ಸೌಹಾರ್ದಕ್ಕೆ ಹೆಸರಾಗಿದ್ದ ಕರ್ನಾಟಕವನ್ನು ಆರೆಸ್ಸೆಸ್ ಹಾಳು ಮಾಡಿದೆ: ಯೋಗೇಂದ್ರ ಯಾದವ್

Update: 2023-04-25 15:28 GMT

ಬೆಂಗಳೂರು, ಎ.25: ಕರ್ನಾಟಕವು ಶಾಂತಿ, ಸೌಹಾರ್ದ, ಸುವ್ಯವಸ್ಥೆಗೆ ಹೆಸರಾಗಿತ್ತು. ಆದರೆ ಬಿಜೆಪಿ ಹಾಗೂ ಆರೆಸ್ಸೆಸ್ ರಾಜ್ಯವನ್ನು ಹಾಳು ಮಾಡಿವೆ ಎಂದು ಚಿಂತಕ ಯೋಗೇಂದ್ರ ಯಾದವ್ ಅಭಿಪ್ರಾಯಪಟ್ಟರು. 

ಮಂಗಳವಾರ ಪ್ರೆಸ್‍ಕ್ಲಬ್ ಆವರಣದಲ್ಲಿ 'ಎದ್ದೇಳು ಕರ್ನಾಟಕ' ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯು ರಾಜ್ಯದಲ್ಲಿ ಕೋಮುವಾದಿ ವಿಚಾರಗಳನ್ನು ಮುನ್ನೆಲೆಗೆ ತಂದಿದೆ. ಒಕ್ಕೂಟ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತಿದೆ. ಇಂತಹ ಹೊತ್ತಿನಲ್ಲೇ ರಾಜ್ಯದಲ್ಲಿ ಚುನಾವಣೆ ನಡೆಯುತ್ತಿದೆ. ಚುನಾವಣಾ ಫಲಿತಾಂಶವು 2024ರ ಲೋಕಾಸಭೆ ಚುನಾವಣೆಯ ದಿಕ್ಸೂಚಿ ಆಗಲಿದೆ ಎಂದರು.

ರೈತ ಮುಖಂಡ ವೀರಸಂಗಯ್ಯ ಮಾತನಾಡಿ, ಬಿಜೆಪಿ ಸರಕಾರವು ಕೃಷಿಯನ್ನು ಕಡೆಗಣಿಸಿ, ಕಾರ್ಪೋರೇಟ್ ವ್ಯವಸ್ಥೆಯನ್ನು ಬೆಳೆಸಿದೆ. ನಮ್ಮ ಬದುಕಿಗೆ ನಷ್ಟ ಮಾಡಿದ ಕೋಮುವಾದಿ ಪಕ್ಷವನ್ನು ಸೋಲಿಸಬೇಕು ಎಂದರು.

ಜಮಾಅತೆ-ಇಸ್ಲಾಮಿ-ಹಿಂದ್‍ನ ಉಪಾಧ್ಯಕ್ಷ ಯೂಸೂಫ್ ಕನ್ನಿ ಮಾತನಾಡಿ, ನಮ್ಮ ರಾಜ್ಯದಲ್ಲಿ ಅನೇಕ ಧರ್ಮಗಳು ಇವೆ. ಆದರೆ ಬಜೆಪಿ ಸರಕಾರ ಧರ್ಮಗಳ ನಡುವೆ ಜಗಳವನ್ನು ತಂದು ಶಾಂತಿ-ಸೌಹಾರ್ದವನ್ನು ಹಾಳು ಮಾಡುತ್ತಿದೆ. ಕೋಮುವಾದಿ ಹೇಳಿಕೆಗಳನ್ನು ಬಿಜೆಪಿ ನಾಯಕರು ಹಾಗೂ ಸಚಿವರು ಬಹಿರಂಗವಾಗಿ ನೀಡುತ್ತಿದ್ದಾರೆ ಎಂದರು. 

ನಿವೃತ್ತ ಪ್ರಾಧ್ಯಾಪಕ ಪ್ರೊ. ಜಾಫೆಟ್ ಮಾತನಾಡಿ, ನಮ್ಮ ದೇಶದಲ್ಲಿ ಮುಸ್ಲಿಮರ ಹಾಗೂ ಕ್ರೈಸ್ತರ ಮೇಲೆ ದಾಳಿಗಳನ್ನು ನಡೆಸಲಾಗುತ್ತಿದೆ. ಅವರ ಅಲ್ಪಸಂಖ್ಯಾತರು ಎಂಬ ಕಾರಣಕ್ಕೆ ಮಾತ್ರ ದಾಳಿಗಳು ನಡೆಯುತ್ತಿಲ್ಲ. ಬದಲಾಗಿ, ಅವರು ಸಮಾಜದಲ್ಲಿ ಹಿಂದುಳಿದಿದ್ದಾರೆ. ಈ ತಳ ಸಮುದಾಯಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗುತ್ತಿದೆ ಎಂದರು. 

ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯ ಜಿ.ಡಿ. ಗೋಪಾಲ್ ಮಾತನಾಡಿ, ಮನುವಾದಿ ಸರಕಾರವು ಪರಿಶಿಷ್ಟ ಜಾತಿ, ಪಂಗಡ, ಒಬಿಸಿ ಸಮುದಾಯಗಳ ನಡುವೆ ಮೀಸಲಾತಿ ಹೆಸರಿನಲ್ಲಿ ಗೊಂದಲವನ್ನು ಸೃಷ್ಟಿಸಿದೆ. ಸಾಮಾಜಿಕ ನ್ಯಾಯಕ್ಕೆ ಬೆಲೆ ಇಲ್ಲದಂತಾಗುತ್ತದೆ. ಬಿಜೆಪಿ ಸಂವಿಧಾನದ ಪ್ರಕಾರ ಆಡಳಿತ ಮಾಡುತ್ತಿಲ್ಲ, ಹಾಗಾಗಿ ಈ ಸರಕಾರ ಮುಂದುವರೆದರೆ ರಾಜ್ಯವು 100 ವರ್ಷಗಳ ಹಿಂದಕ್ಕೆ ಹೋಗಲಿದೆ ಎಂದರು.

ಪತ್ರಿಕಾಗೋಷ್ಟಿಯಲ್ಲಿ ಲೇಖಕ ರಹಮತ್ ತರಿಕೆರೆ, ಪರಿಸರವಾದಿ ತಾರಾ ರಾವ್, ನೂರ್ ಶ್ರೀಧರ್ ಉಪಸ್ಥಿತರಿದ್ದರು. 

Similar News