ದೇವರು, ಧರ್ಮದ ಹೆಸರಿನಲ್ಲಿ ಮುಗ್ದ ದಲಿತರನ್ನು ಬಲಿಪಶು ಮಾಡುತ್ತಿರುವ ಬಿಜೆಪಿ: ಶೇಖರ್ ಹೆಜಮಾಡಿ ಆರೋಪ
ಕಾಪು: ದೇವರು, ಧರ್ಮದ ಹೆಸರಿನಲ್ಲಿ ಅಮಾಯಕ ಮುಗ್ದ ದಲಿತರನ್ನು ಬಳಸಿಕೊಂಡು ನಿಮ್ಮ ಉದ್ಧಾರಕರು ನಾವೇ ಎಂದು ಆಮೀಷವೊಡ್ಡಿ ಇತರ ಧರ್ಮದವರ ಮೇಲೆ ಸವಾರಿ ಮಾಡಿ ಧರ್ಮರಾಜಕಾರಣ ಮಾಡಿ ಮುಗ್ದ ದಲಿತರನ್ನು ಬಲಿಪಶು ಮಾಡುತ್ತಿರುವುದು ಬಿಜೆಪಿ ಪಕ್ಷದ ಮೂಲ ಮಂತ್ರವಾಗಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ವಿಭಾಗೀಯ ಸಂಚಾಲಕರಾದ ಶೇಖರ್ ಹೆಜಮಾಡಿ ಆರೋಪಿಸಿದ್ದಾರೆ.
ಕಾಪು ಪ್ರೆಸ್ ಕ್ಲಬ್‍ನಲ್ಲಿ ಬುಧವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ದಿನನಿತ್ಯ ದಲಿತರ ಮೇಲೆ ಹಲ್ಲೆಗಳು ದಲಿತ ಹೆಣ್ಣು ಮಕ್ಕಳ ಮೇಲೆ ನಿರಂತರ ಅತ್ಯಾಚಾರ ನಡೆಯುತ್ತಿದ್ದು, ಬಿಜೆಪಿ ಸರಕಾರ ದಲಿತರ ಬಗ್ಗೆ ಮೌನವಾಗಿದ್ದು ಹಲ್ಲೆ ನಡೆಸಿದ ಮೇಲ್ವರ್ಗದ ಜನಗಳನ್ನು ರಕ್ಷಣೆ ಮಾಡುತ್ತಿರುವುದು ಖಂಡನೀಯ. ಕಾನೂನು ನೆಲೆಯಲ್ಲಿ ಹೋರಾಟ ಮಾಡುವ ಮಾನವ ಹಕ್ಕು ಹೋರಾಟಗಾರರನ್ನು ಜೈಲಿಗೆ ತಳ್ಳುವ ಮೂಲಕ ಬಿಜೆಪಿ ಸರಕಾರದ ದಮನಕಾರಿ ನೀಡಿ ಬಹಿರಂಗವಾಗಿದೆ. ಶೋಷಿತ ದಲಿತ ಸಮುದಾಯದ ಅಭಿವೃದ್ಧಿ ಮತ್ತು ಭಾರತದ ಸಂವಿಧಾನ ಹಾಗೂ ಪ್ರಜಾಪ್ರಭುತ್ವ ರಕ್ಷಣೆಗಾಗಿ ಕಾಂಗ್ರೆಸ್ ಪಕ್ಷ ಅನಿವಾರ್ಯ. ನಾಗಮೋಹನ್ ದಾಸ್ ಆಯೋಗದ ವರದಿಯಂತೆ ಶೇಕಡಾ 50ರಷ್ಟು ಮೀಸಲಾತಿಯನ್ನು ಮೀರಿಸುವಂತಿಲ್ಲ. ಆದರೆ ಬಿಜೆಪಿ ಸರಕಾರ ಚುನಾವಣೆಗಾಗಿ ತರಾತುರಿಯಲ್ಲಿ ಪರಿಶಿಷ್ಟ ಜಾತಿಯ ಶೇ.15 ರಿಂದ ಶೇ.17 ರ ವರೆಗೆ ಹಾಗೂ ಪರಿಶಿಷ್ಟ ಪಂಗಡದ ಮೀಸಲಾತಿಯನ್ನು 3ರಿಂದ 7ಕ್ಕೆ ಹೆಚ್ಚಿಸುವ ಆದೇಶದೊಂದಿಗೆ ಕೇಂದ್ರಕ್ಕೆ ಕಳುಹಿಸಿದ್ದು, ಇದು ಸಂವಿಧಾನದ ಶೆಡ್ಯುಲ್ 9ಕ್ಕೆ ಸೇರಿಸಿ ಸುಪ್ರಿಂ ಕೋರ್ಟಿನ ಅನುಮೋದನೆಗೆ ಕಳುಹಿಸಬೇಕು. ಈ ಬಗ್ಗೆ ಕೇಂದ್ರ ಸಮಾಜ ಕಲ್ಯಾಣ ಸಚಿವರು ಈಗಾಗಲೇ ಇದು ಅಸಾಧ್ಯ ಎಂದು ಹೇಳಿಕೆ ನೀಡಿದ್ದು, ಈ ಬಗ್ಗೆ ದೇಶದ ಪ್ರಧಾನಿ ಹಾಗೂ ಗೃಹ ಸಚಿವರು ಯಾವುದೇ ಪ್ರತಿಕ್ರಿಯೆ ನೀಡಿರುವುದಿಲ್ಲ. ಇದೊಂದು ದಲಿತರಿಗೆ ಬಗೆದ ದೊಡ್ಡ ಮೋಸ ಎಂದು ರುಜುವಾತಾಗಿದೆ. ಇದನ್ನು ದಲಿತ ಸಮಾಜ ಅರ್ಥೈಸಿಕೊಳ್ಳಬೇಕು. ದೇಶದಲ್ಲಿ ಸುಮಾರು 60 ಲಕ್ಷ ವಿದ್ಯಾರ್ಥಿ ವೇತನವನ್ನು ತಡೆಹಿಡಿಯುವುದರ ಮೂಲಕ ದಲಿತ ವಿದ್ಯಾರ್ಥಿಗಳ ಶಿಕ್ಷಣಕ್ಕೆ ತಡೆ ಮಾಡಿರುತ್ತದೆ. ಇದು ದಲಿತರ ಶೈಕ್ಷಣಿಕ ಅಭಿವೃದ್ಧಿಯನ್ನು ಕುಂಠಿತಗೊಳಿಸಿದೆ ಎಂದು ಶೇಖರ್ ಹೆಜಮಾಡಿ ದೂರಿದರು.
ಜಿಲ್ಲೆಯವರಾದ ಸಮಾಜ ಕಲ್ಯಾಣ ಸಚಿವರು ದಲಿತರ ಮನೆ ನಿರ್ಮಾಣಕ್ಕೆ 5 ಲಕ್ಷ ರೂಪಾಯಿ ಸರಕಾರದಿಂದ ಘೋಷಣೆ ಮಾಡಿದ್ದು ಜಾರಿ ಮಾಡಲು ಸಾಧ್ಯವಾಗಲಿಲ್ಲ ಇದು ಸರಕಾರದ ದಲಿತ ವಿರೋಧಿ ನೀತಿಯನ್ನು ಪ್ರತಿಬಿಂಬಿಸುತ್ತಿದ್ದು ಸರಕಾರದ ಶೇಕಡಾ 24.1 ರ ದಲಿತರ ಕಲ್ಯಾಣ ನಿಧಿಯಲ್ಲಿ 2017 ರಿಂದ 2023 ರ ವರೆಗೆ ಕನಿಷ್ಟ ಅಧಾರ್ಂಶದಷ್ಟು ನಿಧಿಯನ್ನೂ ನೀಡದೇ, ಬಿ.ಜೆ.ಪಿ ಸರಕಾರ ದಲಿತರಿಗೆ ಅನ್ಯಾಯ ಮಾಡಿರುತ್ತದೆ. ಇಂತಹ ಅನೇಕ ಪ್ರಕರಣಗಳು ಸರಕಾರದ ಮುಂದೆ ಇದ್ದು ಸರಕಾರದ ದಲಿತ ವಿರೋಧಿ ನೀತಿಯನ್ನು ಪ್ರತಿಬಿಂಬಿ ಸುತ್ತಿದ್ದು, ಇದನ್ನು ದಲಿತ ಸಮುದಾಯ ಅರ್ಥೈಸಿಕೊಂಡು ಸಂವಿಧಾನ ವಿರೋಧಿ ಪ್ರಜಾಪ್ರಭುತ್ವದ ವಿರೋಧಿ ಬಿ.ಜೆ.ಪಿ ಸರಕಾರದ ವಿರುದ್ಧ ಮತಚಲಾವನೆ ಮಾಡಬೇಕು ಎಂದು ಅವರು ಹೇಳಿದರು.
ಕೀರ್ತಿ ಕುಮಾರ್ ಪಡುಬಿದ್ರಿ, ವಿಠಲ್ ಮಾಸ್ಟರ್, ಕೇಶವ ಸಾಲ್ಯಾನ್, ವಸಂತಿ ಶಿವಾನಂದ್, ಸತೀಶ್ಚಂದ್ರ ಮೂಳೂರು, ಸೌಮ್ಯ ಸಂಜೀವ ಕಾಪು ಉಪಸ್ಥಿರಿದ್ದರು.