ಕಾಂಗ್ರೆಸ್ ಸ್ಥಿತಿ ಚಿಂತಾಜನಕವಾಗಿದೆ: ನಳಿನ್ ಕುಮಾರ್ ಕಟೀಲ್ ಟೀಕೆ
ಬೆಂಗಳೂರು, ಎ.15: ಕಾಂಗ್ರೆಸ್‍ನ ಸ್ಥಿತಿ ಚಿಂತಾಜನಕವಾಗಿದ್ದು, ಬೇರೆ ಪಕ್ಷದಿಂದ ಬಂದವರಿಗಾಗಿ ಕಾಯುವ ಸ್ಥಿತಿ ಇದೆ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ ತಂಡಕ್ಕೆ ಸೀಟು ಹಂಚಬೇಕಾದ ದುಸ್ಥಿತಿ ಇದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಟೀಕಿಸಿದ್ದಾರೆ.
ಶನಿವಾರ ಮಲ್ಲೇಶ್ವರದ ಬಿಜೆಪಿ ರಾಜ್ಯ ಮಾಧ್ಯಮ ಕೇಂದ್ರದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಜೆಡಿಎಸ್ ಹಾಸನ ಪೈಪೋಟಿಯ ಬಳಿಕ ಕೊನೆಗೂ ಅಭ್ಯರ್ಥಿ ಘೋಷಣೆ ಆಗಿದೆ. ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಲಿದೆ. ಕಾಂಗ್ರೆಸ್ ಪಕ್ಷದ ಜಗಳ ಮುಂದಿನ ದಿನಗಳಲ್ಲಿ ಬೀದಿಕಾಳಗವಾಗಲಿದೆ ಎಂದರು.
ಮಾ.31ರಂದು ಚುನಾವಣಾ ಪ್ರಕ್ರಿಯೆ ನಡೆದಿದೆ. ಶಕ್ತಿಕೇಂದ್ರ ಬೂತ್ ಪ್ರಮುಖರ ಜೊತೆ ಅಭಿಪ್ರಾಯ ಸಂಗ್ರಹ ಮಾಡಿದ್ದೇವೆ. 10 ದಿನಗಳ ಪ್ರಕ್ರಿಯೆಯಲ್ಲಿ 212 ಅಭ್ಯರ್ಥಿಗಳ ಘೋಷಣೆ ಆಗಿದೆ. ಮತಗಟ್ಟೆ ಅಧ್ಯಕ್ಷರಿಂದ ರಾಷ್ಟ್ರೀಯ ಅಧ್ಯಕ್ಷರವರೆಗೆ ಅಭಿಪ್ರಾಯ ಸಂಗ್ರಹದ ಮೂಲಕ ಅಭ್ಯರ್ಥಿಗಳನ್ನು ಪ್ರಕಟಿಸಿದ್ದೇವೆ ಎಂದು ನಳಿನ್ ಕುಮಾರ್ ಕಟೀಲ್ ತಿಳಿಸಿದರು.
ಯುವಕರ, ವಿದ್ಯಾವಂತರ, ಸಾಮಾಜಿಕ ಕಾರ್ಯಕರ್ತರ ತಂಡ ನಮ್ಮದು. 9 ವೈದ್ಯರು, 52 ಜನ ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸುವವರು, ಮಹಿಳೆಯರು ಸೇರಿ ಮುಂದಿನ ಕರ್ನಾಟಕದ ಅಭಿವೃದ್ಧಿ ಸಾಕಾರಕ್ಕಾಗಿ ಹೊಸ ತಂಡ ಸಿದ್ಧವಾಗಿದೆ. ಬಿಜೆಪಿ, ಮೋದಿ ಪರ ಅಲೆ ಕರ್ನಾಟಕದಲ್ಲಿದೆ. ಯಡಿಯೂರಪ್ಪ, ಬೊಮ್ಮಾಯಿ ಕಾರ್ಯಶೈಲಿ, ಡಬಲ್ ಎಂಜಿನ್ ಸರಕಾರದ ಕಾರ್ಯಶೈಲಿಯನ್ನು ಜನತೆ ಮೆಚ್ಚಿದ್ದಾರೆ ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕಿ ಶೋಭಾ ಕರಂದ್ಲಾಜೆ, ಕೇಂದ್ರ ಸಚಿವ ಭಗವಂತ ಖೂಬಾ, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಎಸ್ಸಿ ಮೋರ್ಚಾ ರಾಜ್ಯ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಉಪಸ್ಥಿತರಿದ್ದರು.