ಊದಿನೂರು ಮುಹಮ್ಮದ್ ಕುಂಞಿಯ ‘ಕನ್ನಡ ಸಾಹಿತ್ಯದಲ್ಲಿ ಮುಸ್ಲಿಂ ಸಂವೇದನೆ’ ಕೃತಿ ಬಿಡುಗಡೆ
ಮಂಗಳೂರು, ಮೇ 3: ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ದಿ ಸಂಘ, ಕರ್ನಾಟಕ ಸರಕಾರದ ಗಡಿ ಪ್ರದೇಶದ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಸಂಘ ಕೊಚ್ಚಿನ್ ಮತ್ತು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಂಟಿ ಆಶ್ರಯದಲ್ಲಿ ಎರ್ನಾಕುಲಂ ಟೌನ್ ಹಾಲ್‌ನಲ್ಲಿ ಇತ್ತೀಚೆಗೆ ನಡೆದ ‘ಕೊಚ್ಚಿನ್ ಕನ್ನಡ ಸಾಂಸ್ಕೃತಿಕ ಉತ್ಸವ 2023’ ಕಾರ್ಯಕ್ರಮದಲ್ಲಿ ಉದಿನೂರು ಮುಹಮ್ಮದ್ ಕುಂಞಿ ರಚಿಸಿದ ‘ಕನ್ನಡ ಸಾಹಿತ್ಯ ದಲ್ಲಿ ಮುಸ್ಲಿಂ ಸಂವೇದನೆ’ ಕೃತಿಯನ್ನು ರಾಜ್ಯ ವಿದಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಯವರು ಬಿಡುಗಡೆ ಮಾಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಊದಿನೂರು ಮುಹಮ್ಮದ್ ಕುಂಞಿ ‘ಕನ್ನಡ ಭಾಷೆಯಲ್ಲಿ ಮುಸ್ಲಿಂ ಬರಹಗಾರರ ಉದಯಕ್ಕೆ ಕನ್ನಡ ವಚನ ಸಾಹಿತ್ಯದ ಭಾಗವಾದ ತತ್ವಪದಗಳ ರಚನೆಯಿಂದ ಪ್ರಾರಂಭಗೊಂಡಿದೆ. ಇವರಲ್ಲಿ ಚೆನ್ನೂರ್ ಜಲಾಲ್ ಸಾಹಿಬ್, ಗುರು ಖಾದಿರಿ ಪೀರಾ, ಶಿಶಾನಾಳ ಷರೀಫ್, ಮೋಟ್ನಾಳ್ ಹಸನ್ ಸಾಬ್ ಸಹಿತ ಆಧುನಿಕ ಕನ್ನಡ ಸಾಹಿತ್ಯದ ಅಗ್ರಗಣ್ಯರಾದ ಕೆ.ಎಸ್. ನಿಸಾರ್ ಅಹ್ಮದ್, ಬೊಳುವಾರು ಮುಹಮ್ಮದ್ ಕುಂಞಿ, ಫಕೀರ್ ಮುಹಮ್ಮದ್ ಕಟ್ಪಾಡಿ, ರಹಮತ್ ತರೀಕರೆ, ಬಿ.ಎಂ.ಹನೀಫ್, ಸಾರಾ ಅಬೂಬಕರ್, ಬಾನು ಮುಷ್ತಾಕ್, ಕೆ. ಷರೀಫಾ ಸೇರಿದಂತೆ 50ಕ್ಕೂ ಹೆಚ್ಚು ಪ್ರಮುಖ ಮುಸ್ಲಿಂ ಸಾಹಿತಿಗಳನ್ನು ಪರಿಚಯ ಮಾಡಲಾಗಿದೆ ಎಂದರು.
ಪತ್ರಕರ್ತ ರವಿ ನಾಯ್ಕಾಪು ಪುಸ್ತಕ ಪರಿಚಯ ಮಾಡಿದರು. ಕನ್ನಡ ಸಂಗಮ ಕೊಚ್ಚಿನ್ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ ಅನವಟ್ಟಿ ಸ್ವಾಗತಿಸಿದರು. ಕರ್ನಾಟಕ ಸರಕಾರದ ಗಡಿ ಪ್ರದೇಶದ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸೋಮಶೇಖರ್ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಬೆಳಗಾವಿಯ ಮಡಿವಾಳ ರಾಜಯೋಗೀಂದ್ರ ಸ್ವಾಮಿ ಶುಭ ಹಾರೈಸಿದರು.
ಕೇರಳ ಸರಕಾರದ ಮಾಜಿ ಸಚಿವ ಕೆ.ಬಾಬು, ಪತ್ರಕರ್ತರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ. ಸಿ. ಲೋಕೇಶ್, ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಅಬ್ದುಲ್ ರಹ್ಮಾನ್ ಸುಬ್ಬಯ್ಯಕಟ್ಟೆ, ಸಾಹಿತಿಗಳಾದ ಡಾ. ಸದಾನಂದ ಪೆರ್ಲ, ರಾಧಾಕೃಷ್ಣ ಉಳಿಯತ್ತಡ್ಕ, ಹಂಝ ಮಲಾರ್, ಪರಿಣಿತಾ ರವಿ, ಕಾಸರಗೋಡು ಕನ್ನಡ ಭವನದ ಸಂಸ್ಥಾಪಕ ವಾಮನ್ ರಾವ್ ಬೇಕಲ್, ಸಂಧ್ಯಾ ರಾಣಿ ಟೀಚರ್, ಬದ್ರುದ್ದೀನ್ ಕೆ. ಮಾಣಿ ಮತ್ತಿತರರು ಭಾಗವಹಿಸಿದ್ದರು.