×
Ad

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ರೋಡ್‌ ಶೋನಲ್ಲಿ ಮಹತ್ವದ ಬದಲಾವಣೆ

Update: 2023-05-04 20:45 IST

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ರೋಡ್‌ ಶೋದಿಂದ ಅನುಭವಿಸಿದ ತೊಂದರೆಗಳ ಬಗ್ಗೆ ಬೆಂಗಳೂರಿಗರು ಆಕ್ಷೇಪ ಎತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಒಂದೇ ದಿನದಲ್ಲಿ ನಡೆಸಬೇಕಿದ್ದ ಎಂಟು ಗಂಟೆಗಳ ರೋಡ್ ಶೋವನ್ನು ಬಿಜೆಪಿ ಕೈಬಿಟ್ಟಿದೆ. ಬದಲಾಗಿ ಅದನ್ನು ಎರಡು ದಿನಗಳಿಗೆ ವಿಸ್ತರಿಸಿದೆ.

ಶನಿವಾರ ಬೆಳಗ್ಗೆ 10 ರಿಂದ ಮಧ್ಯಾಹ್ನ 1.30 ವರೆಗೆ ಹಾಗೂ ರವಿವಾರ ಬೆಳಗ್ಗೆ 10 ರಿಂದ ಮಧ್ಯಾಹ್ನ 2.30 ರವರೆಗೆ ಎರಡು ದಿನಗಳ ಕಾಲ ಪ್ರಧಾನಿ ರೋಡ್ ಶೋ ನಡೆಸಲಿದ್ದಾರೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಪ್ರಧಾನಿ ಮೋದಿ ಅವರು ಒಟ್ಟು 36.6 ಕಿಮೀ ರೋಡ್ ಶೋ ನಡೆಸಲಿದ್ದಾರೆ ಎಂದು ಪಕ್ಷ ಬುಧವಾರ ಹೇಳಿದೆ. ಬಿಜೆಪಿ ಯೋಜನೆ ಪ್ರಕಾರ ಬೆಳಿಗ್ಗೆ 11 ರಿಂದ ಮಧ್ಯಾಹ್ನ 1 ರವರೆಗೆ ಹಾಗೂ ಸಂಜೆ 4 ರಿಂದ ರಾತ್ರಿ 10 ರವರೆಗೆ ರೋಡ್‌ ಶೋ ನಡೆಸಲು ಬಿಜೆಪಿ ಸಜ್ಜಾಗಿತ್ತು. 

ಇಡೀ ದಿನ ರೋಡ್ ಶೋ ನಡೆಸಿದರೆ ತೊಂದರೆಯಾಗುತ್ತದೆ ಎಂದು ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಅವರ ಭಾವನೆಗೆ ಗೌರವ ನೀಡಿ ಎರಡು ದಿನ ಪ್ರಚಾರ ಮಾಡಲು ನಿರ್ಧರಿಸಿದ್ದೇವೆ ಎಂದು ಕರಂದ್ಲಾಜೆ ಗುರುವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಮೇ 6 ಮತ್ತು 7 ರಂದು ನಗರದ ಒಟ್ಟು 28 ವಿಧಾನಸಭಾ ಕ್ಷೇತ್ರಗಳ ಪೈಕಿ 19 ಕ್ಷೇತ್ರಗಳಲ್ಲಿ ರೋಡ್ ಶೋಗಳು ನಡೆಯಲಿವೆ ಎಂದು ಪಕ್ಷದ ಮುಖಂಡರು ತಿಳಿಸಿದ್ದಾರೆ.

Similar News