ಡಿ.ಕೆ.ಶಿವಕುಮಾರ್, ಝಮೀರ್ ಅಹ್ಮದ್ ಖಾನ್ ವಿರುದ್ಧ ಬಿಜೆಪಿ ದೂರು

Update: 2023-05-03 17:02 GMT

ಬೆಂಗಳೂರು, ಮೇ 3: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಿನ್ನೆ ಚಿಕ್ಕಬಳ್ಳಾಪುರದಲ್ಲಿ ಮಾತನಾಡುವ ವೇಳೆ ಪೊಲೀಸರಿಗೆ ಧಮ್ಕಿ ಹಾಕಿರುವುದರ ವಿರುದ್ಧ ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ದೂರು ಸಲ್ಲಿಸಲಾಗಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ತಿಳಿಸಿದರು.

ಬುಧವಾರ ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ದೂರು ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ ಚಿಕ್ಕಬಳ್ಳಾಪುರದಲ್ಲಿ ಶಿವಕುಮಾರ್ ಮಾತನಾಡುತ್ತ ‘ನಮ್ಮ ಸರಕಾರ ಬಂದರೆ ನಿಮ್ಮನ್ನು ನೋಡಿಕೊಳ್ತೇನೆ. ನೀವು ಖಾಕಿ ಬಿಚ್ಚಿಟ್ಟು ಕೆಲಸ ಮಾಡಿ’ ಎಂದು ಪೊಲೀಸರಿಗೆ ಬೆದರಿಸಿದ್ದಾರೆ ಎಂದರು.

ಒಂದು ತಿಂಗಳ ಹಿಂದೆ ರಾಜ್ಯದ ಡಿಐಜಿ, ಐಜಿಯವರಿಗೆ ಶಿವಕುಮಾರ್ ಧಮ್ಕಿ ಹಾಕಿದ್ದರು. ಆ ಮೂಲಕ ಅವರು ಚುನಾವಣಾ ನೀತಿಸಂಹಿತೆಯನ್ನು ಉಲ್ಲಂಘಿಸಿದ್ದಾರೆ. ಪೊಲೀಸರ ಕೆಲಸಕ್ಕೆ ಅಡ್ಡಿ ಮಾಡುತ್ತಿರುವ ಶಿವಕುಮಾರ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಮನವಿ ಸಲ್ಲಿಸಲಾಗಿದೆ ಎಂದು ಶೋಭಾ ಕರಂದ್ಲಾಜೆ ತಿಳಿಸಿದರು.

ಶಾಸಕ ಝಮೀರ್ ಅಹ್ಮದ್ ಖಾನ್ ಹುಮ್ನಾಬಾದಿನ ಚುನಾವಣಾ ಸಭೆಯಲ್ಲಿ ಮಾತನಾಡುವ ವೇಳೆ ರಾಷ್ಟ್ರಧ್ವಜ ಬಳಸಿ ನೀತಿಸಂಹಿತೆ ಉಲ್ಲಂಘಿಸಿದ್ದಾರೆ. ಕಾಂಗ್ರೆಸ್ಸಿಗೆ ದೇಶದ ಧ್ವಜ, ಪ್ರಧಾನಿ ಬಗ್ಗೆ ಗೌರವ ಇಲ್ಲ. ದೇಶದ ಯಾವುದೆ ವಿಚಾರಗಳ ಬಗ್ಗೆ ಗೌರವ ಇಲ್ಲ.ಅವರ ವಿರುದ್ಧ ಪ್ರಕರಣ ದಾಖಲಿಸುವಂತೆ ಮನವಿ ಸಲ್ಲಿಸಲಾಗಿದೆ ಎಂದು ಅವರು ಹೇಳಿದರು.

Similar News