×
Ad

ಅಕ್ರಮ ವ್ಯವಹಾರ ಆರೋಪ: ಚುನಾವಣಾ ಸ್ಪರ್ಧೆಯಿಂದ ಸಚಿವ ನಿರಾಣಿ ಅನರ್ಹಗೊಳಿಸುವಂತೆ ಕಾಂಗ್ರೆಸ್ ಒತ್ತಾಯ

Update: 2023-04-23 19:08 IST

ಬೆಂಗಳೂರು, ಎ.23: ‘ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಕಾರ್ಖಾನೆಯಲ್ಲಿ 963 ಬೆಳ್ಳಿ ದೀಪಗಳು ಜಪ್ತಿಯಾಗಿದ್ದು, ಇವರ ವಿರುದ್ಧ ಚುನಾವಣೆಯಲ್ಲಿ ಅಕ್ರಮ ಹಣದ ವ್ಯವಹಾರ ಮಾಡಿದ ಸೆಕ್ಷನ್ 171(ಎಚ್) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಈ ಹಿನ್ನೆಲೆ ಚುನಾವಣಾ ಸ್ಪರ್ಧೆಯಿಂದ ಅನರ್ಹಗೊಳಿಸಬೇಕು’ ಎಂದು ಎಐಸಿಸಿ ವಕ್ತಾರ ಗೌರವ್ ವಲ್ಲಭ್ ಒತ್ತಾಯಿಸಿದ್ದಾರೆ.

ರವಿವಾರ ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಇವರ ವಿರುದ್ಧ ಭೂ ಕಬಳಿಕೆ ಹಗರಣವು ಕೇಳಿಬಂದಿತ್ತು. ಬಿಜೆಪಿ ಶೇ.40 ಕಮಿಷನ್ ಸರಕಾರ ರಾಜ್ಯದ 6.50 ಕೋಟಿ ಜನರನ್ನು ಲೂಟಿ ಮಾಡಿದೆ. ಕೇವಲ 963 ಬೆಳ್ಳಿ ದೀಪಗಳು ಮಾತ್ರವಲ್ಲ, 1.82 ಕೋಟಿ ಹಣ, 357ಲಕ್ಷ ಉಡುಗೊರೆಗಳು ಕೂಡ ಜಪ್ತಿಯಾಗಿವೆ. 45 ಲಕ್ಷ ಮೌಲ್ಯದ ಮಾದಕ ವಸ್ತುಗಳು ಕೂಡ ಜಪ್ತಿಯಾಗಿರುವುದು ಆತಂಕಕಾರಿ ಬೆಳವಣಿಗೆ ಎಂದರು.

ಇದುವರೆಗೂ ರಾಜ್ಯದಲ್ಲಿ 82 ಕೋಟಿ ಹಣ, 19 ಕೋಟಿ ಉಡುಗೊರೆ, 56 ಕೋಟಿ ಮೌಲ್ಯದ ಮದ್ಯ, 16 ಕೋಟಿ ಮೌಲ್ಯದ ಡ್ರಗ್ಸ್, 73 ಕೋಟಿ ಮೌಲ್ಯದ ಚಿನ್ನ, 4.2 ಕೋಟಿ ಮೌಲ್ಯದ ಬೆಳ್ಳಿ ಜಪ್ತಿಯಾಗಿದ್ದು, ಚುನಾವಣೆಗೆ ಇನ್ನು 16 ದಿನಗಳು ಬಾಕಿ ಇವೆ. ಒಟ್ಟಾರೆ 253 ಕೋಟಿ ಮೊತ್ತ ಜಪ್ತಿಯಾಗಿದೆ. ಇದು ಯಾರ ಹಣ, ಇದೆಲ್ಲವೂ ಕನ್ನಡಿಗರನ್ನು ಲೂಟಿ ಮಾಡಿರುವ ಹಣ. ಈಗ ಅದನ್ನು ಚುನಾವಣೆ ಸಮಯದಲ್ಲಿ ಬಳಸಲಾಗುತ್ತಿದೆ ಎಂದು ಗೌರವ್ ವಲ್ಲಭ್ ಆಪಾದಿಸಿದರು.

ಭ್ರಷ್ಟಚಾರದ ಆರೋಪಿತ ಮಂತ್ರಿಯೊಬ್ಬರು, ಮತ್ತೊಬ್ಬ ಭ್ರಷ್ಟಾಚಾರದ ಆರೋಪ ಹೊತ್ತಿರುವ ಮಂತ್ರಿಯನ್ನು ಮುಖ್ಯಮಂತ್ರಿ ಎಂದು ಬಿಂಬಿಸಲು ಈ ಹಿಂದೆ ಮುಂದಾಗಿದ್ದರು. ಭ್ರಷ್ಟಾಚಾರ ಆರೋಪ ಹೊತ್ತಿರುವ ಈಶ್ವರಪ್ಪ ಅವರು 2011ರಲ್ಲಿ ನಿರಾಣಿ ಅವರು ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಸಾರ್ವಜನಿಕ ವೇದಿಕೆಯಲ್ಲಿ ಹೇಳಿದ್ದರು. ಹೀಗಾಗಿ ಬಿಜೆಪಿಯಲ್ಲಿ ಸಿಎಂ ಎಂದರೆ ಮತ್ತಷ್ಟು ಭ್ರಷ್ಟನಾಗು ಎಂದರ್ಥ ಎಂದು ಗೌರವ್ ವಲ್ಲಭ್ ಲೇವಡಿ ಮಾಡಿದರು.

ಹಣ, ಉಚಿತ ಉಡುಗೊರೆ, ಬೆಳ್ಳಿ ಸಾಮಾಗ್ರಿ ಜತೆಗೆ ಮಾದಕ ವಸ್ತುಗಳು ನಿರಾಣಿ ಅವರ ಕಾರ್ಖಾನೆ ವ್ಯಾಪ್ತಿಯಲ್ಲಿ ಸಿಕ್ಕಿರುವುದರಿಂದ ಚುನಾವಣಾ ಆಯೋಗ ನಿರಾಣಿ ಅವರನ್ನು ಚುನಾವಣೆ ಸ್ಪರ್ಧೆಯಿಂದ ಹೊರಹಾಕಬೇಕು. ಅವರನ್ನು ಚುನಾವಣೆ ಸ್ಪರ್ಧೆಯಿಂದ ಅನರ್ಹ ಮಾಡಬೇಕು. ಚುನಾವಣೆಯಲ್ಲಿ ಇಷ್ಟೆಲ್ಲಾ ಅಕ್ರಮ ನಡೆಯುತ್ತಿದ್ದರು, ಇಡಿ, ಸಿಬಿಐ, ಡಿಎಫ್‍ಐ, ಡಿಆರ್‍ಐ ತನಿಖಾ ಸಂಸ್ಥೆಗಳು ತನಿಖೆ ಮಾಡದೇ ಕಣ್ಣುಮುಚ್ಚಿ ಕುಳಿತಿವೆ. ಈ ಸಂಸ್ಥೆಗಳು ಕೂಡಲೇ ತನಿಖೆ ಆರಂಭಿಸಬೇಕು ಎಂದು ಗೌರವ್ ವಲ್ಲಭ್ ತಿಳಿಸಿದರು.

Similar News