ಬಿ.ಸಿ.ರೋಡಿನಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ರೋಡ್ ಶೋ; ಬಿಜೆಪಿ ಪರ ಮತಯಾಚನೆ
ಬಂಟ್ವಾಳ : ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಅವರು ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಜೇಶ್ ನಾಯ್ಕ್ ಪರ ಬಿ.ಸಿ.ರೋಡಿನಲ್ಲಿ ರೋಡ್ ಶೋ ಮೂಲಕ ಮತಯಾಚನೆ ನಡೆಸಿದರು.
ಬಂಟ್ವಾಳದ ಬಸ್ತಿಪಡ್ಪು ಮೈದಾನದಕ್ಕೆ ಹೆಲಿಕಾಪ್ಟರ್ ನಲ್ಲಿ ಬಂದ ಅವರು ಝೀರೋ ಟ್ರಾಫಿಕ್ ನಲ್ಲಿ ಬಿ.ಸಿ.ರೋಡ್ ಕೈಕಂಬ ಪೊಳಲಿ ದ್ವಾರದ ಬಳಿಗೆ ತೆರಳಿ ಅಲ್ಲಿಂದ ರೋಡ್ ಶೋ ಮೂಲಕ ಬಿ.ಸಿ.ರೋಡ್ ಸರ್ವಿಸ್ ಬಸ್ ನಿಲ್ದಾಣದ ತನಕ ಸಾಗಿ ಬಂದು ಅಲ್ಲಿ ಸಾರ್ವಜನಿಕರನ್ನು ದ್ದೇಶಿಸಿ ಮಾತನಾಡಿದರು.
ಕನ್ನಡದಲ್ಲಿ ಭಾಷಣ ಆರಂಭಿಸಿದ ಆದಿತ್ಯನಾಥ್ ಅವರು ಪೊಳಲಿ ರಾಜರಾಜೇಶ್ವರಿ ದೇವಿಗೆ ನನ್ನ ನಮಸ್ಕಾರ ಗಳು, ಕಟೀಲು ದುರ್ಗಾಪರಮೇಶ್ವರಿ, ಪೊಳಲಿ ರಾಜರಾಜೇಶ್ವರಿಗೆ ಕೋಟಿ ಕೋಟಿ ನಮಸ್ಕಾರಗಳು, ಭಗವಾನ್ ಪರಶುರಾಮ ಭೂಮಿಗೆ ಕೋಟಿ ಕೋಟಿ ನಮಸ್ಕಾರಗಳು ಎಂದು ಹೇಳಿದರು.
ಕರ್ನಾಟಕ ಚುನಾವಣೆಯಲ್ಲಿ ಬಿಜೆಪಿ ವಿಕಾಸದ ಮೂಲಕ ನಿಮ್ಮ ಮುಂದೆ ಬಂದಿದೆ. ಕಾಂಗ್ರೆಸ್ ರಾಷ್ಟ್ರ ವಿರೋಧ ಮತ್ತು ನಕಾರಾತ್ಮಕ ವಿಷಯಗಳ ಮೂಲಕ ಬಂದಿದೆ. ಇವತ್ತು ಭಾರತವನ್ನು ಮೋದಿ ನೇತೃತ್ವದಲ್ಲಿ ಅಭಿವೃದ್ಧಿ ಪಡಿಸಲಾಗ್ತಿದೆ ಎಂದು ಹೇಳಿದರು.
ಅಭಿವೃದ್ಧಿ ಮತ್ತು ರಾಷ್ಟ್ರವಾದ ಗೆಲ್ಲಲು ವಿಧಾನಸಭೆ ಚುನಾವಣೆಯಲ್ಲಿ ರಾಜೇಶ್ ನಾಯ್ಕ್ ರನ್ನ ಗೆಲ್ಲಿಸಿ ಎಂದು ಅವರು ಜನವರಿಯಲ್ಲಿ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆ ಆಗಲಿದೆ. ಭಜರಂಗಿ ಜನ್ಮಸ್ಥಳದ ಕರ್ನಾಟಕದ ಜನರಿಗೆ ಆಮಂತ್ರಣ ನೀಡ್ತಾ ಇದೀನಿ. ಇಡೀ ಉತ್ತರ ಪ್ರದೇಶ ನಿಮ್ಮನ್ನ ರಾಮನ ಜನ್ಮ ಭೂಮಿಗೆ ಸ್ವಾಗತಿಸುತ್ತಿದೆ ಎಂದು ಹೇಳಿದರು.
ಈ ಸಂದರ್ಭ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಜಿಲ್ಲಾಧ್ಯಕ್ಷ ಸುದರ್ಶನ್, ಬಂಟ್ವಾಳ ಮಂಡಲ ಅಧ್ಯಕ್ಷ ದೇವಪ್ಪ ಪೂಜಾರಿ ಬಂಟ್ವಾಳ ಅಭ್ಯರ್ಥಿ ರಾಜೇಶ್ ನಾಯ್ಕ್ ಸಹಿತ ಪಕ್ಷದ ಹಿರಿಯ, ಕಿರಿಯ ಮುಖಂಡರು ಹಾಗೂ ಸಾವಿರಾರು ಮಂದಿ ಕಾರ್ಯಕರ್ತರು ಭಾಗವಹಿಸಿದ್ದರು.
ಇನ್ನು ಬಂಟ್ವಾಳ ರೋಡ್ ಶೋ ಮುಗಿಸಿ ಕತ್ತಲಾದ ಹಿನ್ನೆಲೆ ಹೆಲಿಕಾಪ್ಟರ್ ಬದಲು ರಸ್ತೆ ಮಾರ್ಗವಾಗಿ ಆದಿತ್ಯನಾಥ್ ಅವರು ಮಂಗಳೂರು ವಿಮಾನ ನಿಲ್ದಾಣದತ್ತ ತೆರಳಿದರು.