KMF: ನೇಮಕಾತಿ ಪಟ್ಟಿ ಪ್ರಕಟ ತಡೆಯಾಜ್ಞೆ ತೆರವುಗೊಳಿಸಿದ ಹೈಕೋರ್ಟ್

Update: 2023-04-20 12:58 GMT

ಬೆಂಗಳೂರು, ಎ.20: ಕರ್ನಾಟಕ ಹಾಲು ಮಹಾಮಂಡಲದ(ಕೆಎಂಎಫ್) 487 ಹುದ್ದೆಗಳ ನೇಮಕಾತಿ ಕುರಿತಂತೆ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಲು ವಿಧಿಸಿದ್ದ ಮಧ್ಯಂತರ ತಡೆಯಾಜ್ಞೆಯನ್ನು ಹೈಕೋರ್ಟ್ ತೆರವುಗೊಳಿಸಿದೆ. 

ಈ ಸಂಬಂಧ ಚಿಕ್ಕಬಳ್ಳಾಪುರ ಜಿಲ್ಲೆಯ ಐತಪ್ಪನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘ ಸೇರಿದಂತೆ ಒಟ್ಟು  ಐದು ಸಂಘಗಳು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ ಮತ್ತು ನ್ಯಾಯಮೂರ್ತಿ ಎಂಜಿಎಸ್ ಕಮಲ್ ಅವರಿದ್ದ ನ್ಯಾಯಪೀಠ, ತಡೆಯಾಜ್ಞೆ ತೆರವುಗೊಳಿಸಿದೆ.

ಅಲ್ಲದೇ, ನೇಮಕಾತಿಗೆ ಸಂಬಂಧಿಸಿದಂತೆ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಿ, ನೇಮಕಾತಿ ಆದೇಶ ನೀಡಲು ಅನುಮತಿಸಿದೆ. ಆದರೆ, ಆಯ್ಕೆ ಪಟ್ಟಿ ಪ್ರಕಟ ಮತ್ತು ನೇಮಕಾತಿ ಆದೇಶ ನೀಡಿರುವುದು ಅರ್ಜಿಯ ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತದೆ ಎಂದು ತಿಳಿಸಿದೆ. 

‘ನೇಮಕದಲ್ಲಿ ಭಾರಿ ಭ್ರಷ್ಟಾಚಾರ ನಡೆದಿದ್ದು ಅಭ್ಯರ್ಥಿಗಳ ಅಂಕಗಳನ್ನು ತಿದ್ದಲು ಪ್ರತಿ ಹುದ್ದೆಗೆ  30 ಲಕ್ಷದಿಂದ 50 ಲಕ್ಷದವರೆಗೆ ಲಂಚ ಪಡೆಯಲಾಗಿದೆ’ ಎಂಬುದು ಅರ್ಜಿದಾರರ ಆರೋಪ.

487 ಹುದ್ದೆಗಳ ನೇಮಕಕ್ಕೆ ಕೆಎಂಎಫ್ 2022ರ ಅ.20ರಂದು ಅಧಿಸೂಚನೆ ಹೊರಡಿಸಿತ್ತು. ನೇಮಕಾತಿ ಪ್ರಕ್ರಿಯೆ ನಡೆಸಲು ಗುಜರಾತ್‍ನ ಆನಂದ ಜಿಲ್ಲೆಯ ಇನ್‍ಸ್ಟಿಟ್ಯೂಟ್ ಆಫ್ ರೂರಲ್ ಮ್ಯಾನೇಜ್ ಮೆಂಟ್ ಏಜೆನ್ಸಿಯನ್ನು ನೇಮಕ ಮಾಡಿಕೊಳ್ಳಲಾಗಿತ್ತು. ಪರೀಕ್ಷೆಯ ನಂತರ, 2023ರ ಫೆ.2ರಿಂದ 28ವರೆಗೆ ಸಂದರ್ಶನ ನಡೆಸಿ ಅಂತಿಮ ಪಟ್ಟಿ ಸಿದ್ಧಪಡಿಸಲಾಗಿದೆ.

Similar News