ನಾಳೆ ರಾಜ್ಯಕ್ಕೆ ಅಮಿತ್ ಶಾ, ಜೆ.ಪಿ.ನಡ್ಡಾ ಆಗಮನ
ಬೆಂಗಳೂರು, ಎ.20: ಕೇಂದ್ರ ಗೃಹ ಮತ್ತು ಸಹಕಾರ ಖಾತೆ ಸಚಿವ ಅಮಿತ್ ಶಾ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ನಾಳೆ(ಎ.21) ಕರ್ನಾಟಕ ರಾಜ್ಯಕ್ಕೆ ಭೇಟಿ ಕೊಡಲಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು ತಿಳಿಸಿದ್ದಾರೆ.
ಅಮಿತ್ ಶಾ ಮಧ್ಯಾಹ್ನ 3.20ಕ್ಕೆ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದು, ಬಳಿಕ 3.45ರಿಂದ ಸಂಜೆ 5.15ರ ವರೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿಜಯಪುರ ಪಟ್ಟಣದಲ್ಲಿ ದೇವನಹಳ್ಳಿ ಕ್ಷೇತ್ರಕ್ಕೆ ಸಂಬಂಧಿಸಿದ ರೋಡ್ ಶೋದಲ್ಲಿ ಪಾಲ್ಗೊಳ್ಳಲಿದ್ದಾರೆ.
ಸಂಜೆ 6.10ರಿಂದ ಪಕ್ಷದ ಸಭೆಯಲ್ಲಿ ಪಾಲ್ಗೊಳ್ಳುವರು. ಎ.22ರಂದು ಬೆಳಗ್ಗೆ 10.30ಕ್ಕೆ ನಗರದ ರಿಡ್ಜ್ ಕಾರ್ಲಟನ್ ಹೋಟೆಲ್‍ನಲ್ಲಿ ‘ಇಂದಿನ ವರೆಗಿನ ಕರ್ನಾಟಕ ಪಂಚಾಯತ್’ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ನಂತರ, ಮಧ್ಯಾಹ್ನ ಅಮಿತ್ ಶಾ ದಿಲ್ಲಿಗೆ ಹಿಂತಿರುಗಲಿದ್ದಾರೆ.
ಜೆ.ಪಿ.ನಡ್ಡಾ ರಾಜ್ಯ ಪ್ರವಾಸ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಬೆಳಗ್ಗೆ 11.30ಕ್ಕೆ ಬೀದರ್ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದು, 11.45ಕ್ಕೆ ರಾಮಕೃಷ್ಣ ಆಶ್ರಮಕ್ಕೆ ಭೇಟಿ ಕೊಡಲಿದ್ದಾರೆ. ಮಧ್ಯಾಹ್ನ 1.05 ಗಂಟೆಯಿಂದ ಹೋಟೆಲ್ ವೈಬ್‍ನಲ್ಲಿ ಮತದಾರರು ಮತ್ತು ಪ್ರಮುಖರ ಜೊತೆ ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಸಂಜೆ 4.10ರಿಂದ ಘಾಲೆ ಲಕ್ಸುರಿ ಕನ್ವೆನ್ಶನ್ ಹಾಲ್‍ನಲ್ಲಿ ಜನಪ್ರತಿನಿಧಿಗಳ ಜೊತೆ ಸಭೆ, 4.50ರಿಂದ ಪಕ್ಷದ ಪ್ರಮುಖರ ಜೊತೆ ನಡ್ಡಾ ಸಮಾಲೋಚನೆ ನಡೆಸಲಿದ್ದಾರೆ. ಸಂಜೆ 6 ಗಂಟೆಯಿಂದ ರೋಡ್ ಶೋ, ರಾತ್ರಿ 8.45ರಿಂದ ಹೋಟೆಲ್ ವೈಬ್‍ನಲ್ಲಿ ಜಿಲ್ಲಾ ಸಂಘಟನಾತ್ಮಕ ಸಭೆಯಲ್ಲಿ ಭಾಗವಹಿಸಿದ ಬಳಿಕ ಪ್ರವಾಸಿ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಲಿದ್ದಾರೆ. ನಂತರ, ರಾತ್ರಿ ವಿಶೇಷ ವಿಮಾನದಲ್ಲಿ ಹೊಸದಿಲ್ಲಿಗೆ ಹಿಂತಿರುಗಲಿದ್ದಾರೆ.