ಚುನಾವಣಾ ತರಬೇತಿ ವೇಳೆ ಬೇಜವಾಬ್ದಾರಿತನ: ಮಹಿಳಾ ಇನ್‌ಸ್ಪೆಕ್ಟರ್‌ ಅಮಾನತು

Update: 2023-05-09 15:04 GMT

ಬೆಂಗಳೂರು, ಮೇ 9: ಚುನಾವಣಾ ತರಬೇತಿ ವೇಳೆಯಲ್ಲಿ ಉದ್ಧಟತನ ಹಾಗೂ ಬೇಜವಾಬ್ದಾರಿತನದಿಂದ ವರ್ತಿಸಿದ ಇನ್‌ಸ್ಪೆಕ್ಟರ್‌ ಭವ್ಯ ಎಸ್.ಎಸ್. ಅವರನ್ನು ಅಮಾನತ್ತುಗೊಳಿಸಿ ಜಿಲ್ಲಾ ಚುನಾವಣಾ ಅಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

ಮೇ 4ರಂದು ಗೋವಿಂದರಾಜನಗರ ಕ್ಷೇತ್ರದಲ್ಲಿ ಚುನಾವಣಾ ಕರ್ತವ್ಯಕ್ಕೆ ಹಾಜರಾಗುವ ಸಿಬ್ಬಂದಿಗೆ ತರಬೇತಿಯನ್ನು ನೀಡಲಾಗುತ್ತಿತ್ತು. ಈ ತರಬೇತಿಯಲ್ಲಿ ಭವ್ಯ ಎಸ್.ಎಸ್ ಅವರು ಹಿಂದಿನ ಸಾಲಿನಲ್ಲಿ ಕುಳಿತು ದಿನಪತ್ರಿಕೆಯನ್ನು ಓದುತ್ತಿದ್ದರು. ಈ ಸಮಯದಲ್ಲಿ ನೋಡಲ್ ಅಧಿಕಾರಿಗಳು ಅವರನ್ನು ಪ್ರಶ್ನಿಸಿದಾಗ, ನೋಡಲ್ ಅಧಿಕಾರಿಗಳಿಗೆ ಬೇಜವಾಬ್ದಾರಿತನದ ಉತ್ತರ ನೀಡಿದ್ದಾರೆ. ಇದು ಚುನಾವಣಾ ಕಾರ್ಯಕ್ಕೆ ಉಂಟು ಮಾಡಿರುವ ಅಡಚಣೆಯಾಗಿದೆ. 

ಹಾಗಾಗಿ ಭವ್ಯ ಎಸ್.ಎಸ್. ಅವರನ್ನು ಪ್ರಜಾಪ್ರತಿನಿಧಿ ಕಾಯ್ದೆ 1951ರ ಪ್ರಕಾರ ಅಮಾನತ್ತು ಮಾಡಲಾಗಿದೆ. ಅವರು ಮೇಲಾಧಿಕಾರಿಗಳ ಅನುಮತಿಯನ್ನು ಪಡೆಯದೆ ಕೇಂದ್ರ ಸ್ಥಾನವನ್ನು ಬಿಡುವಂತಿಲ್ಲ ಹಾಗೂ ಅಧಿಕಾರಿಗಳು ಅಮಾನತ್ತಿನ ಅವಧಿಯ ಭತ್ಯೆ ಪಡೆಯಲು ಅರ್ಹರಾಗಿರುತ್ತಾರೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. 

Similar News