×
Ad

ಅಂಬೇಡ್ಕರ್ ಗೆ ಬಿಜೆಪಿ ಶಾಸಕನಿಂದ ಅವಮಾನ: ಆರೋಪ

Update: 2023-04-16 23:43 IST

ಬೆಂಗಳೂರು: ‘ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯಂದು ಬಿಜೆಪಿ ಶಾಸಕ ಎಸ್.ರಘು ತಮಗೆ ಹಾಕಿದ ಹಾರವನ್ನೇ ಅಂಬೇಡ್ಕರ್‍ರ ಪ್ರತಿಮೆಗೆ ಹಾಕಿ ಅವಮಾನ ಮಾಡಿದ್ದಾರೆ’ ಎಂದು ಆಮ್ ಆದ್ಮಿ ಪಾರ್ಟಿಯ ಸಿ.ವಿ.ರಾಮನ್ ನಗರ ಅಭ್ಯರ್ಥಿ ಹಾಗೂ ರಾಜ್ಯ ಕಾರ್ಯಾಧ್ಯಕ್ಷ ಮೋಹನ್ ದಾಸರಿ ಆರೋಪ ಮಾಡಿದರು.

ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಶಾಸಕ ಎಸ್.ರಘು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಬೆಂಬಲಿಗರು ಎಸ್.ರಘುಗೆ ಹೂವಿನ ಹಾರ ಹಾಕಿದ್ದರು. ನಂತರ ಆ ಹಾರವನ್ನು ತಮ್ಮ ಕೊರಳಿಂದ ತೆಗೆದು ಅಂಬೇಡ್ಕರ್ ಪ್ರತಿಮೆಗೆ ಹಾಕಿದ್ದಾರೆ. ಉಪಯೋಗಿಸಿದ ಹಾರವನ್ನು ಹಾಕುವ ಮೂಲಕ ಸಂವಿಧಾನ ಶಿಲ್ಪಿಗೆ ಅವಮಾನ ಮಾಡಿದ್ದಾರೆ. ಇದು ಶಾಸಕ ಎಸ್.ರಘುರವರ ದುರಹಂಕಾರದ ಪರಮಾವಧಿ ಎಂದು ದೂರಿದರು.

ಬಾಬಾ ಸಾಹೇಬರನ್ನು ಬಿಜೆಪಿ ಎಷ್ಟು ಕೇವಲವಾಗಿ ನೋಡುತ್ತದೆ ಎಂಬುದು ಇದರಿಂದ ತಿಳಿಯುತ್ತದೆ. ರಘು ಮಾಡಿರುವ ಈ ದುಷ್ಕೃತ್ಯ ವಿಡಿಯೋದಲ್ಲಿ ಸೆರೆಯಾಗಿದೆ. ಘಟನೆ ತಿಳಿದ ಕೂಡಲೇ ನಾನು ಆಮ್ ಆದ್ಮಿ ಪಾರ್ಟಿ ಕಾರ್ಯಕರ್ತರ ಜೊತೆಗೂಡಿ ಎಸ್.ರಘು ಹಾಕಿದ್ದ ಸೆಕೆಂಡ್ ಹ್ಯಾಂಡ್ ಹಾರವನ್ನು ತೆಗೆದು, ಪ್ರತಿಮೆಯನ್ನು ತೊಳೆದು, ಹೊಸ ಹಾರವನ್ನು ಹಾಕಿದ್ದೇವೆ. ಅಂಬೇಡ್ಕರ್ ಬಗ್ಗೆ ಎಸ್.ರಘುಗೆ ಸ್ವಲ್ಪವಾದರೂ ಗೌರವವಿದ್ದರೆ ಪ್ರತಿಮೆಯ ಬಳಿ ನಿಂತು ಕ್ಷಮೆ ಕೇಳಲಿ ಎಂದು ಅವರು ಆಗ್ರಹಿಸಿದರು.

Similar News