ಈಶ್ವರಪ್ಪಗೆ ಕರೆ ಮಾಡಿ ಪ್ರಶಂಸಿಸಿದ ಪ್ರಧಾನಿ ಮೋದಿ: ದೇಶದ ಪ್ರಜಾಪ್ರಭುತ್ವಕ್ಕೆ ಅತ್ಯಂತ ಕರಾಳ ದಿನ ಎಂದ ಸುರ್ಜೇವಾಲಾ

Update: 2023-04-21 12:55 GMT

ಬೆಂಗಳೂರು, ಎ. 21: ‘ದೇಶದ ಪ್ರಜಾಪ್ರಭುತ್ವಕ್ಕೆ ಇಂದು ಅತ್ಯಂತ ಕರಾಳ ದಿನ, ಪ್ರಧಾನಿ ಕಚೇರಿ ದೇಶಕ್ಕೆ ಅಪಮಾನ ಮಾಡುವ ಮೂಲಕ ಮೋದಿ ಅಪರಾಧ ಕೃತ್ಯವನ್ನು ಎಸಗಿದ್ದಾರೆ. ಕರ್ನಾಟಕದ ಇತಿಹಾಸದಲ್ಲಿ ಶೇ.40ರಷ್ಟು ಕಮಿಷನ್ ಭ್ರಷ್ಟಾಚಾರಕ್ಕೆ ಅಂಕಿತ ಹಾಕಿದ ದಿನವಾಗಿ ಉಳಿಯಲಿದೆ. ಈ ದಿನ ಮೋದಿ ಅವರು ಕರ್ನಾಟಕದ ಬಿಜೆಪಿ ಕಾರ್ಯಕರ್ತರ ಜೀವಕ್ಕೆ ಬೆಲೆ ಇಲ್ಲ ಎಂದು ಹೇಳಿದ ದಿನ’ ಎಂದು ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ಮಾಜಿ ಸಚಿವ ಈಶ್ವರಪ್ಪಗೆ ಕರೆ ಮಾಡಿದ ಪ್ರಧಾನಿ ಮೋದಿ ಕ್ರಮಕ್ಕೆ ಆಕ್ಷೇಪಿಸಿದ್ದಾರೆ.

ಶುಕ್ರವಾರ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮೋದಿ ರಾಜಕೀಯ ಲಾಭ ಹಾಗೂ ಮತ ಗಳಿಕೆಗೆ ಬಿಜೆಪಿ ಯಾವುದೇ ಹಂತಕ್ಕೆ ಬೇಕಾದರೂ ಹೋಗುತ್ತಾರೆ ಎಂದು ಸಾಬೀತಾಗಿರುವ ದಿನ. ಇಂದು ಮೋದಿ ಅವರು ಸತ್ಯಪಾಲ್ ಮಲಿಕ್, ಪ್ರಧಾನಿಗೆ ಭ್ರಷ್ಟಾಚಾರದ ಮೇಲೆ ದ್ವೇಷವಿಲ್ಲ ಎಂಬ ಹೇಳಿಕೆಯನ್ನು ಸಾಬೀತು ಮಾಡಿರುವ ದಿನ. ಬಿಜೆಪಿ ಕಾರ್ಯಕರ್ತ ಸಂತೋಷ್ ಪಾಟೀಲ್ ಅವರ ಸಾವಿಗೆ ಕಾರಣಕರ್ತರಾದ ಮಾಜಿ ಸಚಿವ ಈಶ್ವರಪ್ಪರಿಗೆ ಕರೆ ಮಾಡಿ ಪ್ರಶಂಸೆ ವ್ಯಕ್ತಪಡಿಸಿರುವ ವಿಡಿಯೋ ನಾವೆಲ್ಲರೂ ನೋಡಿದ್ದೇವೆ’ ಎಂದು ಉಲ್ಲೇಖಿಸಿದರು.

‘ಭಾರತದ ಪ್ರಜೆಯಾಗಿ ನಾವು ಪ್ರಧಾನಿಗೆ ಪ್ರಶ್ನೆ ಕೇಳಬಸುತ್ತೇವೆ. ಈಶ್ವರಪ್ಪಗೆ ಶೇ.40ರಷ್ಟು ಕಮಿಷನ್ ನೀಡಲಾಗದೇ ಆತ್ಮಹತ್ಯೆ ಮಾಡಿಕೊಳ್ಳಲಾಗುತ್ತಿದೆ ಎಂದು ಬಿಜೆಪಿ ಕಾರ್ಯಕರ್ತ ಸಂತೋಷ್ ಪಾಟೀಲ್ ಆತ್ಮಹತ್ಯೆ ಪತ್ರ ಬರೆದು ಪ್ರಾಣ ಕಳೆದುಕೊಳ್ಳಲಿಲ್ಲವೇ? ಈ ಬಗ್ಗೆ ಮೋದಿ ಸಂತೋಷ್ ಪಾಟೀಲ್, ಕುಟುಂಬದ ಮನೆಯವರ ಜತೆ ಮಾತನಾಡಿ ಸಂತಾಪ ಸೂಚಿಸಿದ್ದಾರಾ? ಮೋದಿ ಬೆಳಗಾವಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸಂತೋಷ್ ಪಾಟೀಲ್ ಮನೆಗೆ ಭೇಟಿ ನೀಡ್ದದರೇ? ಡಬಲ್ ಇಂಜಿನ್ ಸರಕಾರದಿಂದ ಡಬಲ್ ದ್ರೋಹ ಬಗೆಯಲಾಗಿದೆ’ ಎಂದು ಅವರು ವಾಗ್ದಾಳಿ ನಡೆಸಿದರು. 

‘ಈಶ್ವರಪ್ಪ ಬಿಜೆಪಿ ನಾಯಕರಾಗಿರಬಹುದು, ಆದರೆ ಅವರನ್ನು ಭ್ರಷ್ಟಾಚಾರ ಆರೋಪದ ಮೇರೆಗೆ ಸಚಿವ ಸ್ಥಾನದಿಂದ ಕೆಳಗಿಳಿಸಲಾಗಿತ್ತು. ಇವರ ಮೇಲಿನ ಆರೋಪ ಕಾಂಗ್ರೆಸ್ ಪಕ್ಷ ಮಾಡಿಲ್ಲ, ಪ್ರಾಣ ಬಿಟ್ಟ ಸಂತೋಷ್ ಪಾಟೀಲ್ ತನ್ನ ಆತ್ಮಹತ್ಯೆ ಪತ್ರದಲ್ಲಿ ಆರೋಪ ಮಾಡಲಾಗಿದೆ. ಸಂತೋಷ್ ಪಾಟೀಲ್ ಸಾವಿಗೆ ಈಶ್ವರಪ್ಪ ಕಾರಣವಲ್ಲದಿದ್ದರೆ, ಅವರನ್ನು ಸಚಿವ ಸ್ಥಾನದಿಂದ ಕೆಳಗೆ ಇಳಿಸಿದ್ದು ಯಾಕೆ? ಅವರಿಗೆ ಟಿಕೆಟ್ ಯಾಕೆ ನೀಡಲಿಲ್ಲ?’ ಎಂದು ಸುರ್ಜೆವಾಲಾ ಪ್ರಶ್ನಿಸಿದರು.

‘ಪ್ರಧಾನಿ ಮೋದಿ, ಈಶ್ವರಪ್ಪಗೆ ಕರೆ ಮಾಡಿ ಪ್ರಶಂಸೆ ಮಾಡುವ ಮೂಲಕ ರಾಜ್ಯದಲ್ಲಿ ಶೇ.40ರಷ್ಟು ಕಮಿಷನ್ ಭ್ರಷ್ಟಾಚಾರಕ್ಕೆ ಅನುಮೋದನೆ ನೀಡಿದ್ದಾರೆ. ಪ್ರಧಾನಿ ಈ ನಡೆ ನೋಡಿ ದೇಶದ ಪ್ರಜೆಯಾಗಿ ನನಗೆ ನಾಚಿಕೆಯಾಗುತ್ತಿದೆ. ಪ್ರಧಾನಿ ಮೋದಿ ರೌಡಿ ಶೀಟರ್ ಫೈಟರ್ ರವಿಗೆ ತಲೆ ಬಾಗಿ ನಮಸ್ಕರಿಸುತ್ತಾರೆ. ಭ್ರಷ್ಟಾಚಾರದ ಕಳಂಕ ಹೊತ್ತಿರುವ ಈಶ್ವರಪ್ಪಗೆ ಕರೆ ಮಾಡಿ ಪ್ರಶಂಸೆ ಮಾಡಿರುವುದು ಬಿಜೆಪಿ ಸರಕಾರ ಭ್ರಷ್ಟಾಚಾವನ್ನು ಬೆಂಬಲಿಸಲಿದೆ ಎಂಬುದಕ್ಕೆ ಸಾಕ್ಷಿ. ರಾಜ್ಯದ ಜನ ಕ್ಷಮಿಸುವುದಿಲ್ಲ’

-ರಣದೀಪ್ ಸಿಂಗ್ ಸುರ್ಜೇವಾಲಾ ರಾಜ್ಯ ಕಾಂಗ್ರೆಸ್ ಉಸ್ತುವಾರಿ

Similar News