ಬೆಂಗಳೂರಿನಲ್ಲಿ ಪ್ರಧಾನಿ ಮೋದಿ ‘ರೋಡ್ ಶೋ’ಗೆ ಹೈಕೋರ್ಟ್‍ನಿಂದ ಅನುಮತಿ

Update: 2023-05-05 14:54 GMT

ಬೆಂಗಳೂರು, ಮೇ 5: ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಮೇ 6 ಮತ್ತು 7ರಂದು ಪ್ರಧಾನಿ ಮೋದಿ ಅವರ ರೋಡ್ ಶೋಗೆ ಹೈಕೋರ್ಟ್ ಅನುಮತಿ ನೀಡಿದೆ. ಜತೆಗೆ, ನೀಟ್ ಪರೀಕ್ಷೆಗಳು ನಡೆಯುತ್ತಿರುವ ಸಂಬಂಧ ರವಿವಾರ ಮಾತ್ರ ಬೆಳಗ್ಗೆ 9 ಗಂಟೆಯಿಂದ ಬೆಳಗ್ಗೆ 11.30ರ ವರೆಗೆ ರೋಡ್ ಶೋಗೆ ಅನುಮತಿ ನೀಡಲಾಗುತ್ತದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಪರ ವಕೀಲರು ತಿಳಿಸಿದ್ದಾರೆ.    

ಶುಕ್ರವಾರ ಈ ಕುರಿತು ವಕೀಲ ಎನ್.ಪಿ.ಅಮೃತೇಶ್ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಕೃಷ್ಣ ಎಸ್. ದೀಕ್ಷಿತ್ ಮತ್ತು ನ್ಯಾ.ವಿಜಯಕುಮಾರ್ ಎ. ಪಾಟೀಲ್ ಅವರಿದ್ದ ನ್ಯಾಯಪೀಠ, ರೋಡ್ ಶೋಗೆ ಅನುಮತಿ ನೀಡಿ ಆದೇಶ ಹೊರಡಿಸಿದೆ. ಜತೆಗೆ, ರೋಡ್ ಶೋ ವೇಳೆ ಅಹಿತಕರ ಘಟನೆ ನಡೆದರೆ ಯಾವುದೇ ರಾಜಕೀಯ ಪಕ್ಷವಾದರೂ ಸಂಘಟಕರನ್ನು ಜವಾಬ್ದಾರನ್ನಾಗಿ ಮಾಡಲಾಗುವುದು ಎಂದು ನ್ಯಾಯಪೀಠವು ಸ್ಪಷ್ಟಪಡಿಸಿದೆ.   

ಜಿಲ್ಲಾ ಚುನಾವಣಾಧಿಕಾರಿ ಪರ ವಾದಿಸಿದ ವಕೀಲರು, ಮೇ 6ರ ಶನಿವಾರ ಬೆಳಗ್ಗೆ 9ಗಂಟೆಯಿಂದ ಮಧ್ಯಾಹ್ನ 1.30ರ ವರೆಗೆ ಮತ್ತು ಮೇ 7ರಂದು ರವಿವಾರ ಬೆಳಗ್ಗೆ 9 ಗಂಟೆಯಿಂದ ಬೆಳಗ್ಗೆ 11.30ರ ವರೆಗೆ ರೋಡ್ ಶೋಗೆ ಮಾತ್ರ ಅನುಮತಿ ನೀಡಲಾಗಿದೆ ಎಂದು ಪೀಠಕ್ಕೆ ತಿಳಿಸಿದರು. 

ಅಗತ್ಯವಾದವರನ್ನು ಪಕ್ಷಕಾರರನ್ನಾಗಿಸಿಲ್ಲ ಎಂದು ನಾವು ಅರ್ಜಿ ವಿಚಾರಣೆಗೆ ನಿರಾಕರಿಸಬಹುದಿತ್ತು. ಆದರೂ, ಶನಿವಾರ ಹಾಗೂ ರವಿವಾರದ ಕಾರ್ಯಕ್ರಮವನ್ನು ನಿಬರ್ಂಧಿಸುವ ಯಾವುದೇ ಉದ್ದೇಶ ಹೊಂದಿಲ್ಲ ಎಂದು ಅರ್ಜಿದಾರರು ಹೇಳಿರುವ ಹಿನ್ನೆಲೆಯಲ್ಲಿ ಹಾಗೂ ಅವರು ನ್ಯಾಯಯುತ ನಿಯಂತ್ರಣ ಕ್ರಮ ಕೋರಿದ್ದಾರೆ. ಅರ್ಜಿಯಲ್ಲಿ ಸಾರ್ವಜನಿಕ ಹಿತಾಸಕ್ತಿಯ ಅಂಶಗಳು ಇರುವುದರಿಂದ ನಾವು ಅಂಥ ಗಂಭೀರ ಕ್ರಮಕ್ಕೆ ಮುಂದಾಗಿಲ್ಲ. ಈ ಮೂಲಕ ಅರ್ಜಿಯನ್ನು ಇತ್ಯರ್ಥಪಡಿಸಲಾಗಿದೆ ಎಂದು ಹೈಕೋರ್ಟ್ ನ್ಯಾಯಪೀಠವು ಆದೇಶದಲ್ಲಿ ತಿಳಿಸಿದೆ.

ರೋಡ್ ಶೋ ದಿನದಂದು ಪರೀಕ್ಷೆಗಳಿವೆಯೇ ಎಂದು ಹೈಕೋರ್ಟ್ ವಿಭಾಗೀಯ ಪೀಠ ಪ್ರಶ್ನಿಸಿದ್ದು, ರಾಜ್ಯದ 499 ಸೆಂಟರ್‍ಗಳಲ್ಲಿ ನೀಟ್ ಪರೀಕ್ಷೆ ನಡೆಯುತ್ತಿದೆ. ಬೆಂಗಳೂರಿನ 30 ಸೆಂಟರ್‍ಗಳಲ್ಲಿ ಪರೀಕ್ಷೆ ನಡೆಯುತ್ತಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಪೀಠಕ್ಕೆ ತಿಳಿಸಿದರು. 

ಮೇ 7ರ ಮಧ್ಯಾಹ್ನ 2ರಿಂದ ಸಂಜೆ 5.20ರ ವರೆಗೆ ಪರೀಕ್ಷೆ ನಡೆಯುತ್ತದೆ. ಮೇ 6ರಂದು ಯಾವುದೇ ಪರೀಕ್ಷೆ ನಿಗದಿ ಬಗ್ಗೆ ಮಾಹಿತಿಯಿಲ್ಲ ಎಂಬ ತುಷಾರ್ ಗಿರಿನಾಥ್ ಹೇಳಿಕೆಯನ್ನು ಹೈಕೋರ್ಟ್ ರೆಕಾರ್ಡ್ ಮಾಡಿಕೊಂಡಿದೆ. ಶನಿವಾರ ನಡೆಯುವ ಪರೀಕ್ಷೆಗಳ ಬಗ್ಗೆ ತಕ್ಷಣ ಮಾಹಿತಿ ಪಡೆಯಲು ಸೂಚನೆ ನೀಡಲಾಗಿದೆ. 

ವಿಚಾರಣೆ ವೇಳೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಖುದ್ದು ಹಾಜರಾಗಿ, ರ್ಯಾಲಿ ನಡೆಸುವ ದಿನ ನೀಟ್ ಪರೀಕ್ಷೆ(ರವಿವಾರ) ನಡೆಯಲಿದ್ದು, ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ. ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ನೋಡಿಕೊಳ್ಳಲು ಅಗತ್ಯ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಆಂಬ್ಯುಲೆನ್ಸ್ ಸಂಚಾರಕ್ಕೆ ತೊಂದರೆಯಾಗದಂತೆ ಕಂಟ್ರೋಲ್ ರೂಮ್‍ನಿಂದ ನಿರ್ವಹಣೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ವಿವರಿಸಿದರು.

ಹೆಚ್ಚುವರಿ ಅಡ್ವೊಕೇಟ್ ಜನರಲ್ ಅವರು ವಾದಿಸಿ, ಹಲವು ವರ್ಷಗಳಿಂದ ಪ್ರಚಾರದ ಭಾಗವಾಗಿ ಚುನಾವಣಾ ರ್ಯಾಲಿಗಳನ್ನು ನಡೆಸಲಾಗುತ್ತದೆ. ಇದುವರೆಗೆ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಚುನಾವಣೆ ಘೋಷಣೆಯಾದಾಗಿನಿಂದ 2,517 ರ್ಯಾಲಿಗಳು ನಡೆದಿದ್ದು, ಬೆಂಗಳೂರಿನಲ್ಲಿ 371 ರ್ಯಾಲಿಗಳು ನಡೆದಿವೆ. ಆದರೆ, ಒಂದೇ ಒಂದು ಅಹಿತಕರ ಘಟನೆ ವರದಿಯಾಗಿಲ್ಲ ಎಂದು ಪೀಠಕ್ಕೆ ಹೇಳಿದರು. 

Similar News