ದಿನೇಶ್ ಅಮೀನ್ ಮಟ್ಟು ವಿರುದ್ಧದ ಎಫ್‌ಐಆರ್ ಹಿಂಪಡೆಯುವಂತೆ ಸಮಾನ ಮನಸ್ಕರ ಒಕ್ಕೂಟ ಒತ್ತಾಯ

Update: 2023-05-08 14:07 GMT

ಬೆಂಗಳೂರು: 'ಹಿರಿಯ ಪತ್ರಕರ್ತ, ಚಿಂತಕರು ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರ ಮಾಧ್ಯಮ ಸಲಹೆಗಾರರಾಗಿದ್ದ ದಿನೇಶ್ ಅಮೀನ್ ಮಟ್ಟು ಸೇರಿ ಕೆಲವರ ವಿರುದ್ಧ ಸುಳ್ಳು ಸುದ್ದಿ ಪ್ರಚಾರ ಮಾಡಿದ್ದಾರೆ ಎನ್ನುವ ದೂರನ್ನು ಆಧರಿಸಿ ಎಫ್‌ಐಆರ್ ದಾಖಲಿಸಲಾಗಿದ್ದು, ಇದು ದುರುದ್ದೇಶಪೂರಿತ ಮತ್ತು ಹಗೆತನದ ರಾಜಕಾರಣ' ಎಂದು ಸಮಾನ ಮನಸ್ಕರ ಒಕ್ಕೂಟ ಆರೋಪಿಸಿದೆ. 

ಈ ಸಬಂಧ ಚುನಾವಣಾ ಆಯುಕ್ತರು ಹಾಗೂ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಪತ್ರ ಬರೆದಿರುವ ಸಮಾನ ಮನಸ್ಕರ ಒಕ್ಕೂಟ, 'ಇತ್ತೀಚೆಗೆ ದಿನೇಶ್ ಅಮೀನ್ ಮಟ್ಟು, ಕನ್ನಡ ಪರ ಹೋರಾಟಗಾರ ಬಿ. ಹರೀಶ್‌ ಕುಮಾರ್‌ ಭೈರಪ್ಪ, ಹೇಮಂತ್‌ಕುಮಾರ್, ಬಿಂದುಗೌಡ, ದಿಲೀಪ್‌ ಗೌಡ ಅವರ ಮೇಲೆ ಬಿ.ಎಲ್ ಸಂತೋಷ್ ವಿರುದ್ಧ ಸುಳ್ಳು ಸುದ್ದಿ ಪ್ರಚಾರ ಮಾಡಿದ್ದಾರೆ ಎನ್ನುವ ದೂರನ್ನು ಆಧರಿಸಿ ಎಫ್‌ಐಆರ್ ದಾಖಲಿಸಲಾಗಿದೆ. ವಾಸ್ತವವಾಗಿ, ದಿನೇಶ್ ಮತ್ತಿತರರು ತಮ್ಮ ಫೇಸ್ ಬುಕ್‌ನಲ್ಲಿ 'ಬಿ.ಎಲ್. ಸಂತೋಷ್ ಮಾತನಾಡಿದ್ದಾರೆ ಎಂದು ಹೇಳಲಾಗುವ' ವರದಿಯನ್ನು ಪೋಸ್ಟ್ ಮಾಡಿ ''ಇದು ನಿಜವೇ, ಅಲ್ಲವೇ ಎಂದು ಸಂತೋಷ್ ಅವರು ಸ್ಪಷ್ಟಿಕರಣ ಕೊಡಲಿ'' ಎಂದು ಹೇಳಿದ್ದಾರೆ. ತಮಗಿರುವ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಬಳಸಿಕೊಂಡು ಪ್ರಶ್ನೆ ಮಾಡಿದ್ದಾರೆ. ಎಲ್ಲಿಯೂ ಆ ವರದಿಯನ್ನು ಸಮರ್ಥನೆ ಮಾಡಿಲ್ಲ ಮತ್ತು ನಿಜ ಎಂದು ಪ್ರಚಾರ ಮಾಡಿರುವುದಿಲ್ಲ' ಎಂದು ಸ್ಪಷ್ಟಪಡಿಸಿದೆ. 

ಯಾವುದೇ ಆಯಾಮದಿಂದ ನೋಡಿದರೂ ದಿನೇಶ್ ಮತ್ತಿತರರ ಮೇಲಿನ ದೂರು ಸುಳ್ಳು, ಸತ್ಯಕ್ಕೆ ದೂರವಾಗಿದೆ ಎನ್ನುವುದು ಸ್ಪಷ್ಟವಾಗುತ್ತದೆ. ಆದ್ದರಿಂದ ತಕ್ಷಣ ದಿನೇಶ್ ಮತ್ತು ಹರೀಶ್ ಇನ್ನಿತರರ ಮೇಲಿರುವ ಎಫ್‌ಐಆರ್‌ನ್ನು ಹಿಂಪಡೆಯಬೇಕು ಎಂದು ಸಮಾನ ಮನಸ್ಕರ ಒಕ್ಕೂಟ ಒತ್ತಾಯಿಸಿದೆ.

ಚಿತ್ತಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಣಿಕಂಠ, ‘ಖರ್ಗೆ ಕುಟುಂಬವನ್ನು ಸಾಫ್ ಮಾಡುತ್ತೇನೆ’ ಎಂದು ಹೇಳುವ ಆಡಿಯೋದ ವಿವರಗಳು ಮಾಧ್ಯಮಗಳಲ್ಲಿ ಪ್ರಸಾರವಾಗಿವೆ. ಕೊಲೆ ಮಾಡುತ್ತೇನೆಂದು ಬೆದರಿಕೆ ಹಾಕಿದ್ದಾರೆ. ವಿಜಯಪುರ ನಗರದ ಅಭ್ಯರ್ಥಿ ಬಸವರಾಜ ಪಾಟೀಲ್ ಯತ್ನಾಳ್ ಅವರು ಜನರನ್ನು ಪ್ರಚೋದಿಸುವ ಹೇಳಿಕೆ ನೀಡಿದ್ದಾರೆ. ಬಿಜೆಪಿ ಮುಖಂಡರು ‘ಸಿದ್ರಾಮುಲ್ಲಾಖಾನ್’ ಎಂದು ಸಿದ್ದರಾಮಯ್ಯನವರನ್ನು ಅವಹೇಳನ ಮಾಡಿದ್ದಾರೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ‘ಬಿಜೆಪಿಗೆ ಮತ ಹಾಕದಿದ್ದರೆ ಕೇಂದ್ರದ ಎಲ್ಲ ಅನುದಾನಗಳನ್ನು ನಿಲ್ಲಿಸುತ್ತೇನೆ’ ಎಂದು ರಾಜ್ಯದ ಮತದಾರರಿಗೆ ಬ್ಲಾಕ್‍ಮೇಲ್ ಮಾಡಿದ್ದಾರೆ. ಇವರುಗಳ ಮೇಲೆ ಆಯೋಗ ಮತ್ತು ಪೊಲೀಸ್ ಇಲಾಖೆ ಕ್ರಮ ತೆಗೆದುಕೊಂಡು, ಎಫ್‍ಐಆರ್ ಹಾಕಿ ಬಂಧಿಸಬೇಕಾಗಿತ್ತು. ಆದರೆ, ಈ ಕುರಿತು ಮೌನವಾಗಿದ್ದು, ಸಾಂವಿಧಾನಿಕವಾಗಿ ಪ್ರಶ್ನಿಸಿದ ದಿನೇಶ್ ಮತ್ತು ಇತರರ ವಿರುದ್ಧ ಎಫ್‍ಐಆರ್ ಹಾಕಿರುವುದು ಖಂಡನೀಯ ಎಂದು ಒಕ್ಕೂಟ ಅಸಮಾಧಾನ ವ್ಯಕ್ತಪಡಿಸಿದೆ. 

 

Similar News