×
Ad

ಎ. 30ರಂದು ಕಾನ್ಸರ್ ಜಾಗೃತಿಗಾಗಿ ಯೆನ್ ರನ್

Update: 2023-04-27 18:54 IST

ಮಂಗಳೂರು, ಎ.27: ಸಾರ್ವಜನಿಕರಲ್ಲಿ ಸಾಮಾನ್ಯ ಕ್ಯಾನ್ಸರ್‌ನ ಆರಂಭಿಕ ಪತ್ತೆಯ ಕುರಿತು ಹೆಚ್ಚಿನ ಅರಿವು ಮೂಡಿಸುವ ಉದ್ದೇಶಕ್ಕಾಗಿ ಝುಲೇಖಾ ಯೆನೆಪೋಯ ಇನ್‌ಸ್ಟಿಟ್ಯೂಟ್ ಆಫ್ ಆಂಕೊಲಾಜಿ ಮತ್ತು  ಯೆನೆಪೋಯ ಡೀಮ್ಡ್  ವಿವಿ ರಾಷ್ಟ್ರೀಯ ಸೇವಾ ಯೋಜನೆ  ವತಿಯಿಂದ  ಎ. 30ರಂದು ಬೆಳಗ್ಗೆ 6ಗಂಟೆಗೆ ಫಿಝಾ ಬೈ ನೆಕ್ಸಸ್   ಮಾಲ್‌ನಿಂದ ಯೆನ್ ರನ್ ಕಾರ್ಯಕ್ರಮ ನಡೆಯಲಿದೆ.

ಮಂಗಳೂರು ಪ್ರೆಸ್ ಕ್ಲಬ್‌ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ  ಮಾಹಿತಿ ನೀಡಿದ ಯೆನೆಪೋಯ ವಿವಿ ವೈನ್ಸ್ ಚಾನ್ಸ್‌ಲರ್ ಡಾ.ಎಂ. ವಿಜಯ ಕುಮಾರ್ ಅವರು ಯೆನ್ ರನ್‌ನಲ್ಲಿ  ಸುಮಾರು 2 ಸಾವಿರ ಮಂದಿ ಭಾಗವಹಿಸುವುದನ್ನು ನಿರೀಕ್ಷಿಸಲಾಗಿದೆ ಎಂದರು.

3 ಕಿ.ಮೀ ಮತ್ತು 5 ಕಿ.ಮೀ ವಿಭಾಗದಲ್ಲಿ ‘ಯೆನ್ ರನ್’ ನಡೆಯಲಿದ್ದು ಫಿಝಾ ನೆಕ್ಸಸ್ ಮಾಲ್‌ನಿಂದ 3 ಕಿ.ಮೀ ಓಟವು ಕೊಡಿಯಾಲ್‌ಬೈಲ್‌ನ  ಯೇನೆಪೋಯ ಆಸ್ಪತ್ರೆಯವರೆಗೆ ಸಾಗಲಿದೆ. 5 ಕಿ.ಮೀ ಓಟವು ಪಿವಿಎಸ್‌ವರೆಗೆ ಸಾಗಲಿದೆ ಎಂದು ಹೇಳಿದರು.

ಚಲನಚಿತ್ರ ನಟ ಮತ್ತು ಗಾಯಕ ಅರ್ಜುನ್ ಕಾಪಿಕಾಡ್, ಅಂತರ್‌ರಾಷ್ಟ್ರೀಯ ಕ್ರೀಡಾಪಟು ಶ್ರೀಮಾ ಪ್ರಿಯದರ್ಶಿನಿ, ಖ್ಯಾತ ನೃತ್ಯಗಾರ್ತಿ ಶ್ವೇತಾ ಅರೆಹೊಳೆ , ಬಾಲ ಕಲಾವಿದೆ ಅರುಶ್  ಕಾರ್ಯಕ್ರಮಕ್ಕೆ ಬ್ರ್ಯಾಂಡ್ ಅಂಬಾಸಡರ್ ಆಗಿರುತ್ತಾರೆ.

ಯೆನೆಪೋಯ ವಿಶ್ವವಿದ್ಯಾನಿಲಯದ ಚಾನ್ಸ್‌ಲರ್  ಡಾ. ಯೆನೆಪೋಯ ಅಬ್ದುಲ್ಲ ಕುಂಞಿ, ಪ್ರೊ ಚಾನ್ಸ್‌ಲರ್ ಫರ್ಹಾದ್ ಯೆನೆಪೋಯ, ರಾಜ್ಯ ಎನ್‌ಎಸ್‌ಎಸ್ ಅಧಿಕಾರಿ  ಪ್ರತಾಪ್ ಲಿಂಗಯ್ಯ, ಮಂಗಳೂರು ನಗರ ಡಿಸಿಪಿ ಅಂಶು ಕುಮಾರ್ , ಎಸಿಪಿ ಟ್ರಾಫಿಕ್  ಗೀತಾ ಕುಲಕರ್ಣಿ , ಅಸರ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷೆ ಡಾ. ಆಶಾ ಜ್ಯೋತಿ ರೈ, ನಕ್ಸಸ್ ಮಾಲ್‌ನ ಕೇಂದ್ರ ನಿರ್ದೇಶಕ   ಅರವಿಂದ್ ಶ್ರೀವಾಸ್ತವ್ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.

ಉಚಿತ ತಪಾಸಣೆಗೆ ಆರೋಗ್ಯ ಕಾರ್ಡ್  ಉಡುಗೊರೆ: ಯೆನ್ ರನ್‌ನಲ್ಲಿ ಭಾಗವಹಿಸುವವರಿಗೆ 4,000 ರೂ. ಮೌಲ್ಯದ ಪಿಎಪಿ ಪರೀಕ್ಷೆ, ಮ್ಯಾಮೊಗ್ರಫಿ, ಓರಲ್ ಸ್ಕ್ರೀನಿಂಗ್, ಎಚ್‌ಬಿ ಬ್ಲಡ್ ಶುಗರ್ ಪರೀಕ್ಷೆಗಳನ್ನು ಸ್ಟ್ರೀನಿಂಗ್ ನಡೆಸಲು ಆರೋಗ್ಯ ಕಾರ್ಡ್ ಗಿಫ್ಟ್ ವೋಚರ್ ನೀಡಲಾಗುವುದು ಎಂದರು.

ಗಿಫ್ಟ್ ವೋಚರ್ ಪಡೆದುಕೊಂಡವರು ತಮಗೆ ಅಗತ್ಯವಿದ್ದರೆ ಬಳಸಿಕೊಳ್ಳಬಹುದು ಅಥವಾ ಇತರರಿಗೆ ನೀಡಬಹುದು ಎಂದು ಮಾಹಿತಿ ನೀಡಿದರು.

ಜಾಗತಿಕವಾಗಿ ಸಾವಿನ ಎರಡನೇ ಪ್ರಮುಖ ಕಾರಣ ಕ್ಯಾನ್ಸರ್  ಆಗಿದೆ.  6 ರಲ್ಲಿ 1 ಸಾವು ಕ್ಯಾನ್ಸರ್‌ನಿಂದ ಉಂಟಾಗುತ್ತವೆ. ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್‌ನ(ಐಸಿಎಂಆರ್) ರಾಷ್ಟ್ರೀಯ ಕ್ಯಾನ್ಸರ್ ನೋಂದಣಿ ಕಾರ್ಯಕ್ರಮದ ಪ್ರಕಾರ  2020 ರಲ್ಲಿ ಭಾರತದಲ್ಲಿ ಕ್ಯಾನ್ಸರ್‌ನಿಂದಾಗಿ ಮರಣ ಪ್ರಮಾಣ 7,70,230 ಆಗಿತ್ತು ಮತ್ತು 2022ರಲ್ಲಿ ಇದು 8,08,558 ಕ್ಕೆ ಏರಿದೆ. ಶ್ವಾಸಕೋಶ, ಬಾಯಿ, ಹೊಟ್ಟೆ, ಮತ್ತು ಅನ್ನನಾಳವು ಪುರುಷರಲ್ಲಿ ಮತ್ತು  ಸ್ತನ ,  ಗರ್ಭಕಂಠದ ಕ್ಯಾನ್ಸರ್ ಮಹಿಳೆಯರಲ್ಲಿ ಕಂಡು ಬರುವ ಅತ್ಯಂತ ಸಾಮಾನ್ಯವಾದ ಕ್ಯಾನ್ಸರ್‌ಗಳಾಗಿವೆ.

ಆರಂಭಿಕ ರೋಗನಿರ್ಣಯವು ರೋಗವನ್ನು ಗುಣಪಡಿಸುವ ಏಕೈಕ ಮಾರ್ಗವಾಗಿದೆ. ಹೆಚ್ಚಿನ ಜಾಗೃತಿ ಮೂಡಿಸುವ ಮೂಲಕ ಮತ್ತು ಸಮಗ್ರ ಮತ್ತು ಸಕಾಲಿಕ ವಿಧಾನದಲ್ಲಿ ಆರೈಕೆ  ರೋಗನಿರ್ಣಯ ಮತ್ತು ಚಿಕಿತ್ಸೆಗೆ ಪ್ರವೇಶವನ್ನು ಒದಗಿಸುವ ಮೂಲಕ ಅದು ಸಾಧ್ಯ ಎಂದು ಡಾ ವಿಜಯ ಕುಮಾರ್ ತಿಳಿಸಿದರು. ಟಾಟಾ ಟ್ರಸ್ಟ್ ಪ್ರಾಯೋಜಿತ ಝುಲೇಖಾ ಯೆನೆಪೋಯ  ಇನ್‌ಸ್ಟಿಟ್ಯೂಟ್ ಆಫ್ ಆಂಕೊಲಾಜಿ  ವತಿಯಿಂದ  ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮ ಮತ್ತು ಮಹಿಳಾ ಸ್ವಾಸ್ಥ್ಯ ಜಾಗೃತಿ ಮಾಸವನ್ನು ಫೆಬ್ರವರಿ 1 ರಿಂದ ಮಾರ್ಚ್ 15 ರವರೆಗೆ ಆಯೋಜಿಸಲಾಗಿತು.

ವಿಶ್ವವಿದ್ಯಾಲಯಯ ವಿವಿಧ ಘಟಕ ಕಾಲೇಜುಗಳಲ್ಲಿ ಒಟ್ಟು 19 ಕಾರ್ಯಕ್ರಮಗಳನ್ನು ನಡೆಸಲಾಗಿತ್ತು.  ವಿಸ್ತರಣಾ ಚಟುವಟಿಕೆಯ ಭಾಗವಾಗಿ ನಾವು ಗ್ರಾಮೀಣ ಪ್ರದೇಶಗಳಲ್ಲಿ ಅನೇಕ ಶಿಬಿರಗಳನ್ನು ಆಯೋಜಿಸಿದ್ದೇವೆ. ಪ್ರತಿ ಶಿಬಿರದಲ್ಲಿ ಮಹಿಳಾ ಕ್ಷೇಮ ಸಂಚಾರಿ ಆರೋಗ್ಯ ಘಟಕವನ್ನು ಬಳಸಿಕೊಂಡು ಸುಮಾರು 80 ಪ್ಯಾಪ್ ಸ್ಮೀಯರ್‌ಗಳು, 25 ಮಮೊಗ್ರಾಮ್ ಮತ್ತು 100 ಬಾಯಿಯ ಕ್ಯಾನ್ಸರ್‌ನ ತಪಾಸಣೆ ನಡೆಸಲಾಗಿದೆ.

30,000 ಕ್ಕೂ ಹೆಚ್ಚು ಎನ್‌ಎಸ್‌ಎಸ್ ಸ್ವಯಂಸೇವಕರು, ಕಾರ್ಯಕ್ರಮ ಅಧಿಕಾರಿಗಳು ಮತ್ತು ಸಾರ್ವಜನಿಕರಿಗೆ ಶಿಕ್ಷಣ ನೀಡಲು ಕ್ರಮ ಕೈಗೊಳ್ಳಲಾಗಿದೆ. ದಕ್ಷಿಣ ಕನ್ನಡ ಉಡುಪಿ ಮತ್ತು ಕೊಡಗು ಜಿಲ್ಲೆಯಲ್ಲಿ ಸುಮಾರು 4,500 ಬುಡಕಟ್ಟು ಜನರನ್ನು  ಎನ್‌ಪಿಡಿ ಸ್ಕ್ರೀನಿಂಗ್‌ಗೆ  ಒಪಡಿಸಲಾಗಿದೆ. ಸ್ಕ್ರೀನಿಂಗ್  ಸಮಯದಲ್ಲಿ ಕ್ಯಾನ್ಸರ್‌ನ  ಆರಂಭಿಕ ಚಿಹ್ನೆಗಳೊಂದಿಗೆ ಪತ್ತೆಯಾದ ಮಂದಿ  ಝುಲೇಖಾ ಆಸ್ಪತ್ರೆಯಲ್ಲಿ ಉಚಿತವಾಗಿ ಚಿಕಿತ್ಸೆ ನೀಡಲಾಗಿದೆ ಎಂದು ವಿಜಯ ಕುಮಾರ್ ಮಾಹಿತಿ ನೀಡಿದರು.

ಯೆನೆಪೋಯ  ವಿಶ್ವವಿದ್ಯಾಲಯದ ಪ್ರೊ ವೈಸ್ ಚಾನ್ಸಲರ್ ಡಾ.ಶ್ರೀಪತಿ ರಾವ್, ಎನ್‌ಎಸ್‌ಎಸ್ ಪ್ರೋಗ್ರಾಂ ಕೋ ಆರ್ಡಿನೇಟರ್ ಡಾ.ಅಶ್ವಿನಿ ಶೆಟ್ಟಿ, ಅಡಿಷನಲ್ ಪ್ರೊಫೆಸರ್ ಡಾ.ಅನುಪಮಾ ರಾವ್, ಆಸಿಫ್ ಉಪಸ್ಥಿತರಿದ್ದರು

Similar News