×
Ad

ಇನಾಯತ್ ಅಲಿ ಜಯಗಳಿಸುವ ಜವಾಬ್ದಾರಿ ಮತದಾರರು ಮತ್ತು ಕಾರ್ಯಕರ್ತರದ್ದು: ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್

Update: 2023-05-02 23:06 IST

ಸುರತ್ಕಲ್, ಮೇ 2: ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿಯವರು ಆಲೋಚನೆ ಮಾಡಿ ತಳವರ್ಗದ ಕಾರ್ಯಕರ್ತನಾಗಿರುವ ಇನಾಯತ್ ಅಲಿಗೆ ಕಾಂಗ್ರೆಸ್ ಪಕ್ಷ ಮಂಗಳೂರು ಉತ್ತರದಿಂದ ಟಿಕೆಟ್ ನೀಡಿದೆ. ಅವರು ಜಯಗಳಿಸುವ ಜವಾಬ್ದಾರಿ ಮತದಾರ ಬಾಂಧವರು ಮತ್ತು ಕಾರ್ಯಕರ್ತರದ್ದು ಎಂದು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.

ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಇನಾಯತ್ ಅಲಿ  ಪರ ರೋಡ್ ಶೋ ನಡೆಸಿ ಬಳಿಕ ನೆರೆದಿದ್ದ ಸಾವಿರಾರು ಕಾರ್ಯಕರ್ತರು ಮತ್ತು ಬೆಂಬಲಿಗರನ್ನು ಉದ್ದೇಶಿಸಿ ಅವರು ಮಾತನಾಡಿದರು.

ಕಾಂಗ್ರೆಸ್ ಸರಕಾರ ಬಂದರೆ ಈಗಾಗಲೇ ಗ್ಯಾರಂಟಿ ಕಾರ್ಡ್ ನಲ್ಲಿ ಹೇಳಿರುವ ಎಲ್ಲಾ ಗ್ಯಾರಂಟಿಗಳ ಜೊತೆ ಶೈಕ್ಷಣಿಕ, ವೈದ್ಯಕೀಯ ಕ್ಷೇತ್ರದಲ್ಲಿ ಉನ್ನತ ಗುಣಮಟ್ಟದ ವ್ಯವಸ್ಥೆಗಳನ್ನು ಕಲ್ಪಿಸಿ ಕೊಡಲಾಗುವುದು ಎಂದು ಅವರು ಭರವಸೆ ನೀಡಿದರು.

ಅದಕ್ಕೂ ಮುನ್ನ ಮಾತನಾಡಿದ ಕಾಂಗ್ರೆಸ್ ಅಭ್ಯರ್ಥಿ ಇನಾಯತ್ ಅಲಿ, ನಾನು ರಾಜಕೀಯ ಮಾಡುವ ಉದ್ದೇಶದಿಂದ ಚುನಾವಣೆಗೆ ನಿಂತಿಲ್ಲ, ಮಂಗಳೂರು ಉತ್ತರ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುವ ಸಂಕಲ್ಪದೊಂದಿಗೆ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದೇನೆ ಎಂದು ನುಡಿದರು.

ಒಂದು ವೇಳೆ ಚುನಾವಣೆಯಲ್ಲಿ ಮತದಾರರು ಆಶೀರ್ವದಿಸಿದರೆ ಜಯಗಳಿಸಿದ ತಿಂಗಳ ಒಳಗಾಗಿ ಸುರತ್ಕಲ್ ಪೇಟೆಯಲ್ಲಿ ಅರ್ಧದಲ್ಲಿ ನಿಲ್ಲಿಸಿರುವ ಬೃಹತ್ ಮಾರುಕಟ್ಟೆಯ ಪುನರ್ ನಿರ್ಮಾಣ ಕಾಮಗಾರಿಯನ್ನು ಕೈಗೆತ್ತಿಕೊಳ್ಳ ಲಾಗುವುದು ಎಂದು ಭರವಸೆ ನೀಡಿದರು.

ಬಳಿಕ ಮಾತನಾಡಿದ ರಾಜ್ಯಸಭಾ ಸದಸ್ಯ ರಮೇಶ್ ಚನ್ನಿತ್ತಲ್ಲಿ,  ನಾನು ಕಳೆದ 30 ವರ್ಷಗಳ ಹಿಂದೆ ಸುರತ್ಕಲ್ ನ ಎನ್ ಐ ಟಿ ಕೆ ಎಲ್ಲಿ ಇಂಜಿನಿಯರಿಂಗ್ ಪದವಿ ಪಡೆದು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ಆಶೀರ್ವಾದದಿಂದ ಸಂಸತ್ ಪ್ರವೇಶ ಮಾಡುವಂತೆ ಆಯ್ತು ಅದೇ ರೀತಿ ಇಲ್ಲಿನ ಮಣ್ಣಿನ ಮಗ ನಮ್ಮ ತಳಮಟ್ಟದ ಕಾರ್ಯಕರ್ತನಾಗಿರುವ ಇನಾಯತ್ ಅಲಿಯವರನ್ನು ಪ್ರಚಂಡ ಬಹುಮತಗಳನ್ನು ನೀಡಿ ವಿಧಾನ ಸಭೆಗೆ ಕಳುಹಿಸಿ ಕೊಡಬೇಕೆಂದು ಮನವಿ ಮಾಡಿ ಕೊಳ್ಳುತ್ತೇನೆ ಎಂದರು.

ಕ್ಷೇತ್ರದ ಜನತೆ ಇನಾಯಕ್ ಅಲಿ ಅವರಿಗೆ ಆಶೀರ್ವದಿಸಿದರೆ  ಅವರು ನಿಮ್ಮ ಕಷ್ಟ ಸುಖಗಳಲ್ಲಿ ಭಾಗಿಯಾಗುತ್ತಾರೆ ಎಂಬ ದೃಢ ಭರವಸೆಯನ್ನು ನಾನು ನೀಡುತ್ತೇನೆ ಎಂದರು. ಚುನಾವಣೆ ಕಳೆದು ಇನಾಯತ್ ಅಲಿ ಜಯಗಳಿಸಿದ ಬಳಿಕ ಮತ್ತೊಮ್ಮೆ ನಾವೆಲ್ಲರೂ ಒಂದಾಗಿ ಸಂಭ್ರಮಾಚರಣೆಯನ್ನು ಮಾಡುವ ಎಂದು ಉತ್ತರದ ಕಾಂಗ್ರೆಸ್ ಅಭ್ಯರ್ಥಿ ಇನಾಯತ್ ಅಲಿ ಅವರಿಗೆ ಶುಭ ಹಾರೈಸಿದರು.

ಈ ಸಂದರ್ಭ ಮಂಜೇಶ್ವರ ಶಾಸಕ ಎಕೆ ಅಶ್ರಫ್,  ಡಿಸಿಸಿ ಅಧ್ಯಕ್ಷ ಹರೀಶ್ ಕುಮಾರ್, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್, ಮಾಜಿ ಮೇಯರ್ಗಳಾದ ಕವಿತಾ ಸನಿಲ್, ಗುಲ್ಜಾರ್ ಬಾನು, ಶಶಿಧರ ಹೆಗಡೆ, ಹರಿನಾಥ್, ಮಹಾಬಲ ಮಾರ್ಲ, ಮಾಜಿ ಉಪಮೇಯ ಪುರುಷೋತ್ತಮ ಚಿತ್ರಾಪುರ, ಬಶೀರ್ ಬೈಕಂಪಾಡಿ, ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉಮೇಶ್ ದಂಡಕೇರಿ, ಗುರುಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಂದ್ರ ಕಂಬಳಿ, ಜಿಲ್ಲಾ ಕಾಂಗ್ರೆಸ್ ನ ಸಂತೋಷ್ ಕುಮಾರ್ ಸತ್ತಾರ್,  ಮಾಜಿ ಕಾರ್ಪೊರೇಟರ್ ಗಳಾದ ಪ್ರತಿಭಾ ಕೂಳಾಯಿ, ಸುಂದರ ಶೆಟ್ಟಿ, ನಾಗವೇಣಿ, ಕಾಂಗ್ರೆಸ್ನ ವಿವಿಧ ವಿಭಾಗಗಳ ಪದಾಧಿಕಾರಿಗಳಾದ ಗಿರೀಶ್ ಆಳ್ವ, ಆರ್.ಕೆ. ಪ್ರಥ್ವಿರಾಜ್, ಸಮೀರ್ ಕಾಟಿಪಳ್ಳ ಹಾಗೂ ಪ್ರಮುಖ ಉಪಸ್ಥಿತರಿ ದ್ದರು. ಕಾರ್ಯಕ್ರಮವನ್ನು ರಹ್ಮಾನ್ ಕುಂಜತ್ತಬೈಲ್ ನಿರೂಪಿಸಿದರು.

ಸಭಾ ಕಾರ್ಯಕ್ರಮಕ್ಕೂ ಮುನ್ನ ಚೊಕ್ಕಬೆಟ್ಟು ಕ್ರಾಸ್ ನಿಂದ ಅದ್ದೂರಿ ರೋಡ್ ಶೋ ನಡೆಯಿತು. ರೋಡ್ ಶೋ ನಲ್ಲಿ ಬ್ಯಾಂಡ್, ಚಂಡೆ ಕುಣಿತ ಏರ್ಪಡಿಸಲಾಗಿತ್ತು. ಜಾಥಾದಲ್ಲಿ ಭಾಗವಹಿಸಿದ್ದ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು ಕುಣಿದು ಕುಪ್ಪಳಿಸಿದರು.

ಇದೇ ಸಂದರ್ಭ ಕಾಂಗ್ರೆಸ್ ಪಕ್ಷ, ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಉತ್ತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಇನಾಯತ್ ಅಲಿ, ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಹಾಗೂ ರಾಜ್ಯಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರಿಗೆ  ಜೈಕಾರದ ಘೋಷಣೆಗಳನ್ನು ಕೂಗಿದರು.

ಮಂಗಳೂರು ಉತ್ತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರಕ್ಕೆ ಆಗಮಿಸಿದ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರಿಗೆ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿತ್ತು. ಜೊತೆಗೆ ಶಸ್ತ್ರ ಸಜ್ಜಿತರಾಗಿದ್ದ ಸಿಆರ್ಪಿಎಫ್ ಜವಾನರು ಮುಖ್ಯಮಂತ್ರಿಗೆ ಬಿಗಿ ಭದ್ರತೆ ಕಲ್ಪಿಸಿದರು.

ಹೆದರಿಸುವ ಶಕ್ತಿ ಇಲ್ಲದೆ ಶ್ರೀಮಂತರ ಜೊತೆ ಸೇರಿ ಅಡ್ಡ ದಾರಿ ಹಿಡಿದ ಬಿಜೆಪಿ

ಬಿಜೆಪಿಗೆ ಕಾಂಗ್ರೆಸ್ ಅನ್ನು ಹೆದರಿಸುವ ಶಕ್ತಿ ಇಲ್ಲ. ಅದಕ್ಕಾಗಿ ಅಡ್ಡದಾರಿ ಹಿಡಿದು ಬೆರಳೆಣಿಕೆಯ ಶ್ರೀಮಂತ ವ್ಯಕ್ತಿಗಳ ಜೊತೆ ಸೇರಿಕೊಂಡು ನನ್ನ ತೇಜೋವಧೆ ಮಾಡುವ ಮೂಲಕ ನನ್ನ ಆತ್ಮಸ್ಥೈರ್ಯವನ್ನು ಕುಗ್ಗಿಸಿ ಚುನಾವಣೆಯಲ್ಲಿ ಗೆಲ್ಲುವ ತಂತ್ರ ರೂಪಿಸುತ್ತಿದ್ದಾರೆ ಇದಕ್ಕೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮತ್ತು ಅಭಿಮಾನಿಗಳು ಮತದಾರ ಬಾಂಧವರು ಚುನಾವಣೆಯಲ್ಲಿ ತಕ್ಕ ಉತ್ತರ ನೀಡಲಿದ್ದಾರೆ ಎಂದು ಇನಾಯತ್ ಅಲಿ ಹೇಳಿದರು.

ನಾನು ಕೋಟಿ ಹಣ ನೀಡಿ ಟಿಕೆಟ್ ಗಿಟ್ಟಿಸಿಕೊಂಡಿರುವುದಾಗಿ ಕೆಲವೊಬ್ಬರು ಅಪಪ್ರಚಾರ ಮಾಡುತ್ತಿದ್ದಾರೆ. ನಾನು ಟಿಕೆಟ್ ಗಾಗಿ 1 ರೂ.ಯನ್ನೂ ನೀಡಿಲ್ಲ. ಈ ಕುರಿತು ಯಾವುದೇ ದೇವಸ್ಥಾನ, ಮಸೀದಿ, ಚರ್ಚ್ ನಲ್ಲಿ ಬೇಕಿದ್ದರೂ ಬಂದು ಪ್ರಮಾಣ ಮಾಡಲು ಸಿದ್ಧನಿದ್ದೇನೆ ಎಂದು ಇನಾಯತ್ ಅಲಿ ಹೇಳಿದರು.

Similar News