ಹನುಮಾನ್‌ಗೆ ಅವಮಾನ; ಪಿಎಂ ಮೋದಿ ಕ್ಷಮೆ ಯಾಚಿಸಲಿ: ಎಐಸಿಸಿ ವಕ್ತಾರ ಪ್ರೊ. ಗೌರವ್ ವಲ್ಲಭ್ ಆಗ್ರಹ
ಮಂಗಳೂರು: ಧರ್ಮನಿಷ್ಠೆ, ಸೇವೆ ಮತ್ತು ತ್ಯಾಗದ ಪ್ರತೀಕವಾಗಿರುವ ಹನುಮಾನ್‌ನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವಮಾನಿಸುವುದರ ಮೂಲಕ ಹನುಮಾನ್ ಭಕ್ತರ ಭಾವನೆಗಳಿಗೆ ಧಕ್ಕೆ ತಂದಿದ್ದಾರೆಂದು ಆರೋಪಿಸಿರುವ ಎಐಸಿಸಿ ವಕ್ತಾರ ಪ್ರೊ. ಗೌರವ್ ವಲ್ಲಭ್ ಇದಕ್ಕಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕ್ಷಮೆ ಯಾಚಿಸಬೇಕೆಂದು ಆಗ್ರಹಿಸಿದ್ದಾರೆ.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪ್ರಧಾನ ಮೋದಿ ಅವರು ಭಗವಾನ್ ಹನುಮಾನ್ ಮೇಲಿನ ನಮ್ಮ ನಂಬಿಕೆಯನ್ನು ಅವಮಾನಿಸುತ್ತಿದ್ದಾರೆ. ಹನುಮಾನ್ ಭಕ್ತರ ಧಾರ್ಮಿಕ ಭಾವನೆಗೆ ಧಕ್ಕೆ ತಂದಿರುವ ಕಾರಣ ಪ್ರಧಾನಿ ದೇಶದ ಕ್ಷಮೆಯಾಚಿಸಬೇಕು. ಬಜರಂಗ ಬಲಿಯನ್ನು ಅವಮಾನಿಸುವ ಹಕ್ಕನ್ನು ಯಾರೂ ಪ್ರಧಾನಿಗೆ ನೀಡಿಲ್ಲ ಎಂದು ಹೇಳಿದರು.
ಹನುಮನಿಗೆ ಒಂದು ಗುಂಪನ್ನು ಹೋಲಿಕೆ ಮಾಡಿ ಪ್ರಧಾನಿ ಮೋದಿ ಮಹಾಪಾಪ ಮಾಡಿದ್ದಾರೆ. ಸಮಾಜದಲ್ಲಿ ದ್ವೇಷ ಬಿತ್ತುವ, ಸೌಹಾರ್ದತೆಯನ್ನು ಹಾಳು ಮಾಡುವ, ಸಂವಿಧಾನ ವಿರೋಧಿಯಾಗಿ ವರ್ತಿಸು ಸಂಘಟನೆಯ ಮೇಲೆ ಕಾನೂನು ಕ್ರಮ ಕೈಗೊಳ್ಳುವುದಾಗಿ, ಅಗತ್ಯ ಬಿದ್ದರೆ ನಿಷೇಧ ಮಾಡುವುದಾಗಿ ಹೇಳಿದ್ದರಲ್ಲಿ ಕಾಂಗ್ರೆಸ್‌ನ ತಪ್ಪೇನಿದೆ ? ಪ್ರಧಾನಿ ಮೋದಿ ಅವರು ಹಿಂದೆ ಗುಜರಾತ್‌ನ ಮುಖ್ಯಮಂತ್ರಿಯಾಗಿದ್ದಾಗ ರಾಜಧರ್ಮ ಪಾಲಿಸದೆ ಇರುವ ಕಾರಣಕ್ಕಾಗಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ರಾಜಧರ್ಮ ಪಾಲಿಸುವಂತೆ ಎಚ್ಚರಿಕೆ ನೀಡಿದ್ದರು ಎಂದರು.
ಕರ್ನಾಟಕದಲ್ಲಿ ಇತ್ತೀಚೆಗೆ ದಲಿತ ಸಮುದಾಯಕ್ಕೆ ಸೇರಿರುವ ಯುವಕನೊಬ್ಬನನ್ನು ಬಜರಂಗದಳ ಕಾರ್ಯ ಕರ್ತರು ಕೊಲೆ ಮಾಡಿದ್ದಾರೆ. ಪೊಲೀಸ್ ಇಲಾಖೆ ಆರೋಪಿ ಬಜರಂಗದಳ ಕಾರ್ಯಕರ್ತನ ಮೇಲೆ ಪ್ರಕರಣ ದಾಖಲಿಸಿಕೊಂಡಿದೆ. ಆದರೆ 40 ಪರ್ಸೆಂಟ್ ಕಮಿಷನ್ ಸರಕಾರ ಈ ಕೊಲೆ ಪ್ರಕರಣದ ಬಗ್ಗೆ ಮೌನವಾಗಿದೆ. ಹತ್ಯೆಯಾಗಿರುವ ಯುವಕನ ಮನೆಗೆ ಪ್ರಧಾನಿ ಯಾಕೆ ಹೋಗಿಲ್ಲ ? ಕನಿಷ್ಠ ಸಂತಾಪ ವ್ಯಕ್ತಪಡಿಸಲಿಲ್ಲ. ದಲಿತರು ಹಿಂದುಗಳಲ್ಲವೆ ? ದಲಿತರು ಹನುಮಾನ್ ಭಕ್ತರು ಎಂಬ ಭಾವನೆ ನಿಮಗೆ ಬಂದಿಲ್ಲವೇ ? ಎಂದು ಪ್ರಶ್ನಿಸಿದರು.
ಎಐಸಿಸಿ ವೀಕ್ಷಕ ಚರಣ್ ಸಿಂಗ್ ಸಪ್ರಾ, ಕಾಸರಗೋಡು ಸಂಸದ ರಾಜಮೋಹನ್ ಉನ್ನಿತಾನ್, ವಿಧಾನ ಪರಿಷತ್ ಸದಸ್ಯರಾದ ಡಾ. ಮಂಜುನಾಥ್ ಭಂಡಾರಿ, ಹರೀಶ್ ಕುಮಾರ್ , ಮಾಜಿ ವಿಪ ಸದಸ್ಯ ಐವನ್ ಡಿ ಸೋಜ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ ಎಚ್ ,ವಕ್ತಾರ ಎಸಿ ವಿನಯರಾಜ್ ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಭ್ರಷ್ಟಾಚಾರ ಬಿಜೆಪಿಯ ಡಿಎನ್‌ಐ: ಚೆನ್ನಿತಲ
ಕರ್ನಾಟಕದಲ್ಲಿ ಕಳೆದ ಮೂರೂವರೆ ವರ್ಷಗಳಿಂದ ಅಧಿಕಾರದಲ್ಲಿರುವ ಬಿಜೆಪಿ ಸರಕಾರವು ಭ್ರಷ್ಟಾಚಾರದಲ್ಲಿ ಮುಳುಗಿದೆ. ಜನರು ಬದಲಾವಣೆ ಬಯಸಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ದೊಂದಿಗೆ ಅಧಿಕಾರಕ್ಕೇರಲಿದೆ ಎಂದು ಕೇರಳ ವಿಧಾನ ಸಭೆಯ ಮಾಜಿ ವಿಪಕ್ಷ ನಾಯಕ ರಮೇಶ್ ಚೆನ್ನಿತಲ ತಿಳಿಸಿದ್ದಾರೆ.
ಬಿಜೆಪಿಯ ಡಿಎನ್‌ಎ ಭ್ರಷ್ಟಾಚಾರ ಆಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತಾ ಶಾ ಕರ್ನಾಟಕದಲ್ಲಿ ಭ್ರಷ್ಟಾಚಾರಕ್ಕೆ ಪ್ರೋತ್ಸಾಹ ನೀಡುತ್ತಿದ್ದಾರೆ. ಇದರಿಂದಾಗಿ ಬಿಜೆಪಿ ಸರಕಾರದ ಜನವಿರೋಧಿ ನೀತಿಯ ಬಗ್ಗೆ ರೋಸಿ ಹೋಗಿರುವ ಜನತೆ ಕಾಂಗ್ರೆಸ್ ನೇತೃತ್ವದ ಹೊಸ ಸರಕಾರಕ್ಕೆ ಅಧಿಕಾರ ನೀಡಲಿದ್ದಾರೆ ಎಂದರು. ಕರ್ನಾಟಕದ ಅಭಿವೃದ್ಧಿಯೇ ಕಾಂಗ್ರೆಸ್‌ನ ಧೈಯವಾಗಿದೆ. ಸ್ವಚ್ಛ ಮತ್ತು ಉತ್ತಮ ಸರಕಾರವನ್ನು ನೀಡಲಿದೆ ಎಂದರು.