‘ಚುನಾವಣೆ’ಗಾಗಿ ರಾಜಕೀಯ ಪಕ್ಷಗಳ ಉಚಿತ ಕೊಡುಗೆ ಘೋಷಣೆಯನ್ನು ನಾನು ವಿರೋಧಿಸುವೆ: ನಿರ್ಮಲಾ ಸೀತಾರಾಮನ್

Update: 2023-04-23 15:13 GMT

ಬೆಂಗಳೂರು, ಎ. 23: ‘ಚುನಾವಣೆಗಳನ್ನು ಗೆಲ್ಲಲು ರಾಜಕೀಯ ಪಕ್ಷಗಳು ಉಚಿತ ಕೊಡುಗೆಗಳನ್ನು ಘೋಷಿಸುವುದನ್ನು ನಾನು ವಿರೋಧಿಸುತ್ತೇನೆ. ಅಭಿವೃದ್ಧಿ ಕೆಲಸಗಳಿಗೆ ಮೊದಲು ಆದ್ಯತೆ ನೀಡಿ ನಂತರ ಉಚಿತ ಕೊಡುಗೆಗಳ ಬಗ್ಗೆ ಯೋಚಿಸುವುದು ರಾಜಕೀಯ ಪಕ್ಷಗಳ ಜವಾಬ್ದಾರಿ’ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

ರವಿವಾರ ಜಯನಗರದ ಆರ್.ವಿ.ಡೆಂಟಲ್ ಕಾಲೇಜಿನಲ್ಲಿ ‘ಥಿಂಕರ್ಸ್ ಫಾರಂ ಕರ್ನಾಟಕ’ದ ವತಿಯಿಂದ ಆಯೋಜಿಸಿದ್ದ ಸಂವಾದ ಪಾಲ್ಗೊಂಡು ಮಾತನಾಡಿದ ಅವರು, ‘ಚುನಾವಣಾ ಸಮಯದಲ್ಲಿ ಉಚಿತ ಕೊಡುಗೆಗಳ ಭರವಸೆ ನೀಡಲಾಗುತ್ತದೆ. ಅಧಿಕಾರಕ್ಕೆ ಬಂದ ನಂತರ ಬಜೆಟ್ ಪರಿಶೀಲಿಸಿದರೆ ಅದು ಸಾಧ್ಯವಿಲ್ಲ ಎಂಬುದು ಗೊತ್ತಾಗಲಿದೆ. ಬಡವರಿಗೆ ಉಚಿತ ವಿದ್ಯುತ್ ನೀಡುವ ಭರವಸೆ ನೀಡಲಾಗುತ್ತದೆ. ಕೆಲವು ರಾಜ್ಯಗಳಲ್ಲಿ ಇಂತಹ ಭರವಸೆಗಳನ್ನು ಈಡೇರಿಸಿ, ಉತ್ಪಾದನಾ ಕಂಪೆನಿಗಳಿಗೆ ಹಣ ಪಾವತಿ ಮಾಡಲಾಗುತ್ತಿಲ್ಲ’ ಎಂದು ಹೇಳಿದರು.

‘ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಜನರಿಗೆ ಭರವಸೆಗಳನ್ನು ನೀಡಬೇಕು ಮತ್ತು ಅದರ ಬಗ್ಗೆ ಸಂಪೂರ್ಣ ಪಾರದರ್ಶಕತೆ ಇರಬೇಕು. ಉಚಿತ ಕೊಡುಗೆಗಳನ್ನು ಬಜೆಟ್‍ನಲ್ಲಿ ತೋರಿಸಬೇಕಿದೆ. ವರ್ಷದ ಕೊನೆಯಲ್ಲಿ ಅದನ್ನು ಮತ್ತೆ ಪರಿಶೀಲಿಸಬೇಕಿದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದರು.

‘ಹೂಡಿಕೆ ಮತ್ತು ಉಳಿತಾಯದ ಬಗ್ಗೆ ಉತ್ತಮ ಸಲಹೆ ನೀಡುವ ಕೆಲವು ಉತ್ತಮ ತಜ್ಞರು ಇದ್ದರೂ, ಜನರನ್ನು ದಾರಿತಪ್ಪಿಸುವ ಅಥವಾ ಹೆಚ್ಚಿನ ಆದಾಯವನ್ನು ಭರವಸೆ ನೀಡುವ ಸಂಶಯಾಸ್ಪದ ಅಪ್ಲಿಕೇಶನ್‍ಗಳಿಗೆ ಕಡಿವಾಣ ಹಾಕುವ ಅಗತ್ಯವಿದೆ. ಇಂತಹ ಆಪ್‍ಗಳನ್ನು ನಿಬರ್ಂಧಿಸಲು ಮತ್ತು ನಾಗರಿಕರ ಕಷ್ಟಪಟ್ಟು ಸಂಪಾದಿಸಿದ ಹಣವನ್ನು ರಕ್ಷಿಸಲು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಮತ್ತು ಆರ್‍ಬಿಐ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲು ಮುಂದಾಗಿದೆ ಎಂದು ತಿಳಿಸಿದರು.

ಸ್ಪರ್ಧೆ ಇರಲಿ: ರಾಜ್ಯದ ಉತ್ಪನ್ನವಾದ ನಂದಿನಿಗೆ ಕೇಂದ್ರ ಮತ್ತು ರಾಜ್ಯ ಸರಕಾರ ಸಾಕಷ್ಟು ಪ್ರೋತ್ಸಾಹ ನೀಡಿದೆ. ಕೆಲ ಪಟ್ಟ ಭದ್ರ ಹಿತಾಸಕ್ತಿಗಳು, ರಾಜಕೀಯ ಪಕ್ಷಗಳು, ರಾಜಕಾರಣಿಗಳು ಅಮುಲ್ ಮತ್ತು ನಂದಿನಿಯ ವಿಚಾರವಾಗಿ ಅನಾವಶ್ಯಕ ಗೊಂದಲಗಳನ್ನು ಹುಟ್ಟು ಹಾಕುತ್ತಿದ್ದಾರೆ. ಗ್ರಾಹಕನಿಗೆ ಕಡಿಮೆ ಬೆಲೆಯಲ್ಲಿ ಉತ್ಕೃಷ್ಟ ಉತ್ಪನ್ನ ದೊರೆಯುವುದು ಕೇವಲ ಆರೋಗ್ಯಕರ ಸ್ಪರ್ಧೆ ಇದ್ದಾಗ ಮಾತ್ರ ಸಾಧ್ಯ’ ಎಂದು ಅವರು ಹೇಳಿದರು.

Similar News