ಪ್ರತಿಸ್ಪರ್ಧಿಗೆ ಸಚಿವ ವಿ.ಸೋಮಣ್ಣ ಆಮಿಷ ಒಡ್ಡಿದ ಆರೋಪ: ಚುನಾವಣಾಧಿಕಾರಿಯಿಂದ ತನಿಖೆಗೆ ಸೂಚನೆ

Update: 2023-04-26 14:08 GMT

ಬೆಂಗಳೂರು, ಎ. 26: ಚಾಮರಾಜನಗರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ವಸತಿ ಸಚಿವ ವಿ.ಸೋಮಣ್ಣ ತಮ್ಮ ಪ್ರತಿಸ್ಪರ್ಧಿ ಜೆಡಿಎಸ್ ಅಭ್ಯರ್ಥಿ ಮಲ್ಲಿಕಾರ್ಜುನಸ್ವಾಮಿಗೆ ಚುನಾವಣೆಯಿಂದ ಹಿಂದೆ ಸರಿಯಲು ಆಮಿಷ ಒಡ್ಡಿರುವ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿ ವರದಿ ನೀಡುವಂತೆ ಸ್ಥಳೀಯ ಚುನಾವಣಾಧಿಕಾರಿಗೆ ಸೂಚನೆ ನೀಡಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ತಿಳಿಸಿದರು.

ಬುಧವಾರ ನಗರದ ಶೇಷಾದ್ರಿ ರಸ್ತೆಯಲ್ಲಿರುವ ನಿರ್ವಾಚನ ಸದನ(ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿ)ದಲ್ಲಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ತಮ್ಮ ಪ್ರತಿಸ್ಪರ್ಧಿಗೆ ಆಮಿಷ ಒಡ್ಡಿರುವ ಕುರಿತಾದ ಆಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈವರೆಗೆ ನಮಗೆ ಪ್ರತಿಸ್ಪರ್ಧಿ ಅಭ್ಯರ್ಥಿಯಿಂದ ಯಾವುದೆ ದೂರು ಬಂದಿಲ್ಲ. ಅದಾಗ್ಯೂ, ಈ ಆಡಿಯೊ ಕುರಿತಾದ ಸತ್ಯಾಸತ್ಯತೆ ಕುರಿತು ವಿಚಾರಣೆ ನಡೆಸಿ ವರದಿ ನೀಡುವಂತೆ ಸ್ಥಳೀಯ ಚುನಾವಣಾಧಿಕಾರಿಗೆ ಸೂಚನೆ ನೀಡಲಾಗಿದೆ ಎಂದರು.

ಆರೋಪಕ್ಕೆ ಸಂಬಂಧಿಸಿದಂತೆ ಇಬ್ಬರು ಅಭ್ಯರ್ಥಿಗಳಿಗೂ ಚುನಾವಣಾಧಿಕಾರಿ ನೋಟಿಸ್ ಜಾರಿ ಮಾಡಿ, ಅವರಿಂದ ಪ್ರತಿಕ್ರಿಯೆ ಪಡೆಯಲಿದ್ದಾರೆ. ಆಡಿಯೊದಲ್ಲಿರುವ ಧ್ವನಿ ಸೋಮಣ್ಣ ಅವರದ್ದೆ ಎಂಬುದು ತನಿಖೆಯಿಂದ ಸಾಬೀತಾದಲ್ಲಿ ಚುನಾವಣಾ ಆಯೋಗವು ಕಾನೂನು ರೀತಿ ಮುಂದಿನ ಕ್ರಮ ಕೈಗೊಳ್ಳಲಿದೆ ಎಂದು ಮನೋಜ್ ಕುಮಾರ್ ಮೀನಾ ಹೇಳಿದರು.

ಇದೇ ವೇಳೆ ಚಿಲುಮೆ ಸಂಸ್ಥೆಯು ಸಂಗ್ರಹಿಸಿದ್ದ ಬೆಂಗಳೂರಿನ ಮತದಾರರ ಮಾಹಿತಿಯನ್ನು ವಿದೇಶದ ಸರ್ವರ್‍ನಲ್ಲಿ ಇರಿಸಿದ್ದ ಆರೋಪದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಈ ಸಂಬಂಧ ಬೆಂಗಳೂರು ಪೂರ್ವ ವಿಭಾಗದ ಡಿಸಿಪಿ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ ಎಂದರು.

Similar News