ಮಂಗಳೂರು ಅಬ್ಬಕ್ಕ ವಿಹಾರ ನೌಕೆಯಲ್ಲಿ ಸಾಂಸ್ಕೃತಿಕ ಸೌರಭ ಕಾರ್ಯಕ್ರಮ
ಮಂಗಳೂರು, ಮೇ 3: ಸಂಘಟನೆ ಮತ್ತು ಸಾಧನೆಗೆ ಅಗಾಧ ಪರಿಶ್ರಮದ ಅವಶ್ಯಕತೆ ಇದೆ. ಅತ್ಯಂತ ತಾಳ್ಮೆ ಯಿಂದ ಕಾರ್ಯನಿರ್ವಹಿಸಿದಾಗ ಮಾತ್ರ ಸಂಘಟನೆಗಳು ನಿರಂತರವಾಗಿ, ಕ್ರಿಯಾಶೀಲತೆಯನ್ನು ಉಳಿಸಿಕೊಳ್ಳಲು ಸಾಧ್ಯ ಎಂದು ಮಿಸ್ಸೆಸ್ ಇಂಡಿಯಾ ಕ್ಲಾಸಿಕ್-ರನ್ನರ್ ಅಪ್ ವಿಜೇತೆ ಮುಂಬೈಯ ಪ್ರಭಾ ಸುವರ್ಣ ಹೇಳಿದರು.
ನಗರದ ಅಬ್ಬಕ್ಕ ವಿಹಾರ ನೌಕೆಯಲ್ಲಿ ಸೋಮವಾರ ನಡೆದ 38ನೇ ಅಂತರಾಷ್ಟ್ರೀಯ ಸಾಂಸ್ಕೃತಿಕ ಸೌರಭ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಅಂತರಾಷ್ಟ್ರೀಯ ಸಾಂಸ್ಕೃತಿಕ ಸೌರಭ ಪರಿಷತ್ ಮತ್ತು ಮಂಜುನಾಥ್ ಎಜುಕೇಶನ್ ಟ್ರಸ್ಟ್ ಮಂಗಳೂರು ಸಂಯುಕ್ತವಾಗಿ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಐಸಿಎಫ್‌ಸಿಐ ಅಧ್ಯಕ್ಷ ಕೆ.ಪಿ. ಮಂಜುನಾಥ್ ಸಾಗರ್, ದುಬೈಯ ತುಳುಕೂಟದ ಮಾಜಿ ಸಂಚಾಲಕ ಶೇಕಬ್ಬ ಕೋಟೆ ಹೆಜಮಾಡಿ ಮಾತನಾಡಿದರು.
ಮಂಗಳೂರು ಫಿಶರೀಸ್ ಕಾಲೇಜಿನ ನಿವೃತ್ತ ಡೀನ್ ಡಾ. ಎಸ್.ಎಂ. ಶಿವಪ್ರಕಾಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಬೆಂಗಳೂರಿನ ಸ್ವಾಮಿ ಎಂಟರ್‌ಪ್ರೈಸಸ್ ಎಂ.ಡಿ.ಗೋ.ನಾ. ಸ್ವಾಮಿ, ನಿವೃತ್ತ ಡಿವೈಎಸ್ಪಿಕೆ.ಎಸ್. ಕೃಷ್ಣಮೂರ್ತಿ, ಮನೋಶಾಸ್ತ್ರಜ್ಞ ಡಾ. ಗುರುರಾಜ್ ರಾವ್ ಉಪಸ್ಥಿತರಿದ್ದರು.
ವಿವಿಧ ಕ್ಷೇತ್ರದ ಸಾಧಕರಾದ. ಡಾ. ವಸಂತ ಮುರಳಿ ಬೆಂಗಳೂರು, ಪ್ರತಿಭಾ ಸಾಲಿಯಾನ್ ಮಂಗಳೂರು, ವಾಮನ ಕುದ್ರೊಳಿ, ಡಾ ಸಂಗೀತಾ ಹೊಳ್ಳ ಅವರಿಗೆ ಗೌರವ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಪ್ರತಿಭಾ ಸಾಲ್ಯಾನ್, ಪ್ರತೀಕ್ಷಾ ಪ್ರಭು ಮತ್ತು ತಂಡದಿಂದ ವಿವಿಧ ನೃತ್ಯಗಳು ಹಾಗು ಗಾಯಕರಾದ ಗೋ. ನಾ. ಸ್ವಾಮಿ, ಡಾ. ಶಿವಪ್ರಕಾಶ್, ಶಿವರಾಜ್ ಪಾಂಡೇಶ್ವರ, ಚಂದ್ರ ಕಾಂತ್, ಎನ್. ನಾಗೇಂದ್ರ ಅವರು ಕನ್ನಡ, ತುಳು ಮತ್ತು ಹಿಂದಿ ಗೀತೆಗಳನ್ನ ಹಾಡಿದರು.