳಿದ್ದಾರೆ.

''ಸಾಮಾಜಿಕ ಮತ್ತು ಆರ್ಥಿಕ ಪ್ರಜಾಪ್ರಭುತ್ವ ಸ್ಥಾಪನೆಯಾಗದೆ ರಾಜಕೀಯ ಪ್ರಜಾಪ್ರಭುತ್ವ ಬಾಳಲಾರದು ಎಂಬ ಬಿ.ಆರ್.ಅಂಬೇಡ್ಕರ್ ಎಚ್ಚರಿಕೆಯ ಸಂದೇಶವನ್ನು ನಾನು ಮಂಡಿಸಿರುವ ಹದಿಮೂರು ಬಜೆಟ್ ಗಳಲ್ಲಿ ಪಾಲಿಸಿದ್ದೇನೆ. ಇದು ನಾನು ಬಾಬಾ ಸಾಹೇಬರಿಗೆ ಸಲ್ಲಿಸಿದ ಗೌರವವೂ ಹೌದು'' ಎಂದು ತಿಳಿಸಿದ್ದಾರೆ. 

''ನಿರ್ಲಕ್ಷ್ಯ, ತುಚ್ಛೀಕರಣ, ದೈವೀಕರಣದ ಮೂಲಕ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ದಮನಿಸಲು ಪ್ರಯತ್ನಿಸಿ ವಿಫಲರಾದ ಕೋಮುವಾದಿ ಶಕ್ತಿಗಳು ಈಗ ಬಾಬಾಸಾಹೇಬರನ್ನು ಆಪೋಶನ ತೆಗೆದುಕೊಂಡು ತಮ್ಮವರನ್ನಾಗಿ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಈ ಹುನ್ನಾರದ ಬಗ್ಗೆ ನಾವು ಎಚ್ಚರವಾಗಿರಬೇಕು'' ಎಂದು ಸಿದ್ದರಾಮಯ್ಯ ಹೇಳಿದ್ದಾರೆ. 

Similar News