×
Ad

ಚುನಾವಣಾ ನೀತಿ ಸಂಹಿತೆ ಜಾರಿಯಾದ ನಂತರ ಒಟ್ಟು 323 ಕೋಟಿ ರೂ.ಮೌಲ್ಯದ ಸೊತ್ತು ವಶ: ಮುಖ್ಯ ಚುನಾವಣಾಧಿಕಾರಿ

Update: 2023-05-03 22:24 IST

ಬೆಂಗಳೂರು, ಮೇ 3: ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ಮಾದರಿ ನೀತಿ ಸಂಹಿತೆ ಜಾರಿಯಾದ ನಂತರ ವಿಚಕ್ಷಣ ದಳ, ಸ್ಥಿರ ಕಣ್ಗಾವಲು ತಂಡಗಳು, ಪೊಲೀಸ್ ಮತ್ತು ಆದಾಯ ತೆರಿಗೆ ಅಧಿಕಾರಿಗಳು ಸೇರಿ ಎಲ್ಲ ತಂಡಗಳು ಒಟ್ಟು 323 ಕೋಟಿ ರೂ.ಮೌಲ್ಯದ ನಗದು ಸೇರಿದಂತೆ ಮದ್ಯ, ಮಾದಕ ದ್ರವ್ಯ ಇತ್ಯಾದಿ ವಸ್ತುಗಳನ್ನು ವಶಪಡಿಸಿಕೊಂಡಿವೆ ಎಂದು ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ತಿಳಿಸಿದ್ದಾರೆ.

115.96 ಕೋಟಿ ರೂ.ನಗದು, 22.36 ಕೋಟಿ ರೂ.ಮೌಲ್ಯದ ಉಚಿತ ಕೊಡುಗೆ, ಉಡುಗೊರೆ ವಸ್ತುಗಳು, 76.07 ಕೋಟಿ ರೂ.ಮೌಲ್ಯದ 20.29 ಲಕ್ಷ ಲೀಟರ್ ಮದ್ಯ, 21.37 ಕೋಟಿ ರೂ.ಮೌಲ್ಯದ 1,689 ಕೆಜಿ ಮಾದಕ ದ್ರವ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ. 82.77 ಕೋಟಿ ರೂ.ಮೌಲ್ಯದ 162.26 ಕೆಜಿ ಚಿನ್ನ, 4.54 ಕೋಟಿ ರೂ.ಮೌಲ್ಯದ 656.13 ಕೆಜಿ ಬೆಳ್ಳಿ ಸೇರಿದಂತೆ ಒಟ್ಟು 323.09 ಕೋಟಿ ರೂ.ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಚುನಾವಣಾಧಿಕಾರಿ ಮಾಹಿತಿ ನೀಡಿದ್ದಾರೆ.

ಚುನಾವಣಾ ಅಕ್ರಮಗಳಿಗೆ ಸಂಬಂಧಿಸಿದಂತೆ ವಿಚಕ್ಷಣ ದಳ, ಸ್ಥಿರ ಕಣ್ಗಾವಲು ತಂಡಗಳು, ಪೊಲೀಸ್ ಇಲಾಖೆಯು ಈವರೆಗೆ 2514 ಎಫ್‍ಐಆರ್ ಗಳನ್ನು ದಾಖಲಿಸಿದ್ದಾರೆ. 69,847 ಶಸ್ತ್ರಾಸ್ತ್ರಗಳನ್ನು ಜಮೆ ಮಾಡಿಸಿಕೊಳ್ಳಲಾಗಿದೆ. 18 ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. 20 ಶಸ್ತ್ರಾಸ್ತ್ರ ಪರವಾನಿಗೆ ರದ್ದುಪಡಿಸಲಾಗಿದೆ. ಸಿಆರ್‍ಪಿಸಿ ಕಾಯ್ದೆಯಡಿ 5,583 ಪ್ರಕರಣಗಳನ್ನು ದಾಖಲಿಸಲಾಗಿದೆ. ಅವುಗಳಲ್ಲಿ 10,297 ವ್ಯಕ್ತಿಗಳಿಂದ ಮುಚ್ಚಳಿಕೆ ಪತ್ರ ಪಡೆಯಲಾಗಿದೆ. 15,944  ಜಾಮೀನು ರಹಿತ ವಾರೆಂಟ್‍ಗಳನ್ನು ಜಾರಿಗೊಳಿಸಲಾಗಿದೆ.

ವಿಶೇಷ ವರದಿ: ವಿಚಕ್ಷಣ ದಳದವರು ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 3.94 ಕೋಟಿ ರೂ.ಮೌಲ್ಯದ 7.881 ಕೆಜಿ ಚಿನ್ನ, 2.22 ಕೋಟಿ ರೂ.ಮೌಲ್ಯದ 3.993 ಕೆಜಿ ಕಚ್ಚಾ ಚಿನ್ನ, 41.27 ಲಕ್ಷ ರೂ.ಮೌಲ್ಯದ 0.735 ಗ್ರಾಂ ವಜ್ರ ಖಚಿತ ಚಿನ್ನ, 6.48 ಲಕ್ಷ ರೂ.ಮೌಲ್ಯದ 0.6538 ವಜ್ರಾಭರಣ, 6.39 ಲಕ್ಷ ರೂ.ಮೌಲ್ಯದ 10.887 ಕೆಜಿ ಕಚ್ಚಾ ಬೆಳ್ಳಿಯನ್ನು ವಶಪಡಿಸಿಕೊಳ್ಳಲಾಗಿದೆ.

ಉಡುಪಿ ಜಿಲ್ಲೆಯ ಕುಂದಾಪುರ ಕ್ಷೇತ್ರದಲ್ಲಿ ವಿಚಕ್ಷಣ ದಳದವರು 89.01 ಲಕ್ಷ ರೂ.ನಗದು, ಸ್ಥಿರ ಕಣ್ಗಾವಲು ತಂಡದವರು ಬಾಗಲಕೋಟೆ ಜಿಲ್ಲೆಯ ತೇರದಾಳ ಕ್ಷೇತ್ರದಲ್ಲಿ 70 ಲಕ್ಷ ರೂ.ನಗದು, ತುಮಕೂರು ಜಿಲ್ಲೆಯ ತುರುವೇಕೆರೆ ಕ್ಷೇತ್ರದಲ್ಲಿ 31.88 ಲಕ್ಷ ರೂ.ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಆಯೋಗ ತಿಳಿಸಿದೆ.

Similar News