ಮ್ಯಾನ್ಮಾರ್‌ನಲ್ಲಿನ ತನ್ನ ಬಂದರನ್ನು ಹೂಡಿಕೆ ಮೊತ್ತಕ್ಕಿಂತಲೂ ಬಹಳ ಕಡಿಮೆ ಬೆಲೆಗೆ ಮಾರಾಟ ಮಾಡಿದ ಅದಾನಿ ಪೋರ್ಟ್ಸ್
ಬೆಂಗಳೂರು: ಅದಾನಿ ಪೋರ್ಟ್ಸ್ ಎಂಡ್ ಸ್ಪೆಷಲ್ ಇಕನಾಮಿಕ್ ಝೋನ್ ಲಿಮಿಟೆಡ್ ತನ್ನ ಒಡೆತನದಲ್ಲಿದ್ದ ಮ್ಯಾನ್ಮಾರ್‌ನಲ್ಲಿನ ಬಂದರನ್ನು 30 ಮಿಲಿಯನ್ ಡಾಲರ್‌ಗೆ ಮಾರಾಟ ಮಾಡುವ ಪ್ರಕ್ರಿಯೆಯನ್ನು ಪೂರ್ಣಗೊಳಿದೆ ಎಂದು ಸಂಸ್ಥೆ ಮಾಹಿತಿ ನೀಡಿದೆ. ಈ ಮೊತ್ತವು ಅದಾನಿ ಸಂಸ್ಥೆ ಈ ಬಂದರಿಗೆ ಹೂಡಿಕೆ ಮಾಡಿದ ಮೊತ್ತಕ್ಕಿಂತ ಬಹಳ ಕಡಿಮೆಯಾಗಿದೆ ಎಂದು REUTERS ವರದಿ ಮಾಡಿದೆ.
ಮ್ಯಾನ್ಮಾರ್‌ನಲ್ಲಿ ಮಿಲಿಟರಿ ಕ್ಷಿಪ್ರಕ್ರಾಂತಿ ಮೇ 2020ರಲ್ಲಿ ನಡೆದ ನಂತರ ತನ್ನ ಬಂದರನ್ನು ಮಾರಾಟ ಮಾಡುವುದಾಗಿ ಅದಾನಿ ಸಮೂಹ ಹೇಳಿತ್ತು. ಈ ಕ್ಷಿಪ್ರಕ್ರಾಂತಿಯ ನಂತರ ಆ ದೇಶದಲ್ಲಿ ವ್ಯಾಪಕ ಪ್ರತಿಭಟನೆಗಳು ನಡೆದು ಮತ್ತು ಅಮೆರಿಕಾದಿಂದ ನಿರ್ಬಂಧಗಳೂ ಹೇರಲ್ಪಟ್ಟಿದ್ದವು.
ಆದರೆ ಕೆಲವೊಂದು ಷರತ್ತುಗಳನ್ನು ಪೂರ್ಣಗೊಳಿಸಬೇಕಿದ್ದುದರಿಂದ ಈ ಮಾರಾಟ ಪ್ರಕ್ರಿಯೆ ವಿಳಂಬಗೊಂಡಿತ್ತು. ಸೋಲಾರ್ ಎನರ್ಜಿ ಲಿಮಿಟೆಡ್ ಎಂಬ ಸಂಸ್ಥೆಗೆ ಈ ಬಂದರು ಮಾರಾಟ ಮಾಡಲಾಗಿದೆ ಎಂದು ಹೇಳಲಾಗಿದ್ದು ಈ ಸಂಸ್ಥೆ ಯಾವ ದೇಶದ್ದು ಎಂದು ತಿಳಿದು ಬಂದಿಲ್ಲ.
ಅದಾನಿ ಸಂಸ್ಥೆ ಮ್ಯಾನ್ಮಾರ್‌ನಲ್ಲಿನ ಬಂದರು ಯೋಜನೆಗೆ 127 ಮಿಲಿಯನ್ ಡಾಲರ್ ಹೂಡಿಕೆ ಮಾಡಿತ್ತು. ಇದರಲ್ಲಿ ಜಮೀನು ಲೀಸ್‌ಗಾಗಿ ಪಾವತಿಸಿದ 90 ಮಿಲಿಯನ್ ಡಾಲರ್ ಮೊತ್ತವೂ ಸೇರಿದೆ.
ಅದಾನಿ ಸಂಸ್ಥೆ ಈ ಯೋಜನೆಗೆ ರೂ. 195 ಮಿಲಿಯನ್ ಡಾಲರ್ ಹೂಡಿಕೆ ಮಾಡಿದೆ ಎಂದು ಕೆಲ ಮೂಲಗಳು ಹೇಳಿವೆ.
ಮ್ಯಾನ್ಮಾರ್ ಬಂದರು ಮಾರಾಟ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು ಅದಾನಿ ಸಂಸ್ಥೆ ಘೋಷಿಸಿದ ಬೆನ್ನಿಗೆ ಅದರ ಷೇರುಗಳ ಬೆಲೆ ಶೇ 1.2ರಷ್ಟು ಏರಿಕೆ ಕಂಡಿದೆ.