ಖ್ಯಾತ ತಮಿಳು ನಟ, ನಿರ್ದೇಶಕ ಮನೋಬಾಲ ನಿಧನ

Update: 2023-05-03 10:43 GMT

ಚೆನ್ನೈ: ಜನಪ್ರಿಯ ತಮಿಳು ನಟ, ಕಾಮಿಡಿಯನ್‌, ನಿರ್ದೇಶಕ ಮತ್ತು ನಿರ್ಮಾಪಕ ಮನೋಬಾಲ ಚೆನ್ನೈನಲ್ಲಿರುವ ತಮ್ಮ ನಿವಾಸದಲ್ಲಿ ಇಂದು ನಿಧನರಾಗಿದ್ದಾರೆ.

ಅವರಿಗೆ 69 ವರ್ಷ ವಯಸ್ಸಾಗಿತ್ತು. ಯಕೃತ್‌ ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಿದ್ದ ಅವರು ಈ ವರ್ಷ ಆಂಜಿಯೋ ಚಿಕಿತ್ಸೆಗೂ ಒಳಗಾಗಿದ್ದರು.

ಚೆನ್ನೈನ ಸಾಲಿಗ್ರಾಮಮ್‌ನಲ್ಲಿರುವ ತಮ್ಮ ನಿವಾಸದಲ್ಲಿಯೇ ಅವರು ಚಿಕಿತ್ಸೆ ಪಡೆಯುತ್ತಿದ್ದರು.

ಭಾರತಿರಾಜಾ ಅವರ ಪುತ್ತಿಯ ವಾರ್ಪುಗಳ್‌ ಚಿತ್ರದೊಂದಿಗೆ 1979ರಲ್ಲಿ ಅವರು ನಟ ಹಾಗೂ ಸಹಾಯಕ ನಿರ್ದೇಶಕರಾಗಿ ಚಿತ್ರರಂಗಕ್ಕೆ ಕಾಲಿಟ್ಟಿದ್ದರು. 1982ರಲ್ಲಿ ತೆರೆ ಕಂಡ ಕಾರ್ತಿಕ್-ಸುಹಾಸಿನಿ ಅಭಿನಯದ ಅಗಯ ಗಂಗೈ ಅವರ ನಿರ್ದೇಶನದ ಚೊಚ್ಚಲ ಚಿತ್ರವಾಗಿತ್ತು. ನಂತರ ಅವರು 24ಕ್ಕೂ ಅಧಿಕ ಚಿತ್ರಗಳನ್ನು ನಿರ್ದೇಶಿಸಿದ್ದರು. ಇವುಗಳಲ್ಲಿ ಶಿವಾಜಿ ಗಣೇಶನ್‌ ನಟನೆಯ ಪರಂಬರಿಯಮ್.‌ ವಿಜಯಕಾಂತ್‌ ಅವರ ಹಿಟ್‌ ಚಿತ್ರ ಎನ್‌ ಪುರುಶಾಂತಾನ್‌ ಎನಕ್ಕು ಮತ್ತುಂತನ್‌, ರಜನೀಕಾಂತ್‌ ಅಭಿನಯದ ಊರ್ಕವಳನ್‌, ಸತ್ಯರಾಜ್‌ ನಟನೆಯ ಮಲ್ಲುವೆಟ್ಟಿ ಮೈನರ್‌ ಹಾಗೂ ಮೋಹನ್‌ ಅಭಿನಯದ ಪಿಳ್ಳೈ ನಿಲಾ ಸೇರಿದ್ದವು.

ಪೋಷಕ ನಟನಾಗಿ ಅವರು 300ಕ್ಕೂ ಅಧಿಕ  ಸಿನೆಮಾಗಳಲ್ಲಿ ನಟಿಸಿದ್ದರು. ಕಲಕಲಪ್ಪು, ತಮಿಝ್‌ ಪದಮ್‌ ಫ್ರಾಂಚೈಸ್‌ ಮತ್ತು ಅರಣ್ಮನೈ ಫ್ರಾಂಚೈಸ್‌ನಲ್ಲಿ ಅವರ ಹಾಸ್ಯ ಪ್ರದರ್ಶನ ಕೂಡ ಜನಪ್ರಿಯವಾಗಿತ್ತು.

ಕೊನೆಯ ಬಾರಿ ಅವರು ಕಾಜಲ್‌ ಅಗರ್ವಾಲ್‌ ಅವ ಘೋಸ್ಟಿ, ಕೊಂದ್ರಾಲ್‌ ಪಾವಮ್‌ ಹಾಗೂ ತೆಲುಗು ಚಿತ್ರ ವಾಲ್ಟೈರ್‌ ವೀರಯ್ಯದಲ್ಲಿ ಕಾಣಿಸಿಕೊಂಡಿದ್ದರು.

ಅವರು ಪತ್ನಿ ಉಷಾ ಮತ್ತು ಪುತ್ರ ಹರೀಶ್‌ ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.

Similar News