‘ಹಲಾಲ್, ಹಿಜಾಬ್’ ಚುನಾವಣಾ ವಿಷಯವೇ ಅಲ್ಲ, ಈಗ ಎಲ್ಲವೂ ಮುಗಿದು ಹೊಗಿದೆ: ಸಿಎಂ ಬೊಮ್ಮಾಯಿ
ಬೆಂಗಳೂರು, ಎ.23: ‘ಹಲಾಲ್, ಹಿಜಾಬ್ ಚುನಾವಣಾ ವಿಷಯವೇ ಅಲ್ಲ. ಈಗ ಎಲ್ಲವೂ ಮುಗಿದು ಹೊಗಿದೆ. ರಾಜ್ಯದ ಜನರೇ ಅದನ್ನು ಮರೆತಿದ್ದಾರೆ. ಕರ್ನಾಟಕದಲ್ಲಿ ಎಲ್ಲ ಸಮುದಾಯಗಳು ಸೌಹಾರ್ದತೆಯಿಂದ ಇವೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ರವಿವಾರ ನಗರದಲ್ಲಿ ಖಾಸಗಿ ಸುದ್ದಿವಾಹಿನಿ ಇಂಡಿಯಾ ಟುಡೆ ಕಾಂಕ್ಲೇವ್‍ನಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಾವು ರಾಜ್ಯದಲ್ಲಿ ಆರು ಹೊಸ ನಗರಗಳ ನಿರ್ಮಾಣ ಮಾಡಲು ತೀರ್ಮಾನಿಸಿದ್ದೇವೆ. ಏಳು ಎಂಜಿನಿಯರಿಂಗ್ ಕಾಲೇಜುಗಳನ್ನು ಐಐಟಿ ಮಾದರಿಯಲ್ಲಿ ಅಭಿವೃದ್ಧಿ ಮಾಡಲು ತೀರ್ಮಾನ ಮಾಡಿದ್ದೇನೆ. ನಾಲ್ಕು ಬಂದರು ನಿರ್ಮಾಣ ಮಾಡಲು ತೀರ್ಮಾನವಾಗಿದೆ ಎಂದು ಹೇಳಿದರು.
‘ಬೆಂಗಳೂರು ಅಭಿವೃದ್ಧಿಗೆ ಆದ್ಯತೆ ನೀಡಿದ್ದೇವೆ. ಮೆಟ್ರೊ 3ನೆ ಹಂತ ವಿಸ್ತರಣೆ ಮಾಡುತ್ತಿದ್ದೇವೆ. ಟ್ರಾಫಿಕ್ ಸಮಸ್ಯೆಗೆ ಪರಿಹಾರ ಕಂಡುಕೊಂಡಿದ್ದೇವೆ. ಉತ್ತರ ಕರ್ನಾಟಕ ಭಾಗದಲ್ಲಿ ಕೈಗಾರಿಕೆ ಹಾಗು ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದೆ. ರಾಜ್ಯದ ನಾಡಿಮಿಡಿತವನ್ನು ಅರಿತಿದ್ದು, ಬಿಜೆಪಿ ಬಹುಮತದಿಂದ ಗೆಲ್ಲುವ ವಿಶ್ವಾಸವಿದೆ’ ಎಂದು ಬೊಮ್ಮಾಯಿ ತಿಳಿಸಿದರು.
‘ಮೂವತ್ತು ವರ್ಷದಿಂದ ರಾಜಕಾರಣದಲ್ಲಿದ್ದು, ಸಣ್ಣ-ಪುಟ್ಟ ಚುನಾವಣೆಗಳನ್ನು ಎದುರಿಸಿದ್ದೇನೆ. ಮೇ 13ಕ್ಕೆ ಎಲ್ಲರೂ ನಮಗೆ ಅಭಿನಂದನೆ ಸಲ್ಲಿಸುತ್ತಾರೆ. ಕೋವಿಡ್ ಸಂದರ್ಭದಿಂದ ಹಿಡಿದು ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ. ಹೀಗಾಗಿ ನಮಗೆ ಆತ್ಮವಿಶ್ವಾಸವಿದೆ ಎಂದು ಅವರು ತಿಳಿಸಿದರು.
ಎಲ್ಲದರಲ್ಲೂ ರಾಜಕಾರಣ: ನಂದಿನಿ, ಅಮುಲ್‍ನ್ನು ಮೀರಿಸುತ್ತದೆ. ಸಿದ್ದರಾಮಯ್ಯ ಅವರ ಕಾಲದಲ್ಲಿ 65 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿತ್ತು, ನಮ್ಮ ಅವಧಿಯಲ್ಲಿ 85ಲಕ್ಷ ಲೀಟರ್ ಹಾಲು ಉತ್ಪಾದನೆ ಹೆಚ್ಚಳವಾಗಿದೆ. ಅಮುಲ್‍ಗೆ ವಿರೋಧ ಮಾಡಿದವರು ಸಿದ್ದರಾಮಯ್ಯ. ಅವರ ಅವಧಿಯಲ್ಲಿ ಅಮುಲ್ ಇದ್ದಾಗ ಯಾವುದೇ ವಿರೋಧ ಮಾಡಲಿಲ್ಲ. ಕೆಲವರು ಎಲ್ಲದರಲ್ಲೂ ರಾಜಕಾರಣ ಮಾಡುತ್ತಿದ್ದಾರೆ. ಅವರು ನೀರು, ಹಾಲು ಸೇರಿದಂತೆ ಎಲ್ಲದರಲ್ಲೂ ರಾಜಕಾರಣ ಮಾಡುತ್ತಿದ್ದು, ಹತಾಶಾರಾಗಿದ್ದಾರೆ ಎಂದರು.
ನಂದಿನಿ ಅಮುಲ್‍ಗೆ ಸವಾಲಾಗಲಿದೆ: ರಾಜ್ಯದಲ್ಲಿ ನಾನು ಬಂದ ಮೇಲೆ ಎರಡು ಮೆಗಾ ಡೈರಿ ಸ್ಥಾಪನೆ ಮಾದಿದ್ದು, ನಂದಿನಿ ಅಮುಲ್‍ಗೆ ಸವಾಲಾಗಲಿದೆ. ವಿಪಕ್ಷ ಜನರಿಗೆ ಬೇಡದ ವಿಷಯಗಳನ್ನು ಮುಂದಿಟ್ಟುಕೊಂಡು ವಾದ ಮಾಡುತ್ತಿದ್ದಾರೆ. ನಾವು ಸಾಮಾಜಿಕ ಆರ್ಥಿಕ ಬದಲಾವಣೆ ತರುವ ಪ್ರಯತ್ನ ಮಾಡುತ್ತಿದ್ದೇವೆ. ಕರ್ನಾಟಕಕ್ಕೆ ನವ ರೂಪ ನೀಡಲು ಪ್ರಯತ್ನ ನಡೆಸಿದ್ದೇನೆ. ಥೀಮ್ ಸಿಟಿಗಳು, ಮಾದರಿ ಗ್ರಾಮಗಳು, ಡಿಜಿಟಲೈಸೇಷನ್, ಜನರ ಸುತ್ತ ಅಭಿವೃದ್ಧಿ ಆಗುತ್ತಿದೆ ಹಾಗೂ ಜನರು ಖುಷಿಯಾಗಿರುವಂತೆ ನೋಡಿಕೊಳ್ಳಲಾಗುವುದು ಎಂದರು.
ಶೇ.40ರಷ್ಟು ಕಮಿಷನ್ ಆರೋಪ ಮಾಡಿರುವ ಗುತ್ತಿಗೆ ಸಂಘದವರು ಯಾವುದೇ ದಾಖಲೆ ಕೊಡಲಿಲ್ಲ. ಅವರ ವಿರುದ್ದ ಮಾನನಷ್ಟ ಮೊಕದ್ದಮೆಯಾಗಿ ಜೈಲಿಗೆ ಹೋಗಿ ಬಂದರು. ಅವರ ಹಿಂದೆ ಪ್ರತಿಪಕ್ಷದ ಕೈವಾಡ ಇದೆ. ನಾವು ಟೆಂಡರ್ ವ್ಯವಸ್ಥೆಯಲ್ಲಿ ಸಾಕಷ್ಟು ಬದಲಾವಣೆ ತಂದಿದ್ದೇವೆ. ಸಿದ್ದರಾಮಯ್ಯ ಸರಕಾರದಲ್ಲಿ ಶೇ.60ರಷ್ಟು ಕಾಮಗಾರಿಗೆ ಒಪ್ಪಿಗೆ ನೀಡುತ್ತಿದ್ದರು. ಅದರ ಅರ್ಥ ಏನು? ಎಂದು ಪ್ರಶ್ನಿಸಿದರು.
ಹೈಕಮಾಂಡ್ ನಿರ್ಧಾರ: ಈ ಬಾರಿ ಲಿಂಗಾಯತರ ಜೊತೆಗೆ ಬೇರೆ ಸಮುದಾಯಗಳ ಮತಗಳನ್ನೂ ಹೆಚ್ಚಿಗೆ ಪಡೆಯುತ್ತೇವೆ. ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಸಿಎಂ ಯಾರು ಆಗುತ್ತಾರೆಂದು ಹೈಕಮಾಂಡ್ ನಿರ್ಧರಿಸುತ್ತದೆ. ನನ್ನ ಕೆಲಸ ಪಕ್ಷವನ್ನು ಅಧಿಕಾರಕ್ಕೆ ತರುವುದು. ಕಾಂಗ್ರೆಸ್‍ನಲ್ಲಿ ತೀರ್ಮಾನಗಳನ್ನು ಕುಟುಂಬದಿಂದ ತೆಗೆದುಕೊಳ್ಳುತ್ತಾರೆ. ಪಕ್ಷದಿಂದ ಅಲ್ಲ. ಇಂದಿರಾಗಾಂಧಿ ಕಾಲದಿಂದ ದಿಲ್ಲಿಯಲ್ಲಿಯೇ ನಿರ್ಧಾರ ಆಗುತ್ತಿತ್ತು ಎಂದು ಅವರು ಟೀಕಿಸಿದರು.
ಮೈತ್ರಿ ಇಲ್ಲ:
‘ಕಳೆದ ಚುನಾವಣೆಯಲ್ಲಿ ಫಲಿತಾಂಶ ಬರುವ ಮೊದಲೇ ಕಾಂಗ್ರೆಸ್‍ನವರು ದೇವೇಗೌಡರ ಮನೆಯ ಬಾಗಿಲಿಗೆ ಹೋಗಿ ನಿಂತಿದ್ದರು. ನಾವು ಯಾರ ಜೊತೆಗೂ ಹೊಂದಾಣಿಕೆ ಮಾಡುವುದಿಲ್ಲ. ಕಾಂಗ್ರೆಸ್ ಜೊತೆಗೆ ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಪ್ರತಿದಿನ ಇಬ್ಬರೂ ಬಿಜೆಪಿಯನ್ನು ಟಾರ್ಗೆಟ್ ಮಾಡುತ್ತಾರೆ. ಕಾಂಗ್ರೆಸ್‍ನ ಮೂಲ ಮತದಾರರು ಬಿಜೆಪಿ ಕಡೆಗೆ ವಾಲುತ್ತಾರೆ. ಎಸ್‍ಸಿ ಎಸ್‍ಟಿ, ಒಬಿಸಿ ಬಿಜೆಪಿ ಕಡೆ ಒಲವು ತೋರಿಸುತ್ತಿದ್ದಾರೆ’
-ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ