ಐಪಿಎಲ್: ಗಿಲ್, ಸಹಾ ಭರ್ಜರಿ ಬ್ಯಾಟಿಂಗ್, ಗುಜರಾತ್‌ಗೆ 56 ರನ್ ಜಯ

Update: 2023-05-07 14:04 GMT

  ಅಹಮದಾಬಾದ್, ಮೇ 7: ಆರಂಭಿಕ ಬ್ಯಾಟರ್ ಶುಭಮನ್ ಗಿಲ್(94 ರನ್, 51 ಎಸೆತ) ಹಾಗೂ ವೃದ್ದಿಮಾನ್ ಸಹಾ(81 ರನ್, 43 ಎಸೆತ)ಭರ್ಜರಿ ಅರ್ಧಶತಕ, ಮೋಹಿತ್ ಶರ್ಮಾ(4-29) ನೇತೃತ್ವದಲ್ಲಿ ಬೌಲರ್‌ಗಳ ಸಂಘಟಿತ ಬೌಲಿಂಗ್ ದಾಳಿಯ ನೆರವಿನಿಂದ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ತಂಡ ಲಕ್ನೊ ಸೂಪರ್ ಜೈಂಟ್ಸ್ ತಂಡವನ್ನು 56 ರನ್ ಅಂತರದಿಂದ ಹೀನಾಯವಾಗಿ ಸೋಲಿಸಿತು.
 
  ಗುಜರಾತ್ ತಾನಾಡಿದ 11ನೇ ಪಂದ್ಯದಲ್ಲಿ 8ನೇ ಗೆಲುವು ಗಳಿಸಿ 16 ಅಂಕದೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಲಕ್ನೊ ತಂಡ 11ನೇ ಪಂದ್ಯದಲ್ಲಿ 5ನೇ ಸೋಲು ಅನುಭವಿಸಿ 3ನೇ ಸ್ಥಾನದಲ್ಲಿದೆ.

ರವಿವಾರ ನಡೆದ 51ನೇ ಐಪಿಎಲ್ ಪಂದ್ಯದಲ್ಲಿ ಗೆಲ್ಲಲು 228 ರನ್ ಕಠಿಣ ಗುರಿ ಬೆನ್ನಟ್ಟಿದ ಲಕ್ನೊ ತಂಡ 20 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 171 ರನ್ ಗಳಿಸಿ ಸೋಲೊಪ್ಪಿಕೊಂಡಿತು.

ಲಕ್ನೊದ ಪರ ಆರಂಭಿಕ ಬ್ಯಾಟರ್ ಕ್ವಿಂಟನ್ ಡಿಕಾಕ್(70 ರನ್, 41 ಎಸೆತ) ಅಗ್ರ ಸ್ಕೋರರ್ ಎನಿಸಿಕೊಂಡರು. ಕೈಲ್ ಮೇಯರ್ಸ್ (48 ರನ್, 32 ಎಸೆತ) ಜೊತೆಗೆ ಮೊದಲ ವಿಕೆಟ್‌ನಲ್ಲಿ 88 ರನ್ ಸೇರಿಸಿ ಬಿರುಸಿನ ಆರಂಭ ನೀಡಿದರು. ಆದರೆ ಈ ಇಬ್ಬರ ಹೊರತಾಗಿ ಉಳಿದವರು ತಂಡದ ಗೆಲುವಿಗೆ ಕೊಡುಗೆ ನೀಡಲಿಲ್ಲ. ಆಯೂಷ್ ಬದೋನಿ(21 ರನ್, 11 ಎಸೆತ)ಎರಡಂಕೆಯ ಸ್ಕೋರ್ ಗಳಿಸಿದರು.

ಗುಜರಾತ್ ಪರ ಮೋಹಿತ್ ಶರ್ಮಾ(4-29)ಯಶಸ್ವಿ ಬೌಲರ್ ಎನಿಸಿಕೊಂಡರು. ನೂರ್ ಅಹ್ಮದ್(1-26), ರಶೀದ್ ಖಾನ್(1-34) ಹಾಗೂ ಮುಹಮ್ಮದ್ ಶಮಿ(1-37) ತಲಾ ಒಂದು ವಿಕೆಟ್‌ಗಳನ್ನು ಪಡೆದರು.

ಗುಜರಾತ್ 227/2: ಇದಕ್ಕೂ ಮೊದಲು ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ನಿಗದಿತ 20 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 227 ರನ್ ಕಲೆ ಹಾಕಿತು.

 ಇನಿಂಗ್ಸ್ ಆರಂಭಿಸಿದ ಗಿಲ್ ಹಾಗೂ ಸಹಾ ಮೊದಲ ವಿಕೆಟ್‌ಗೆ 142 ರನ್ ಗಳಿಸಿ ಭದ್ರ ಬುನಾದಿ ಹಾಕಿಕೊಟ್ಟರು. ಸಹಾ(81 ರನ್, 43 ಎಸೆತ, 10 ಬೌಂಡರಿ, 4 ಸಿಕ್ಸರ್) ವಿಕೆಟನ್ನು ಪಡೆದ ಅವೇಶ್ ಖಾನ್(1-34) ಈ ಜೋಡಿಯನ್ನು ಬೇರ್ಪಡಿಸಿದರು. ನಾಯಕ ಹಾರ್ದಿಕ್ ಪಾಂಡ್ಯ 25 ರನ್ ಗಳಿಸಿ ಔಟಾದರು. ಔಟಾಗುವ ಮೊದಲು ಗಿಲ್ ಜೊತೆಗೆ 2ನೇ ವಿಕೆಟಿಗೆ 42 ರನ್ ಸೇರಿಸಿದರು.

ಗಿಲ್(ಔಟಾಗದೆ 94 ರನ್, 51 ಎಸೆತ, 2 ಬೌಂಡರಿ, 7 ಸಿಕ್ಸರ್) ಹಾಗೂ ಡೇವಿಡ್ ಮಿಲ್ಲರ್(ಔಟಾಗದೆ 21 ರನ್, 12 ಎಸೆತ)3ನೇ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 43 ರನ್ ಸೇರಿಸಿ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು.

ಖಾಯಂ ನಾಯಕ ಕೆ.ಎಲ್.ರಾಹುಲ್ ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸಿದ ಕೃನಾಲ್ ಪಾಂಡ್ಯ 8 ಬೌಲರ್‌ಗಳನ್ನು ದಾಳಿಗೆ ಇಳಿಸಿದರೂ ಗುಜರಾತ್ ಬ್ಯಾಟರ್‌ಗಳನ್ನು ಕಟ್ಟಿಹಾಕಲು ಸಾಧ್ಯವಾಗಲಿಲ್ಲ
 

Similar News