ಸಮಸ್ಯೆಗಳನ್ನು ಬಗೆಹರಿಸುವ ಪಕ್ಷವನ್ನು ಗೆಲ್ಲಿಸಿ, ಕೋಮುವಾದಿ ಪಕ್ಷವನ್ನು ಸೋಲಿಸಿ: ರೈತ ಸಂಘದ ಪ್ರಣಾಳಿಕೆ ಬಿಡುಗಡೆ
ಬೆಂಗಳೂರು, ಎ.27: ದೇಶದಲ್ಲಿ ಕೃಷಿ ವಲಯ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿದ್ದು, ರೈತರು ಆತ್ಮಹತ್ಯೆಯ ಮೊರೆ ಹೋಗುತ್ತಿದ್ದಾರೆ. ರೈತರ ಸಮಸ್ಯೆಗಳನ್ನು ಬಗೆಹರಿಸುವ ಪಕ್ಷವನ್ನು ರೈತರು ಈ ಚುನಾವಣೆಯಲ್ಲಿ ಗೆಲ್ಲಿಸಿ, ಕೋಮುವಾದಿ ಪಕ್ಷವನ್ನು ಸೋಲಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡ ವೀರಸಂಗಯ್ಯ ತಿಳಸಿದ್ದಾರೆ.
ಗುರುವಾರ ನಗರದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ರೈತಕುಲಕ್ಕೆ ಮಾತ್ರವಲ್ಲದೆ ಇಡೀ ಸಮಾಜಕ್ಕೆ ಮಾರಕವಾಗಿರುವ ಕರ್ನಾಟಕ ಭೂ ಸುಧಾರಣಾ ತಿದ್ದುಪಡಿಯನ್ನು ವಾಪಾಸ್ಸು ಪಡೆದು, ಉಳುವವನೇ ಭೂ ಒಡೆಯನಾಗಿ ಉಳಿಯುವ ಸುಧಾರಣೆಯನ್ನು ರೂಪಿಸಬೇಕು ಎಂದರು.
ಕಾರ್ಪೊರೇಟ್ ಧಣಿಗಳ ಪರವಾಗಿ ನಮ್ಮ ಎಪಿಎಂಸಿ ವ್ಯವಸ್ಥೆಗೆ ತಿದ್ದುಪಡಿಯನ್ನು ತಂದಿದ್ದಾರೆ. ಇದನ್ನು ರದ್ದುಪಡಿಸಿ ರೈತಸ್ನೇಹಿ ಮಾರುಕಟ್ಟೆ ಸುಧಾರಣೆಗಳನ್ನು ಜಾರಿಗೆ ತರಬೇಕು. ಹಾಗೆಯೇ ರೈತಾಪಿ ವಿರೋಧಿ ಗೋ ಹತ್ಯೆ ನಿಷೇಧ ಮತ್ತು ಸಂರಕ್ಷಣಾ ಕಾಯ್ದೆಯನ್ನು ಕೂಡಲೇ ಹಿಂಪಡೆಯಬೇಕು ಎಂದು ಅವರು ಒತ್ತಾಯಿಸಿದರು.
ಕೇಂದ್ರ ಸರಕಾರವು ತಂದಿರುವ ವಿದ್ಯುತ್ ತಿದ್ದುಪಡಿ ಮಸೂದೆ 2022 ಅನ್ನು ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಜಾರಿಗೆ ತರಬಾರದು. ಕೃಷಿ ಪಂಪ್‍ಸೆಟ್‍ಗಳೀಗೆ ಹಗಲು 10 ಗಂಟೆ 3 ಫೇಸ್ ಗುಣಾತ್ಮಕ ವಿದ್ಯುತ್‍ಚ್ಛಕ್ತಿಯನ್ನು ಸರಬರಾಜು ಮಾಡಬೇಕು. ಜಮೀನು ಮತ್ತು ತೋಟಗಳ ವಾಸದ ಮನೆಗಳಿಗೂ ನಿರಂತರ ಜ್ಯೋತಿಯನ್ನು ಒದಗಿಸಬೇಕು ಎಂದು ಅವರು ಒತ್ತಾಯಿಸಿದರು. ಇದೇ ವೇಳೆ ರೈತರ ಹ್ಕೋತ್ತಾಯಗಳನ್ನು ಒಳಗೊಂಡ ರೈತ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಾಯಿತು.
ಸಂಘದ ಮುಖಂಡರಾದ ಬಡಗಲಪುರ ನಾಗೇಂದ್ರ ಸೇರಿ ಮತ್ತಿತರರು ಉಪಸ್ಥಿತರಿದ್ದರು.