ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣ: ತನಿಖೆ ಪ್ರಶ್ನಿಸಿ ಡಿಕೆಶಿ ಸಲ್ಲಿಸಿದ್ದ ಅರ್ಜಿ ಹೈಕೋರ್ಟ್‍ನಿಂದ ವಜಾ

Update: 2023-04-20 15:19 GMT

ಬೆಂಗಳೂರು, ಎ.20: ಆದಾಯ ಮೀರಿ ಆಸ್ತಿ ಗಳಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆಗೆ ಶಿಫಾರಸು ಮಾಡಿ ರಾಜ್ಯ ಸರಕಾರ ಹೊರಡಿಸಿದ ಅಧಿಸೂಚನೆ ಪ್ರಶ್ನಿಸಿ ಕನಕಪುರ ಶಾಸಕ ಡಿ.ಕೆ.ಶಿವಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ.

ಡಿ.ಕೆ. ಶಿವಕುಮಾರ್ ಸಲ್ಲಿಸಿದ್ದ ರಿಟ್ ಅರ್ಜಿ ಕುರಿತ ವಿಚಾರಣೆಯನ್ನು ಎ.17ರಂದು ಪೂರ್ಣಗೊಳಿಸಿದ್ದ ಹೈಕೋರ್ಟ್, ತೀರ್ಪುನ್ನು ಕಾಯ್ದಿರಿಸಿತ್ತು. ಗುರುವಾರ ಈ ಆದೇಶವನ್ನು ಪ್ರಕಟಿಸಿದೆ.

ಆದಾಯ ಮೀರಿದ ಆಸ್ತಿ ಗಳಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆಗೆ ಅನುಮತಿ ನೀಡಿದ ಸರಕಾರದ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದ ಡಿ.ಕೆ.ಶಿವಕುಮಾರ್ ಅವರಿಗೆ ಆರಂಭದಲ್ಲಿ ಕೊಂಚ ನೆಮ್ಮದಿ ಸಿಕ್ಕಿತ್ತು. ಫೆ.24ರವರೆಗೂ ಸಿಬಿಐ ತನಿಖೆಗೆ ಮಧ್ಯಂತರ ತಡೆ ನೀಡಿ ಹೈಕೋರ್ಟ್ ಆದೇಶ ಹೊರಡಿಸಿತ್ತು. 

ಬಳಿಕ ನಡೆದ ವಿಚಾರಣೆಗಳ ಸಮಯದಲ್ಲಿ ಕೋರ್ಟ್, ಮಾ.31ಕ್ಕೆ, ಎ.6ಕ್ಕೆ, ಎ.13ಕ್ಕೆ, ಎ. 17ರವರೆಗೆ ಮಧ್ಯಂತರ ತಡೆ ವಿಸ್ತರಿಸಿತ್ತು. ಇದೀಗ ಮತ್ತೆ ವಿಸ್ತರಣೆಗೊಂಡಿದೆ. ಆದರೆ, ವಿಚಾರಣೆ ಅಂತ್ಯಗೊಂಡಿದ್ದು, ತೀರ್ಪು ಕಾಯ್ದಿರಿಸಲಾಗಿತ್ತು. ಆ ತೀರ್ಪು ಎ.20ರಂದು ಬಂದಿದೆ.  

ಡಿಕೆಶಿ ಬಂಧನವಿಲ್ಲ: ಅರ್ಜಿ ವಜಾಗೊಂಡರೂ ಡಿ.ಕೆ.ಶಿವಕುಮಾರ್ ಅವರಿಗೆ ಸದ್ಯಕ್ಕೆ ಬಂಧನದ ಭೀತಿ ಇಲ್ಲ. ಸಿಬಿಐ ತನಿಖೆ ಪ್ರಶ್ನಿಸಿ ಮತ್ತೊಂದು ಅರ್ಜಿಯನ್ನು ಅವರು ಹೈಕೋರ್ಟ್‍ಗೆ ಸಲ್ಲಿಸಿದ್ದು, ಅದರ ವಿಚಾರಣೆಯನ್ನು ಮೇ ಅಂತ್ಯದವರೆಗೆ ಮುಂದೂಡಲಾಗಿದೆ. ಜತೆಗೆ, ಅಲ್ಲಿಯವರೆಗೆ ತನಿಖೆಗೆ ನೀಡಲಾಗಿರುವ ತಡೆಯಾಜ್ಞೆ ಮುಂದುವರಿಯಲಿದೆ ಎಂದು ಹೈಕೋರ್ಟ್ ಬುಧವಾರ ಹೇಳಿತ್ತು.

ಚುನಾವಣೆ ಸ್ಪರ್ಧೆಗೂ ಅಡ್ಡಿ ಇಲ್ಲ: ಸಿಬಿಐ ತನಿಖೆ ಪ್ರಶ್ನಿಸಿ ಸಲ್ಲಿಸಿರುವ ಮತ್ತೊಂದು ಅರ್ಜಿಯ ವಿಚಾರಣೆ ಮುಂದೂಡಿಕೆಯಾಗಿರುವುದು ಮತ್ತು ಅಲ್ಲಿಯವರೆಗೆ ಸಿಬಿಐ ತನಿಖೆಗೆ ನೀಡಲಾಗಿರುವ ತಡೆಯಾಜ್ಞೆ ಮುಂದುವರಿಯಲಿದೆ ಎಂದು ಹೈಕೋರ್ಟ್ ಹೇಳಿರುವ ಕಾರಣ ಚುನಾವಣೆಗೆ ಸ್ಪರ್ಧಿಸಲು ಡಿಕೆಶಿ ಅವರಿಗೆ ಯಾವುದೇ ಸಮಸ್ಯೆ ಆಗದು.

ಪ್ರಕರಣವೇನು?: ‘ಭ್ರಷ್ಟಾಚಾರ ನಿಗ್ರಹ ಕಾಯ್ದೆ-1988ರ ಕಲಂ 13(2), 13(1)(ಇ) ಅಡಿಯಲ್ಲಿ 2020ರ ಅ.3ರಂದು ಸಿಬಿಐ ಪ್ರಕರಣ ದಾಖಲಿಸಿದ್ದು, ಸಿಬಿಐ ತನಿಖೆಗೆ ಒಪ್ಪಿಸಲಾದ ರಾಜ್ಯ ಸರಕಾರದ ಕ್ರಮವನ್ನು ಪ್ರಶ್ನಿಸಿ ಶಿವಕುಮಾರ್ ಈ ಅರ್ಜಿ ಸಲ್ಲಿಸಿದ್ದಾರೆ. 

Similar News