×
Ad

ನವಮಂಗಳೂರು ಬಂದರಿಗೆ ಆಗಮಿಸಿದ ‘ಎಂವಿ ಇನ್‌ಸಿಗ್ನಿಯ’ ಹಡಗು

Update: 2023-05-03 20:09 IST

ಮಂಗಳೂರು: ಪ್ರಸ್ತುತ ಋತುವಿನ ಏಳನೇ ಕ್ರೂಸ್ ಎಂವಿ ಇನ್‌ಸಿಗ್ನಿಯ’ ಬುಧವಾರ ಬೆಳಗ್ಗೆ ನವಮಂಗಳೂರು ಬಂದರಿಗೆ ಆಗಮಿಸಿತು.

466 ಪ್ರಯಾಣಿಕರು ಮತ್ತು 399 ಸಿಬ್ಬಂದಿಯನ್ನು ಹೊತ್ತ ಫುಜೈರಾ ಮತ್ತು ಮುಂಬೈ, ಗೋವಾ ಮೂಲಕ  ಮಂಗಳೂರಿಗೆ ಆಗಮಿಸಿದ್ದು, ಸುಮಾರು ನಾಲ್ಕುವರೆ ಗಂಟೆಗಳ ಕಾಲ ಲಂಗರು ಹಾಕಿದ್ದ ಹಡಗು ಬಳಿಕ ಕೊಚ್ಚಿನ್ ಬಂದರಿಗೆ ತೆರಳಿತು.

180.05 ಮೀಟರ್  ಉದ್ದದ ಈ ಹಡಗು  ಒಟ್ಟು 30,277 ಟನ್ ಭಾರವನ್ನು ಸಾಗಿಸುವ  ಸಾಮರ್ಥ್ಯ ಹೊಂದಿದೆ.  ನಾರ್ವೇಜಿಯನ್ ಕ್ರೂಸ್ ಲೈನ್ ಹೋಲ್ಡಿಂಗ್ಸ್ ಲಿಮಿಟೆಡ್‌ನ ಅಂಗಸಂಸ್ಥೆಯಾಗಿರುವ . ಓಷಿಯಾನಿಯಾ ಕ್ರೂಸಸ್ ಒಡೆತನಕ್ಕೊಳಪಟ್ಟ ಹಡಗಿನಿಂದ ಪ್ರಯಾಣಿಕರು ಮಂಗಳೂರಿನ ನೆಲಕ್ಕೆ ಕಾಲಿರಿಸುತ್ತಿದ್ದಂತೆ ಸಾಂಪ್ರದಾಯಿಕ ಸ್ವಾಗತ ನೀಡಲಾಯಿತು.

ಕ್ರೂಸ್ ಪ್ರಯಾಣಿಕರಿಗೆ ಆಹ್ಲಾದಕರ ಅನುಭವಕ್ಕಾಗಿ ವಿವಿಧ ವ್ಯವಸ್ಥೆಗಳನ್ನು ಮಾಡಲಾಯಿತು. ಪ್ರಯಾಣಿಕರ ವೈದ್ಯಕೀಯ ತಪಾಸಣೆ, ಮಂಗಳೂರು ನಗರದ ಮತ್ತು ಸುತ್ತಮುತ್ತಲಿನ ವಿವಿಧ ಸ್ಥಳಗಳನ್ನು ಪ್ರವಾಸ ಮಾಡಲು ಪ್ರಯಾಣಿಕರಿಗೆ ವ್ಯವಸ್ಥೆ ಮಾಡಲಾಗಿತ್ತು. ಕ್ರೂಸ್ ಲಾಂಜ್‌ನ ಒಳಗೆ ಆಯುಷ್ ಇಲಾಖೆ ಸ್ಥಾಪಿಸಿದ ಧ್ಯಾನ ಕೇಂದ್ರದ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಪ್ರಯಾಣಿಕರ ಮನರಂಜನೆಗಾಗಿ ಬಂದರು ಕ್ರೂಸ್ ಲಾಂಜ್‌ನಲ್ಲಿ ಯಕ್ಷಗಾನ ಪ್ರದರ್ಶನ ಏರ್ಪಡಿಸಲಾಗಿತ್ತು.

ಅಚಲ್ ಗೋಡಂಬಿ ಕಾರ್ಖಾನೆ, ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನ, ಸೈಂಟ್ ಅಲೋಶಿಯಸ್ ಚಾಪೆಲ್, ಸ್ಥಳೀಯಮಾರುಕಟ್ಟೆ, ಪಿಲಿಕುಳ ನಿಸರ್ಗಧಾಮ, ಸಾವಿರ ಕಂಬಗಳ ಬಸದಿ ಮತ್ತು ಸೋನ್ಸ್ ಫಾರ್ಮ್‌ಗೆ ಭೇಟಿ ನೀಡಿದರು. ಹಡಗು ತನ್ನ ಮುಂದಿನ ತಾಣವಾದ ಕೊಚ್ಚಿನ್ ಬಂದರಿಗೆ ಸಂಜೆ 4:30ಕ್ಕೆ ಪ್ರಯಾಣ ಮುಂದುವರಿಸಿತು ಎಂದು ಎನ್‌ಎಂಪಿಎ ಪ್ರಕಟನೆ ತಿಳಿಸಿದೆ.

Similar News