×
Ad

ಜಾತಿ ನಿಂದನೆ, ಜೀವ ಬೆದರಿಕೆ ಆರೋಪ: 34ನೆಕ್ಕಿಲಾಡಿ ಗ್ರಾಪಂ ಮಾಜಿ ಸದಸ್ಯೆ, ಆಕೆಯ ಪತಿ ವಿರುದ್ಧ ಪ್ರಕರಣ ದಾಖಲು

Update: 2023-04-25 23:06 IST

ಉಪ್ಪಿನಂಗಡಿ: ಆದಿ ದ್ರಾವಿಡ ಸಮುದಾಯದ ವ್ಯಕ್ತಿಯೋರ್ವರ ಹೆಸರಿನಲ್ಲಿ ಹಣಕಾಸು ಸಂಸ್ಥೆಯಲ್ಲಿ ಸಾಲ ಪಡೆದು ಬಳಿಕ ಕಟ್ಟದೇ, ಕೇಳಲು ಬಂದಾಗ ಅವರಿಗೆ ಜಾತಿ ನಿಂದನೆ ಹಾಗೂ ಜೀವ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿ 34 ನೆಕ್ಕಿಲಾಡಿ ಗ್ರಾ.ಪಂ. ಮಾಜಿ ಸದಸ್ಯೆ  ಸತ್ಯವತಿ ಹಾಗೂ ಆಕೆಯ ಪತಿ ಹರೀಶ್ ಪೂಂಜಾ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

34 ನೆಕ್ಕಿಲಾಡಿ ಗ್ರಾಮದ ಅಣ್ಣಿ ಆದಿ ದ್ರಾವಿಡ ಎಂಬವರ ಪತ್ನಿ ಲೀಲಾ ಎಂಬವರು ಈ ದೂರು ನೀಡಿದ್ದು,  ತನ್ನ ಅತ್ತೆ ಬೊಮ್ಮಿಯವರ ಹೆಸರಿನಲ್ಲಿ ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ ಮಂಜೂರಾದ ಕೊಳವೆ ಬಾವಿಯನ್ನು ಅವರೇ ಉಪಯೋಗಿಸಿಕೊಂಡಿದ್ದು, ಅಲ್ಲದೇ, ನನ್ನ ಮುಗ್ಧತೆಯನ್ನು ಉಪಯೋಗಿಸಿಕೊಂಡು ಹಣಕಾಸು ಸಂಸ್ಥೆಯೊಂದರಿಂದ ನನ್ನ ಹೆಸರಿನಲ್ಲಿ 30 ಸಾವಿರ ಸಾಲ ಪಡೆಯಲು ಹೇಳಿ ಅದನ್ನು ಅವರೇ ತೆಗೆದು ಕೊಂಡಿದ್ದಲ್ಲದೆ, ಅದನ್ನು ಕಟ್ಟಲು ಹೇಳಿದಾಗ ನನಗೆ 34 ನೆಕ್ಕಿಲಾಡಿ ಅಲಿಮಾರ್ ನಿವಾಸಿ ಸತ್ಯವತಿ ಹಾಗೂ ಅವರ ಪತಿ ಹರೀಶ್ ಪೂಂಜಾ ಜಾತಿ ನಿಂದನೆಗೈದು ಕೊಲೆ ಬೆದರಿಕೆ ಒಡ್ಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಇವರು ಮಾಡಿರುವ ವಂಚನೆ ಬಗ್ಗೆ ಪೊಲೀಸ್ ಹಾಗೂ ಕಂದಾಯ ಇಲಾಖೆಗೆ ದೂರು ನೀಡಿದ್ದು, ಈ ಬಗ್ಗೆ ವಿಚಾರಣೆ ನಡೆಯುತ್ತಿದೆ. ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿದ್ದು, ತನಿಖೆ ನಡೆಸುತ್ತಿದ್ದಾರೆ.  

Similar News