ವಿಪಕ್ಷ ಏಕತೆಯಲ್ಲಿ ನಿತೀಶ್ ಪಾತ್ರ ನಿರ್ಧರಿಸಲಿರುವ ಕರ್ನಾಟಕ ಚುನಾವಣೆ!

Update: 2023-05-07 02:10 GMT

ಪಾಟ್ನಾ: ಬಿಹಾರದಲ್ಲಿ ಆಡಳಿತಾರೂಢ ಜೆಡಿಯು ಕರ್ನಾಟಕ ಚುನಾವಣೆಯಲ್ಲಿ ಸ್ಪರ್ಧಿಸಿಲ್ಲ. ಆದರೆ ಬಿಜೆಪಿಯೇತರ ವಿರೋಧ ಪಕ್ಷಗಳ ಪ್ರಥಮ ಸಭೆಯನ್ನು ಆಯೋಜಿಸುವ ನಿಟ್ಟಿನಲ್ಲಿ ಜೆಡಿಯು ಮುಖಂಡರು ಕರ್ನಾಟಕ ವಿಧಾನಸಭಾ ಚುನಾವಣಾ ಫಲಿತಾಂಶವನ್ನು ಕಾತರದಿಂದ ಎದುರು ನೋಡುತ್ತಿದ್ದಾರೆ.

ಕರ್ನಾಟಕದ ಫಲಿತಾಂಶ ಮೇ 13ರಂದು ಪ್ರಕಟವಾದ ಬಳಿಕ ವಿರೋಧ ಪಕ್ಷಗಳ ಮುಖಂಡರ ಮೊದಲ ಸಭೆ ನಡೆಯಲಿದೆ ಎಂಬ ಬಗ್ಗೆ ನಿತೀಶ್ ಸುಳಿವು ನೀಡಿದ್ದಾರೆ. ಮೇ ತಿಂಗಳ ಕೊನೆಯ ವಾರ ಈ ಸಭೆ ಆಯೋಜಿಸಲು ಪಕ್ಷದ ನಾಯಕತ್ವ ಚಿಂತನೆ ನಡೆಸಿದೆ. ಆದರೆ ದಿನಾಂಕ ಹಾಗೂ ಸ್ಥಳ ಇನ್ನೂ ನಿಗದಿಯಾಗಿಲ್ಲ ಎಂದು ಪಕ್ಷದ ಮೂಲಗಳು ಸ್ಪಷ್ಟಪಡಿಸಿವೆ.

ನಿತೀಶ್ ಹಾಗೂ ಅವರ ಸಂಪುಟದ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್, ಪ್ರಮುಖ ವಿರೋಧ ಪಕ್ಷಗಳ ಮುಖಂಡರನ್ನು ಅದರಲ್ಲೂ ಮುಖ್ಯವಾಗಿ ಬಿಜು ಜನತಾ ದಳದ ಮುಖ್ಯಸ್ಥ ಹಾಗೂ ಒಡಿಶಾ ಸಿಎಂ ನವೀನ್ ಪಟ್ನಾಯಕ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ. 2024ರ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಪ್ರಾದೇಶಿಕ ಪಕ್ಷಗಳನ್ನು ಒಗ್ಗೂಡಿಸುವ ಕಾರ್ಯತಂತ್ರದ ಬಗ್ಗೆ ಚರ್ಚಿಸಲಿದ್ದಾರೆ ಎನ್ನಲಾಗಿದೆ.

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಚುನಾವಣಾ ಪೂರ್ವ ಸಮೀಕ್ಷೆಗಳು ಅಂದಾಜಿಸಿದಂತೆ ಕಾಂಗ್ರೆಸ್ ಪಕ್ಷ ಜಯ ಸಾಧಿಸಿದಲ್ಲಿ ವಿರೋಧ ಪಕ್ಷಗಳನ್ನು ಮುನ್ನಡೆಸಲು ನಿತೀಶ್ ಅವರಿಗೆ ಸ್ವತಂತ್ರ ಅಧಿಕಾರ ಅಸಾಧ್ಯ ಎನ್ನುವುದು ಜೆಡಿಯು ಲೆಕ್ಕಾಚಾರ. ಬಿಜೆಪಿ ಜಯ ಸಾಧಿಸಿದಲ್ಲಿ, ವಿರೋಧ ಪಕ್ಷಗಳ ಚಾಲಕ ಸ್ಥಾನವನ್ನು ಕಾಂಗ್ರೆಸ್ ಪಕ್ಷ ಸುಲಭವಾಗಿ ನಿತೀಶ್ ಕೈಗೆ ನೀಡಬಹುದು ಎನ್ನುವುದು ರಾಜಕೀಯ ಪಂಡಿತರ ಲೆಕ್ಕಾಚಾರ. ಆದ್ದರಿಂದ ಜೆಡಿಯು ನಾಯಕರು ಫಲಿತಾಂಶವನ್ನು ಕಾತರದಿಂದ ಕಾಯುತ್ತಿದ್ದಾರೆ.

ಆದರೆ ಕಾಂಗ್ರೆಸ್ ಪಕ್ಷ ಕರ್ನಾಟಕ ಚುನಾವಣೆಯನ್ನು ಗೆಲ್ಲಲಿದೆ. ಇದು ಬಿಜೆಪಿಯ ಪ್ರಾಬಲ್ಯ ಪತನದ ಆರಂಭ. ಕಾಂಗ್ರೆಸ್ ಪಕ್ಷದ ನಿರೀಕ್ಷಿತ ಗೆಲುವು ವಿರೋಧ ಪಕ್ಷಗಳ ನೈತಿಕ ಬಲವನ್ನು ಹೆಚ್ಚಿಸಲಿದೆ ಮಾತ್ರವಲ್ಲದೇ ಬಿಜೆಪಿಯೇತರ ಪಕ್ಷಗಳ ಏಕತೆಗೆ ಕೂಡಾ ಪೂರಕ ಎಂದು ಜೆಡಿಯು ರಾಷ್ಟ್ರೀಯ ವಕ್ತಾರ ರಜಿಬ್ ರಾಜನ್ ಹೇಳಿದ್ದಾರೆ.

Similar News