ಜೈವಿಕ ಗಾಜು-ಪರಿಸರಕ್ಕೊಂದು ಹೊಸ ಹೆಜ್ಜೆಯಾದೀತೇ?

Update: 2023-04-30 06:03 GMT

ನಿತ್ಯ ಜೀವನದಲ್ಲಿ ಹಲವಾರು ಸಂದರ್ಭಗಳಲ್ಲಿ ಗಾಜನ್ನು ಬಳಸುತ್ತೇವೆ. ಮನೆಯ ಒಳಗೆ ಮತ್ತು ಹೊರಗೆ ಅನೇಕ ಸನ್ನಿವೇಶಗಳಲ್ಲಿ ಗಾಜು ಮತ್ತು ಗಾಜಿನ ಉತ್ಪನ್ನಗಳನ್ನು ಬಳಸುತ್ತೇವೆ. ಗಾಜಿನ ವಸ್ತುಗಳು ನೋಡಲು ಸುಂದರ ಹಾಗೂ ಆಕರ್ಷಕವಾಗಿರುವುದರಿಂದ ಬಹುತೇಕರ ಮನಸೂರೆಗೊಳ್ಳುತ್ತವೆ. ಅಲ್ಲದೆ ಗಾಜು ಪಾರದರ್ಶಕ ವಸ್ತುವಾದ್ದರಿಂದ ಅದರ ಬಳಕೆ ಅಪಾರ. ಟಿ.ವಿ., ಕಂಪ್ಯೂಟರ್, ಲ್ಯಾಪ್‌ಟಾಪ್, ಮೊಬೈಲ್‌ಗಳ ಸ್ಕ್ರೀನ್‌ಗಳಿಗೆ ಗಾಜನ್ನು ಬಳಸಲಾಗುತ್ತದೆ. ಅದೇ ರೀತಿ ನಿತ್ಯ ಗೃಹೋಪಯೋಗಿ ವಸ್ತುಗಳಲ್ಲೂ ಗಾಜಿನ ಬಳಕೆ ಹೆಚ್ಚು. ಷೋಕೇಸ್, ಕಿಟಕಿ, ಟೀಪಾಯಿ, ಟೇಬಲ್, ಮುಂತಾದವುಗಳಲ್ಲಿ ಅಂದಕ್ಕಾಗಿ ಪಾರದರ್ಶಕತೆಗಾಗಿ ಗಾಜನ್ನು ಬಳಸಲಾಗುತ್ತದೆ. ವಾಹನಗಳಲ್ಲಂತೂ ಗಾಜಿನ ಬಳಕೆ ಸರ್ವೇಸಾಮಾನ್ಯ. ಹೀಗೆ ಗಾಜಿನ ಬಳಕೆಯ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.

ನಿತ್ಯ ಬಳಕೆಯ ವಸ್ತುವಾದ ಗಾಜು ಪ್ಲಾಸ್ಟಿಕ್‌ಗೆ ಹೋಲಿಸಿದರೆ ಪರಿಸರಕ್ಕೆ ಪೂರಕ. ಗಾಜನ್ನು ಅನೇಕ ಬಾರಿ ಮರುಬಳಕೆ ಮಾಡಬಹುದು. ತಾಪಮಾನಕ್ಕೆ ಸ್ಪಂದಿಸದೆ ಸ್ಥಿರವಾಗಿ ಉಳಿಯುತ್ತದೆ. ಅಲ್ಲದೆ ಯಾವುದೇ ರಾಸಾಯನಿಕ ಪ್ರಕ್ರಿಯೆಗಳಿಗೆ ಒಳಗಾಗುವುದಿಲ್ಲ. ಆದರೆ ಗಾಜಿನ ಬಳಕೆಯಲ್ಲಿ ಹೆಚ್ಚು ಜಾಗರೂಕತೆ ಇರಬೇಕು. ಸ್ವಲ್ಪವೇ ಮೈಮರೆತರೂ ಗಾಜು ಒಡೆದು ಹೋಗುತ್ತದೆ. ಹೀಗೆ ನಿತ್ಯಜೀವನದಲ್ಲಿ ಒಡೆದ ಗಾಜಿನ ಚೂರುಗಳನ್ನು ಮಣ್ಣಿಗೆ ಎಸೆಯುತ್ತೇವೆ. ನಿತ್ಯವೂ ನಾವು ವಿವೇಚನಾರಹಿತವಾಗಿ ಸಾಕಷ್ಟು ಪ್ರಮಾಣದಲ್ಲಿ ಗಾಜನ್ನು ಮಣ್ಣಿಗೆ ಸೇರಿಸುತ್ತೇವೆ. ಗಾಜು ಮಣ್ಣಿನಲ್ಲಿ ಸೇರಿದಾಗ ಪ್ಲಾಸ್ಟಿಕ್‌ನಂತೆ ಮಣ್ಣಿನ ವಿಷಕ್ಕೆ ಕಾರಣವಾಗುವುದಿಲ್ಲ. ಆದಾಗ್ಯೂ ಗಾಜು ಜೈವಿಕ ವಿಘಟೀಯವಲ್ಲ. ಗಾಜನ್ನು ಮಣ್ಣಲ್ಲಿ ಹೂಳಿದರೆ ಅದು ಸಂಪೂರ್ಣವಾಗಿ ವಿಘಟನೆಯಾಗಲು ಕನಿಷ್ಠ 4,000 ವರ್ಷಗಳು ಬೇಕು. ಏಕೆಂದರೆ ಗಾಜು ಸೂಕ್ಷ್ಮಜೀವಿ ನಿರೋಧಕವಾಗಿದೆ.

ಗಾಜು ಜೈವಿಕವಾಗಿ ವಿಘಟನೆಯಾಗದಿರಲು ಅನೇಕ ಕಾರಣಗಳಿವೆ. ಗಾಜಿನ ತಯಾರಿಕೆಯು ಸಾಂಪ್ರದಾಯಿಕ ವಿಧಾನಗಳಿಂದ ಬದಲಾಗಿಲ್ಲ. ಗಾಜಿನ ತಯಾರಿಕೆಯಲ್ಲಿ ಸುಣ್ಣ, ಮರಳು ಮತ್ತು ಸೋಡಿಯಂ ಕಾರ್ಬೊನೇಟ್ ಬಳಸಲಾಗುತ್ತದೆ. ಆದರೆ ಇದು ಜೈವಿಕ ವಿಘಟನೆಯಾಗುವುದಿಲ್ಲ. ಗಾಜಿನ ತಯಾರಿಕೆಗೆ ಬಳಸಿದ ಮರಳು ಮತ್ತು ಸುಣ್ಣದ ಕಲ್ಲು ಎರಡೂ ವಸ್ತುಗಳು ವಿಘಟನೆಯಾಗಲು ಸಾವಿರಾರು ವರ್ಷಗಳೇ ಬೇಕಾಗುತ್ತವೆ. ಅಲ್ಲದೇ ಗಾಜು ಕರಗಿ ದ್ರವವಾಗಲು 1,700 ಡಿಗ್ರಿ ಸೆಲ್ಸಿಯಸ್ ತಾಪಮಾನ ಬೇಕಾಗುತ್ತದೆ. ಹಾಗಾಗಿ ಗಾಜು ಕೂಡಲೇ ಕೊಳೆಯುವುದಿಲ್ಲ. ಒಡೆದ ಗಾಜಿನ ಚೂರುಗಳು ಪರಿಸರಕ್ಕೆ ಹಾನಿಕರವಲ್ಲದಿದ್ದರೂ ಅನೇಕ ಸಂದರ್ಭಗಳಲ್ಲಿ ಅಪಾಯಗಳನ್ನು ತಂದೊಡ್ಡುತ್ತವೆ.

ಗಾಜನ್ನು ಮರುಬಳಕೆ ಮಾಡಬಹುದು ಅಥವಾ ಕರಗಿಸಬಹುದು ಮತ್ತು ಹೊಸ ವಸ್ತುವಾಗಿ ಮರುಬಳಕೆ ಮಾಡಬಹುದು, ಆದರೆ ಇದು ಜೈವಿಕ ವಿಘಟನೀಯವಲ್ಲ ಎಂಬುದು ತಿಳಿದಿದೆ. ಆದರೆ ಇದುವರೆಗಿನ ಈ ತಿಳುವಳಿಕೆಯನ್ನು ಬುಡಮೇಲು ಮಾಡಲು ವಿಜ್ಞಾನಿಗಳ ತಂಡವೊಂದು ಸಿದ್ಧವಾಗಿದೆ. ವಿಭಿನ್ನ ಪರೀಕ್ಷೆಗಳ ಮೂಲಕ ಗಾಜು ಒಂದು ವಿಘಟೀಯ ವಸ್ತು ಎಂಬುದನ್ನು ಜಗತ್ತಿಗೆ  ತೋರಿಸಲು ಸಿದ್ಧವಾಗಿದ್ದಾರೆ.

ವಿಜ್ಞಾನದ ಸಂಶೋಧನೆಗಳು ಯಾವಾಗಲೂ ವಿಭಿನ್ನ. ಸಿದ್ಧ ಸೂತ್ರಗಳನ್ನು ಮರುಪರೀಕ್ಷೆಗೆ ಒಳಪಡಿಸುವ ಹಾಗೂ ವಿಭಿನ್ನ ಪ್ರಯೋಗಗಳ ಮೂಲಕ ಪರ್ಯಾಯಗಳನ್ನು ಸಂಶೋಧಿಸುವತ್ತ ವಿಜ್ಞಾನಿಗಳ ಚಿತ್ತ ಹರಿಯುತ್ತಲೇ ಇರುತ್ತದೆ. ಈಗ ಇಂತಹ ಮತ್ತೊಂದು ಮಹತ್ವದ ಸಂಶೋಧನೆಗೆ ನಾಂದಿಯಾಗಲಿದ್ದಾರೆ.

ಕಳೆದ ವಾರ ಸೈನ್ಸ್ ಅಡ್ವಾನ್ಸಸ್ ಜರ್ನಲ್‌ನಲ್ಲಿ ಪ್ರಕಟವಾದ ಒಂದು ಅಧ್ಯಯನದಲ್ಲಿ, ಚೈನೀಸ್ ಅಕಾಡಮಿ ಆಫ್ ಸೈನ್ಸಸ್‌ನ ಇನ್‌ಸ್ಟಿಟ್ಯೂಟ್ ಆಫ್ ಪ್ರೊಸೆಸ್ ಇಂಜಿನಿಯರಿಂಗ್ (ಐಪಿಇ) ವಿಭಾಗದ ಯಾನ್ ಕ್ಸುಹೈ ನೇತೃತ್ವದ ತಂಡವು ಜೈವಿಕವಾಗಿ ಪಡೆದ ಅಮೈನೋ ಆಮ್ಲಗಳು ಅಥವಾ ಪೆಪ್ಟೈಡ್‌ಗಳಿಂದ ಮಾಡಿದ ಜೈವಿಕ ವಿಘಟನೀಯ, ಜೈವಿಕ ಮರುಬಳಕೆ ಮಾಡಬಹುದಾದ ಗಾಜಿನ ಹೊಸ ರೂಪವನ್ನು ವಿನ್ಯಾಸಗೊಳಿಸಿದೆ. ಇದು ಪರಿಸರದ ಮೇಲೆ ಕನಿಷ್ಠ ಪರಿಣಾಮ ಬೀರುವ ನಿರೀಕ್ಷೆಯಿದೆ. ಈ ಗಾಜು ಕೆಲವು ವಾರಗಳಲ್ಲಿ ಅಥವಾ ಕೆಲವು ತಿಂಗಳುಗಳಲ್ಲಿ ಅದು ಒಡ್ಡಿಕೊಳ್ಳುವ ಪರಿಸರವನ್ನು ಅವಲಂಬಿಸಿ ಜೈವಿಕ ವಿಘಟನೆಯಾಗುತ್ತದೆ ಎಂದು ಕಂಡುಹಿಡಿದಿದ್ದಾರೆ.

ಸಂಶೋಧಕರು ಜೈವಿಕ ವಿಘಟನೀಯ ಗಾಜಿನಿಂದ ಮಾಡಿದ ಗಾಜಿನ ಮಣಿಗಳನ್ನು ಬಹು ಪರಿಸರದಲ್ಲಿ ಪರೀಕ್ಷಿಸಿದರು. ಅವರು ಪ್ರಯೋಗಾಲಯದಲ್ಲಿ ಕಿಣ್ವಗಳಿಗೆ ಗಾಜಿನ ಮಣಿಗಳನ್ನು ಒಡ್ಡಿದರು. ಅಮೈನೋ ಆಮ್ಲದಿಂದ ಮಾಡಿದ ಗಾಜಿನ ಮಣಿಗಳು ಕೇವಲ ಎರಡು ದಿನಗಳ ನಂತರ ದ್ರಾವಣದಲ್ಲಿ ಕರಗಿದ್ದವು. ಪೆಪ್ಟೈಡ್‌ಗಳಿಂದ ಮಾಡಿದ ಗಾಜಿನ ಮಣಿ ಸುಮಾರು ಐದು ತಿಂಗಳಲ್ಲಿ ಕರಗಿದವು.

ತಮ್ಮ ವೀಕ್ಷಣೆ ಮತ್ತು ಸಂಶೋಧನೆಯನ್ನು ಬೇರೆ ಬೇರೆ ಸಂದರ್ಭಗಳಲ್ಲಿ ನಡೆಸುವ ಭಾಗವಾಗಿ ಇನ್ನೊಂದಿಷ್ಟು ಮಣಿಗಳನ್ನು ಮಣ್ಣಿನಲ್ಲಿ ಇರಿಸಿದರು. ಅಧ್ಯಯನದ ಪ್ರಕಾರ, ಅಮೈನೊ ಆ್ಯಸಿಡ್ ಮೂಲದ ಮಣಿ ಮೂರು ವಾರಗಳಲ್ಲಿ ಕೊಳೆಯಿತು. ಆದರೆ ಪೆಪ್ಟೈಡ್ ಆಧಾರಿತ ಮಣಿ ಸುಮಾರು ಏಳೂವರೆ ತಿಂಗಳ ನಂತರ ಒಡೆಯಿತು.

ಅಮೈನೋ ಆಮ್ಲಗಳು ಪರಿಸರದಲ್ಲಿ ಕಾಲಾನಂತರದಲ್ಲಿ ಕೊಳೆಯುತ್ತವೆಯಾದರೂ, ಈ ಜೈವಿಕ ವಿಘಟನೀಯ ಗಾಜು ಸಾಂಪ್ರದಾಯಿಕ ಗಾಜಿನಂತೆ ಬಾಳಿಕೆ ಬರುವುದಿಲ್ಲ. ಏಕೆಂದರೆ ಪೆಪ್ಟೈಡ್‌ಗಳು ಮತ್ತು ಅಮೈನೋ ಆಮ್ಲಗಳು ಶಾಖದಲ್ಲಿ ತ್ವರಿತವಾಗಿ ಒಡೆಯಬಹುದು. ಇದನ್ನು ಎದುರಿಸಲು ಸಂಶೋಧಕರು ಗಾಜಿನ ತಯಾರಿಕೆಯಲ್ಲಿ ಬಳಸುವ ತಾಪನ ತಣಿಸುವ ವಿಧಾನವನ್ನು ಬಳಸಿಕೊಂಡು ಅಮೈನೋ ಆಮ್ಲಗಳು ಮತ್ತು ಪೆಪ್ಟೈಡ್‌ಗಳನ್ನು ರಾಸಾಯನಿಕವಾಗಿ ಮಾರ್ಪಡಿಸಿದರು. ಗಾಜಿನ ವಸ್ತುಗಳನ್ನು ಆಕಾರಕ್ಕೆ ಅನುಗುಣವಾಗಿ ಬಾಗಿಸಲು ಬಿಸಿಮಾಡುವ ಮತ್ತು ನಂತರ ತಂಪುಗೊಳಿಸುವ ಪ್ರಕ್ರಿಯೆ ನಡೆಯುತ್ತದೆ. ಈ ಅಧ್ಯಯನವು ಹೆಚ್ಚು ಜೈವಿಕ ವಿಘಟನೀಯ ಗಾಜನ್ನು ರಚಿಸುವಲ್ಲಿ ಕೇವಲ ಒಂದು ಹೆಜ್ಜೆಯಾಗಿದೆ. ಆದರೆ ಈ ಬಗ್ಗೆ ಇನ್ನಷ್ಟು ಅಧ್ಯಯನಗಳು ಮತ್ತು ಪ್ರಯೋಗಗಳ ಮತ್ತು ಪರೀಕ್ಷೆಗಳ ಅಗತ್ಯವಿದೆ ಎನ್ನುತ್ತಾರೆ ತಂಡದ ಸದಸ್ಯರು.

ಅಧ್ಯಯನದಲ್ಲಿ ತೊಡಗಿರುವ ಪ್ರೊಫೆಸರ್ ಯಾನ್ ಕ್ಸುಹೈ ಅವರು  ಬಯೋಮಾಲಿಕ್ಯುಲರ್ ಗ್ಲಾಸ್ ಪರಿಕಲ್ಪನೆಯು, ಪ್ಲಾಸ್ಟಿಕ್‌ಗಳನ್ನು ಮೀರಿ, ಸುಸ್ಥಿರ ಭವಿಷ್ಯಕ್ಕಾಗಿ ಹಸಿರು ಜೀವನ ತಂತ್ರಜ್ಞಾನಕ್ಕೆ ಆಧಾರವಾಗಬಹುದು. ಆದರೂ ಇದು ಇನ್ನೂ ಪ್ರಯೋಗಾಲಯದ ಹಂತದಲ್ಲಿದೆ ಮತ್ತು ದೊಡ್ಡ ಪ್ರಮಾಣದ ವಾಣಿಜ್ಯೀಕರಣದಿಂದ ದೂರವಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜೈವಿಕ ಗಾಜಿನ ವಿಷಯದಲ್ಲಿ ತಂಡವು ಇಟ್ಟಿರುವ ಹೆಜ್ಜೆ ಅಮೂಲ್ಯವಾದುದಾಗಿದೆ. ಜಗತ್ತು ಸುಸ್ಥಿರ ಭವಿಷ್ಯದ ಕಡೆಗೆ ಬದಲಾಗಲು ಹವಣಿಸುತ್ತಿರುವಾಗ ಇಂತಹ ಪ್ರಯತ್ನಗಳು ಮತ್ತು ಪ್ರಯೋಗಗಳ ಅಗತ್ಯವಿದೆ. ಇತರ ಸಂಶೋಧಕರಿಗೆ ಹೆಚ್ಚಿನ ಉತ್ತೇಜನವನ್ನು ನೀಡುತ್ತದೆ. ಆದಷ್ಟೂ ಬೇಗನೆ ಜೈವಿಕ ಗಾಜು ಮಾರುಕಟ್ಟೆಗೆ ಬರುವಂತಾಗಲಿ ಮತ್ತು ಪರಿಸರದ ಮೇಲಿನ ಒತ್ತಡ ಕಡಿಮೆಯಾಗಲಿ ಎಂಬುದೇ ನಮ್ಮ ಆಶಯ.

Similar News