×
Ad

ತಿರುಪತಿ ದೇಗುಲ ಮೂಲತಃ ಬೌದ್ಧ ಮಂದಿರ: ನಟ ಚೇತನ್ ಅಹಿಂಸಾ

Update: 2023-04-15 21:09 IST

ಬೆಂಗಳೂರು, ಎ.15: ಆಂಧ್ರ ಪ್ರದೇಶದಲ್ಲಿರುವ ಪ್ರಸಿದ್ಧ ತಿರುಪತಿ ದೇಗುಲ ಮೂಲತಃ ಬೌದ್ಧ ಮಂದಿರ ಎಂದು ನಟ ಹಾಗೂ ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ತಿಳಿಸಿದ್ದಾರೆ.

ಶನಿವಾರ ಈ ಕುರಿತು ತಮ್ಮ ಫೇಸ್‍ಬುಕ್ ಪುಟದಲ್ಲಿ ಪ್ರತಿಕ್ರಿಯಿಸಿದ ಅವರು, ಇತ್ತೀಚಿನ ಸಂದರ್ಶನವೊಂದರಲ್ಲಿ, ತಿರುಪತಿ ಮೂಲತಃ ಬೌದ್ಧ ಮಂದಿರ ಎಂದು ನಾನು ಹೇಳಿದ್ದೇನೆ. ಕೆ.ಜಮನದಾಸ್ ಅವರು ತಿರುಪತಿ ‘ಬಾಲಾಜಿ ಮೂಲತಃ ಬೌದ್ಧ ಮಂದಿರ' (2001ರ ಎಪ್ರಿಲ್ 14) ಎಂಬ ತಮ್ಮ ಪುಸ್ತಕದಲ್ಲಿ ಈ ಹೇಳಿಕೆಯನ್ನು ಮಾನ್ಯ ಮಾಡಿದ್ದಾರೆ. ಇತಿಹಾಸಕಾರರ ಪ್ರಕಾರ, ದೇವಾಲಯಗಳು ಎಂದಿಗೂ ವೈದಿಕ ಸಂಸ್ಥೆಗಳಾಗಿರಲಿಲ್ಲ. ಅವುಗಳನ್ನು ಬೌದ್ಧ ಧರ್ಮದಿಂದ ವಶಪಡಿಸಿಕೊಳ್ಳಲಾಗಿದೆ, ಆಕ್ರಮಣ ಮಾಡಲಾಗಿದೆ ಎಂದು ಅವರು ಉಲ್ಲೇಖಿಸಿದ್ದಾರೆ.

ಮೊಕದ್ದಮೆ: ಕಾನೂನು ಬದ್ಧವಾದ ಸೂಕ್ತ ಕಾರಣ ನೀಡದೇ ನನ್ನ ಒಸಿಐ ವೀಸಾ ರದ್ದು ಮಾಡಲಾಗಿದ್ದು, ಇದನ್ನು ಪ್ರಶ್ನಿಸಿ ಹೈಕೋರ್ಟ್‍ನಲ್ಲಿ ಮೊಕದ್ದಮೆ ಹೂಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೇನೆ ಎಂದು ಅವರು ತಿಳಿಸಿದ್ದಾರೆ.

ಎ.14ರಂದು ವೀಸಾ ರದ್ದು ಆದೇಶ ಗೊತ್ತಾಗಿದ್ದು ಸದ್ಯದಲ್ಲೇ ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಲಿದ್ದೇನೆ. ಅಲ್ಲದೆ, 18 ವರ್ಷದಿಂದ ನಾನು ಭಾರತದಲ್ಲಿದ್ದೇನೆ. 12 ವರ್ಷಗಳಿಂದ ಸಾಮಾಜಿಕ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದೇನೆ. ನನ್ನ ಸಿದ್ಧಾಂತವನ್ನು ಸೋಲಿಸಲು ಆಗದವರು, ಅನ್ಯ ಮಾರ್ಗಗಳ ಮೂಲಕ ನನ್ನ ಹೋರಾಟವನ್ನು ಹತ್ತಿಕ್ಕಲು ಯತ್ನಿಸುತ್ತಿದ್ದಾರೆ ಎಂದು ನುಡಿದರು.

ನನ್ನ ವಿರುದ್ಧದ ಯಾವುದೇ ಪ್ರಕರಣವೂ ಸಾಬೀತಾಗಿಲ್ಲ. ಇಂತಹ ಸ್ಥಿತಿಯಲ್ಲಿ ಏಕಾಏಕಿ ವೀಸಾ ರದ್ದುಪಡಿಸಿರುವುದು ನ್ಯಾಯಸಮ್ಮತವಲ್ಲ ಎಂದ ಅವರು, ಬ್ಯಾಹ್ಮಣ್ಯದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ಆರೋಪದ ಪ್ರಕರಣಕ್ಕೆ ನ್ಯಾಯಾಲಯದ ತಡೆಯಾಜ್ಞೆ ಇದೆ. ಉಳಿದಂತೆ, ಮೂರು ಪ್ರಕರಣಗಳಲ್ಲಿ ವಿಚಾರಣೆ ನಡೆಯುತ್ತಿದೆ ಎಂದು ಅವರು ಮಾಹಿತಿ ನೀಡಿದರು.

Similar News