ಮಧ್ಯಪ್ರದೇಶ: ಸರಕಾರಿ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೂ ಮುನ್ನ ವಧುಗಳಿಗೆ ಗರ್ಭಧಾರಣೆ ಪರೀಕ್ಷೆ; ವ್ಯಾಪಕ ಟೀಕೆ

Update: 2023-04-24 06:10 GMT

ಭೋಪಾಲ್: ಮಧ್ಯಪ್ರದೇಶ ಸರ್ಕಾರದ ಆರ್ಥಿಕ ದುರ್ಬಲ ವರ್ಗದವರಿಗಾಗಿನ ಸಾಮೂಹಿಕ ವಿವಾಹ ಯೋಜನೆ ಕಾರ್ಯಕ್ರಮದಲ್ಲಿ ವಿವಾಹಕ್ಕೂ ಮುನ್ನ ವಧುಗಳಿಗೆ ಗರ್ಭಧಾರಣೆ ಪರೀಕ್ಷೆ ನಡೆಸಿರುವುದು ವ್ಯಾಪಕ ಟೀಕೆಗೆ ಗುರಿಯಾಗಿದೆ. ಈ ಪರೀಕ್ಷೆಗೆ ಒಳಗಾದ 219 ಯುವತಿಯರ ಪೈಕಿ ಐದು ಮಂದಿ ಯುವತಿಯರು ಗರ್ಭ ಧರಿಸಿರುವುದು ದೃಢವಾಗಿದ್ದು, ಅವರು ಶನಿವಾರ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ವಿವಾಹವಾಗಲಿಲ್ಲ. ಈ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಡಿಂಡೋರಿಯ ಗಡ್ಸರಾಯ್‌ನಲ್ಲಿ ಮುಖ್ಯಮಂತ್ರಿ ಕನ್ಯಾ ವಿವಾಹ/ನಿಖಾ ಯೋಜನೆಯಡಿ ಆಯೋಜಿಸಲಾಗಿತ್ತು ಎಂದು timesnownews.com ವರದಿ ಮಾಡಿದೆ.

ಈ ಕಾರ್ಯಕ್ರಮವು ಸಾರ್ವತ್ರಿಕ ಆಕ್ರೋಶಕ್ಕೆ ಗುರಿಯಾಗಿದ್ದು, ವಿರೋಧ ಪಕ್ಷಗಳು ಈ ನಡೆಯನ್ನು ಪ್ರಶ್ನಿಸುವ ಮೂಲಕ ರಾಜಕೀಯ ಕೆಸರೆರಚಾಟವೂ ಪ್ರಾರಂಭಗೊಂಡಿದೆ. ಈ ಕುರಿತು ಹಲವಾರು ಪ್ರಶ್ನೆಗಳನ್ನೆತ್ತಿರುವ ಕಾಂಗ್ರೆಸ್, ಈ ಪರೀಕ್ಷೆಗೆ ಆದೇಶಿಸಿದವರಾರು ಎಂದೂ ಪ್ರಶ್ನಿಸಿದೆ. ಇದು ಬಡವರಿಗೆ ಮಾಡಿರುವ ಅವಮಾನವೆಂದು ಟೀಕಿಸಿರುವ ಕಾಂಗ್ರೆಸ್, ಘಟನೆಯ ಕುರಿತು ತನಿಖೆ ನಡೆಸಬೇಕು ಎಂದು ಆಗ್ರಹಿಸಿದೆ.

ಇದು ಬಡವರಿಗೆ ಮಾಡಿರುವ ಅವಮಾನ ಎಂದು ಟೀಕಿಸಿರುವ ಕಾಂಗ್ರೆಸ್ ಶಾಸಕ ಓಂಕಾರ್ ಸಿಂಗ್ ಮರ್ಕಮ್, ಗರ್ಭಧಾರಣೆ ಪರೀಕ್ಷೆ ನಡೆಸಲು ಇರುವ ಮಾರ್ಗಸೂಚಿ ಹಾಗೂ ನಿಯಮಗಳು ಕುರಿತು ಸ್ಪಷ್ಟೀಕರಣ ನೀಡುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಕಮಲ್ ನಾಥ್, ಘಟನೆಯ ಕುರಿತು ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ. ಕಾರ್ಯಕ್ರಮದಲ್ಲಿ 200ಕ್ಕೂ ಹೆಚ್ಚು ಯುವತಿಯರನ್ನು ಗರ್ಭಧಾರಣೆ ಪರೀಕ್ಷೆಗೆ ಒಳಪಡಿಸಲಾಯಿತು ಎಂಬ ಮಾಧ್ಯಮ ವರದಿಗಳನ್ನು ಅವರು ಉಲ್ಲೇಖಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಕಮಲ್ ನಾಥ್, "ಈ ಸುದ್ದಿ ನಿಜವೇ ಎಂಬುದನ್ನು ನಾನು ಮುಖ್ಯಮಂತ್ರಿಯವರಿಂದ ತಿಳಿಸಲು ಬಯಸುತ್ತೇನೆ. ಒಂದು ವೇಳೆ ಈ ಸುದ್ದಿ ನಿಜವಾದರೆ, ಯಾರ ಆದೇಶದ ಮೇರೆಗೆ ಮಧ್ಯಪ್ರದೇಶದ ಹೆಣ್ಣುಮಕ್ಕಳನ್ನು ಅವಮಾನಿಸಲಾಯಿತು? ಮುಖ್ಯಮಂತ್ರಿಗಳ ದೃಷ್ಟಿಯಲ್ಲಿ ಬಡವರು ಹಾಗೂ ಬುಡಕಟ್ಟು ಸಮುದಾಯಗಳಿಗೆ ಯಾವುದೇ ಘನತೆ ಇಲ್ಲವೆ? ಶಿವರಾಜ ಸಿಂಗ್ ಚೌಹಾಣ್ ಆಡಳಿತದಲ್ಲಿ ಮಹಿಳೆಯರೊಂದಿಗಿನ ಅನುಚಿತ ವರ್ತನೆಯಲ್ಲಿ ಮಧ್ಯಪ್ರದೇಶ ಮುಂಚೂಣಿಯಲ್ಲಿದೆ" ಎಂದು ಕಿಡಿ ಕಾರಿದ್ದಾರೆ.

ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿಯಾದ ಕಮಲ್ ನಾಥ್ ಅವರು ಘಟನೆಯ ಕುರಿತು ಉನ್ನತ ಮಟ್ಟದ ತನಿಖೆ ನಡೆಸಿ, ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದ್ದಾರೆ. ಇದು ಕೇವಲ ಗರ್ಭಧಾರಣೆ ಪರೀಕ್ಷೆಯ ವಿಚಾರವಲ್ಲ; ಬದಲಿಗೆ ಮಹಿಳೆಯರನ್ನು ತೇಜೋವಧೆಗೊಳಿಸುವ ಪ್ರವೃತ್ತಿ ಎಂದೂ ಟೀಕಿಸಿದ್ದಾರೆ.

ಗರ್ಭಧಾರಣೆ ಪರೀಕ್ಷೆ ನಡೆಸುವಂತೆ ಜಿಲ್ಲಾಡಳಿತದಿಂದ ಯಾವುದೇ ನಿರ್ದೇಶನವಿರಲಿಲ್ಲ. ಆದರೆ, ಕೆಲವು ಸ್ತ್ರೀರೋಗಗಳ ಕುರಿತು ದೂರು ನೀಡಿದ ವಧುಗಳಿಗೆ ವೈದ್ಯಕೀಯ ಪರೀಕ್ಷೆ ನಡೆಸಲು  ಸ್ಥಳದಲ್ಲಿದ್ದ ವೈದ್ಯರು ನಿರ್ಧರಿಸಿದ್ದಾರೆ ಎಂದು ಜಿಲ್ಲೆಯ ಅಧಿಕಾರಿಯೊಬ್ಬರು ಸ್ಪಷ್ಟನೆ ನೀಡಿದ್ದಾರೆ.

ಈ ಕುರಿತು PTI ಸುದ್ದಿ ಸಂಸ್ಥೆಗೆ ಪ್ರತಿಕ್ರಿಯಿಸಿರುವ ದಿಂಡೋರಿ ಜಿಲ್ಲಾಧಿಕಾರಿ ವಿಕಾಸ್ ಮಿಶ್ರಾ, ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರಿಗೆ ರಕ್ತಹೀನತೆ ಪತ್ತೆ ಪರೀಕ್ಷೆ ನಡೆಸಬೇಕು ಎಂದು ಸೂಚಿಸಲಾಗಿತ್ತು ಎಂದು ಹೇಳಿದ್ದಾರೆ.

ಮುಖ್ಯಮಂತ್ರಿ ಕನ್ಯಾ ವಿವಾಹ ಯೋಜನೆಯಡಿ ಅರ್ಹ ದಂಪತಿಗಳಿಗೆ ರಾಜ್ಯ ಸರ್ಕಾರವು ರೂ. 56,000 ಆರ್ಥಿಕ ನೆರವು ಒದಗಿಸುತ್ತದೆ. ಈ ಯೋಜನೆಯನ್ನು ಎಪ್ರಿಲ್ 2006ರಲ್ಲಿ ಜಾರಿಗೊಳಿಸಲಾಗಿತ್ತು.

Similar News